- ಮೂವರು ಎಂಜಿನಿಯರ್‌ಗಳು ಸೇರಿದಂತೆ 7 ಆರೋಪಿಗಳ ವಿರುದ್ಧ ನಗರ ಠಾಣೆಗೆ ದೂರು
ಕಾಮಗಾರಿ ನಡೆಸದೇ ಸುಳ್ಳು ದಾಖಲೆಗಳನ್ನು ಸೃಷ್ಠಿಸಿ ಹಾಗೂ ಕಾಮಗಾರಿ ವಿಸ್ತೀರ್ಣ ಹೆಚ್ಚಿಸಿ, ನಗರಸಭೆಯಿಂದ ಸುಮಾರು ₹1 ಕೋಟಿಯಷ್ಟು ಮೊತ್ತ ಪಡೆದು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಮೂವರು ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 7 ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಗರಸಭೆಯಲ್ಲಿ ಈ ಹಿಂದೆ ಸಹಾಯಕ ಎಂಜಿನಿಯರ್ ಆಗಿದ್ದ ಅಬ್ದುಲ್ ಹಮೀದ್, ಕಿರಿಯ ಎಂಜಿನಿಯರ್ ನೌಷಾದ್ ಎಚ್.ಟಿ. (ಈಗ ನಿವೃತ್ತ), ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿರಾದರ್ ಎಸ್.ಎಸ್. (ಈಗ ನಿವೃತ್ತ), ಗುತ್ತಿಗೆದಾರರಾದ ಮಹೇಶ್ ಜಿ.ಬಿ., ರಾಘವೇಂದ್ರ ಎಚ್., ಥರ್ಡ್ ಪಾರ್ಟಿ ಎಕ್ಸ್‌ಪರ್ಟ್ ದಾವಣಗೆರೆಯ ವಿಶಾಲ್ ಟೆಕ್ನೊಕಾನ್ ಸಂಸ್ಥೆಯ ದೀಪಕ್ ಎಸ್. ಮತ್ತು ಕಲಬುರ್ಗಿಯ ಬಾಲಾಜಿ ಟೆಕ್ನಿಕಲ್ ಕನ್ಸಲ್ಟೆಂಟ್ಸ್ ಸಂಸ್ಥೆಯ ವೇದಮೂರ್ತಿ ಆರೋಪಿಗಳು.2020ರ ಮೇ 20ರಿಂದ 2021ರ ನ.4ರ ಅವಧಿಯಲ್ಲಿ ಆರೋಪಿತರು ಈ ಕೃತ್ಯ ಎಸಗಿದ್ದಾರೆ ಎಂದು ಎಫ್‍ಐಆರ್‌ನಲ್ಲಿ ತಿಳಿಸಲಾಗಿದೆ. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ಮೇರೆಗೆ ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಠಾಣೆಗೆ ದೂರು ಸಲ್ಲಿಸಿದ್ದರು.
ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶದಿಂದ ಆರೋಪಿಗಳು ಪರಸ್ಪರ ಶಾಮೀಲಾಗಿ ನಗರದ ಜೆ.ಸಿ. ಬಡಾವಣೆ 1ನೇ ಕ್ರಾಸ್‍ನ ಕನ್ಸರ್‍ವೆನ್ಸಿಯಲ್ಲಿ 58 ಮೀ. ಸಿಸಿ ಚರಂಡಿ ನಿರ್ಮಿಸಿ 98 ಮೀ. ಕಾಮಗಾರಿ ಎಂದು ಸುಳ್ಳು ದಾಖಲೆ ಸೃಷ್ಟಿಸಿದ್ದರು. ಹಾಗೆಯೇ ವಾರ್ಡ್ ನಂ.1, 12, 13, 14, 19, 22, 23, 24, 25, 27 (ಎರಡು ಕಡೆ), 28 (ನಾಲ್ಕು ಕಡೆ), 29, ಎಪಿಎಂಸಿ ಆವರಣದ ಹಮಾಲರ ಬಡಾವಣೆ, ಜೆ.ಸಿ. ಬಡಾವಣೆ 2ನೇ ಮೇನ್, ಭರಂಪುರ ಹೀಗೆ 19 ಕಡೆ ಕಿರುನೀರು ಸರಬರಾಜು ಟ್ಯಾಂಕು ನಿರ್ಮಾಣ ಹಾಗೂ ಪೈಪ್‍ಲೈನ್ ಅಳವಡಿಕೆ ಮಾಡಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಠಿಸಿ ವಂಚನೆ ಎಸಗಿದ್ದಾರೆ. ಈ ಎಲ್ಲ ಸುಳ್ಳು ಕಾಮಗಾರಿಗಳಿಂದಾಗಿ ಸರ್ಕಾರಕ್ಕೆ ₹96,51,961 ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿತರ ವಿರುದ್ಧ ದಾಖಲಿಸಿರುವ ಭಾರತೀಯ ದಂಡ ಸಂಹಿತೆಯ 406, 409, 417, 420, 465, 468 ಕಲಂಗಳಡಿ ಆರೋಪ ಸಾಬೀತಾದರೆ ಆರೋಪಿಗಳಿಗೆ 10 ವರ್ಷಗಳವರೆಗೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ.
ಗುತ್ತಿಗೆದಾರ ಮೊಹ್ಮದ್ ಮಜಹರ್ ನಗರಸಭೆಯ ಈ ಹಗರಣ ಹೊರಬರಲು ಕಾರಣರಾಗಿದ್ದಾರೆ. ವರ್ಷದ ಹಿಂದೆ ಅವರು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಡಿ.ಸಿ. ಅವರು ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ತನಿಖೆಯಲ್ಲಿ ಅಕ್ರಮ ಎಸಗಿರುವುದು ಕಂಡುಬಂದಿತ್ತು. ಇದನ್ನು ಆಧರಿಸಿ ದೂರು ನೀಡಲು ಪೌರಾಯುಕ್ತರಿಗೆ ಡಿಸಿ ಸೂಚಿಸಿದ್ದರು.
- - -