ಡಾ.ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತುವಾರಿ ನಿಭಾಯಿಸಲಾಗದು: ಎಚ್‌.ವಿಶ್ವನಾಥ್‌

KannadaprabhaNewsNetwork |  
Published : Aug 13, 2026, 01:15 AM IST
37 | Kannada Prabha

ಸಾರಾಂಶ

ಇಷ್ಟೊಂದು ದೊಡ್ಡ ಜಿಲ್ಲೆಯನ್ನು ನಿಭಾಯಿಸಲು ಯತೀಂದ್ರನಿಗೆ ಸಾಧ್ಯವಿಲ್ಲ. ನಮ್ಮಪ್ಪ ಮಹಾರಾಜರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆಂದ ಯತೀಂದ್ರನಿಂದ ಮೈಸೂರು ಜಿಲ್ಲೆ ನಿಭಾಯಿಸುವುದು ಕಷ್ಟ. ಅನುಭವಿ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಕೊಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಮ್ಮ ಅಪ್ಪ ಮೈಸೂರು ಮಹಾರಾಜರಿಗಿಂತ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದ್ದವನಿಗೆ ಮೈಸೂರು ಜಿಲ್ಲೆ ಉಸ್ತುವಾರಿ ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ವಿಶ್ವನಾಥ್‌ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಷ್ಟೊಂದು ದೊಡ್ಡ ಜಿಲ್ಲೆಯನ್ನು ನಿಭಾಯಿಸಲು ಯತೀಂದ್ರನಿಗೆ ಸಾಧ್ಯವಿಲ್ಲ. ನಮ್ಮಪ್ಪ ಮಹಾರಾಜರಿಗಿಂತ ಹೆಚ್ಚು ಕೆಲಸ ಮಾಡಿದ್ದಾರೆಂದ ಯತೀಂದ್ರನಿಂದ ಮೈಸೂರು ಜಿಲ್ಲೆ ನಿಭಾಯಿಸುವುದು ಕಷ್ಟ. ಅನುಭವಿ ತನ್ವೀರ್ ಸೇಠ್‌ಗೆ ಮಂತ್ರಿ ಸ್ಥಾನ ಕೊಡಬೇಕು ಎಂದರು.

ಹಿಂದುಳಿದ ವರ್ಗಗಳ ವರದಿ ಮೇಲೆ 10 ವರ್ಷ ಮಲಗಿದ್ದ ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯುವ ಕೊನೇ ದಿನ ಆಯೋಗದ ವರದಿ ಸ್ವೀಕರಿಸಿದರು. ಜನರು ಪೆದ್ದರಲ್ಲ. ಸಿದ್ದರಾಮಯ್ಯ ಒಬ್ಬರಿಗೂ ಒಂದು ನಿವೇಶನ ಕೊಡಲಿಲ್ಲ. ಮುಡಾದಲ್ಲಿ 80 ಸಾವಿರ ಅರ್ಜಿಗಳು ವಿಲೇವಾರಿ ಆಗಬೇಕಿದೆ ಎಂದರು.

ಸಿದ್ದರಾಮಯ್ಯ ಅವರನ್ನು ಅರಸುಗೆ ಹೋಲಿಕೆ ಮಾಡಿ ಕೆಲವರು ಹೊಗಳುತ್ತಿದ್ದಾರೆ. ಆದರೆ, ಅರಸು ಪಾದದ ಧೂಳಿಗೂ ಸಿದ್ದರಾಮಯ್ಯ ಸಮ ಅಲ್ಲ. 5 ಕೆಜಿ ಅಕ್ಕಿ ಕೊಟ್ಟಿದ್ದನ್ನೇಂದು ಹೇಳುತ್ತಿದ್ದಾರೆ. ಅರಸು 21 ಲಕ್ಷ ಎಕರೆ ಭೂಮಿಯನ್ನು ಹಂಚಿದರು. ನಿಜವಾದ ಅನ್ನರಾಮಯ್ಯ ದೇವರಾಜ ಅರಸು. ಅಕ್ಷರ- ಆರೋಗ್ಯವನ್ನು ಜನರಿಗೆ ತಲುಪಿಸಿದ ಕೀರ್ತಿ ಅರಸುಗೆ ಸಲ್ಲುತ್ತದೆ ಎಂದರು.

ರಾಜ್ಯ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆದರಿಕೆ ಹಾಗೂ ಹಸ್ತಕ್ಷೇಪ ಹೆಚ್ಚಾಗಿದೆ. ಸರ್ಕಾರ ರಚನೆಯಾಗಿ ಎರಡೂವರೆ ತಿಂಗಳಾದರೂ ಖಾತೆ ಹಂಚಿಕೆ ಮಾಡದಿರುವ ಹೈಕಮಾಂಡ್ ನಡೆ ಖಂಡನೀಯ. ಡಿ.ಕೆ. ಶಿವಕುಮಾರ್ ಮುಕ್ತವಾಗಿ ಆಡಳಿತ ನಡೆಸಲು ಅವಕಾಶ ನೀಡಬೇಕು. ಮಹಿಳೆಯರಿಲ್ಲದ ಕ್ಯಾಬಿನೆಟ್‌ ಗೆ ಸಿದ್ದರಾಮಯ್ಯ ನೇರ ಕಾರಣ. ಕಾಂಗ್ರೆಸ್ ಹೈಕಮಾಂಡ್ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಸಿದ್ದರಾಮಯ್ಯ ಗಾಯತ್ರಿ ಬಗ್ಗೆ ಅಸಹ್ಯಕರವಾಗಿ ಮಾತಾಡಿ ಕಳುಹಿಸಿದ್ದಾರೆ ಎಂದು ಅವರು ದೂರಿದರು.

ಸಿದ್ದರಾಮಯ್ಯ ಕುರುಬರು ಮತ್ತು ಕರ್ನಾಟಕದ ಮಾಲೀಕನಲ್ಲ, ಬದಲಿಗೆ ಕುರುಬರ ವಿರೋಧಿ. 2013ರಲ್ಲಿ ತಾನೊಬ್ಬನೇ ಮುಖ್ಯಮಂತ್ರಿಯಾಗಿ ಕುರುಬರನ್ನು ಮಂತ್ರಿ ಮಾಡಲಿಲ್ಲ. ಈಗ ಮಗನೊಬ್ಬನೇ ಮಂತ್ರಿ ಆಗಿರಬೇಕು ಎಂಬ ಪುತ್ರ ಮೋಹ ಹೆಚ್ಚಾಗಿದೆ. ಅದನ್ನು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

ದೇಶದಲ್ಲಿ ಯುವಶಕ್ತಿ ರಿಂಗಣಿಸುತ್ತಿದೆ. ಜಗತ್ತಿನಲ್ಲಿಯೇ ಹೆಚ್ಚು ಯುವಕರು ಭಾರತದಲ್ಲಿದ್ದಾರೆ. ಯಾವುದೇ ತೀರ್ಮಾನ ಬೇಗ ಆಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ಯುವಕರು ಜಲ್ವಂತ ಸಮಸ್ಯೆಗಳ ವಿರುದ್ಧ ದನಿ ಎತ್ತುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.

ಕಾವೇರಿ ನೀರು ಹಂಚಿಕೆ ವಿವಾದ ಮತ್ತು ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್ ಜನವಿರೋಧಿ. ವಾಟಾಳ್ ನಾಗರಾಜ್ 50 ವರ್ಷಗಳಿಂದ ಬಂದ್ ಮಾಡುತ್ತಿದ್ದಾರೆ ಪ್ರಯೋಜನ ಏನು?. ಕೆಲವು ಕನ್ನಡ ಸಂಘಟನೆಗಳು ಬಂದ್‌ಗೆ ಕರೆ ಕೊಟ್ಟಿವೆ. ಅಧಿಕಾರದ ಆಸೆಗೆ ಕೆಲವು ಸಂಘಟನೆಗಳಿವೆ. ಒತ್ತಾಯದಿಂದ ಅಂಗಡಿ ಮುಂಗಟ್ಟು ಮುಚ್ಚಿಸಬಾರದು. ಜನರು ಈ ಬಂದ್ ಅನ್ನು ಗಂಭೀರವಾಗಿ ಪರಿಗಣಿಸಬಾರದು ಎಂದರು.

ಕಾವೇರಿ ನಿರ್ವಹಣಾ ಮಂಡಳಿ 12 ಸಾವಿರ ಕ್ಯುಸೆಕ್ ನೀರು ಹರಿಸಬೇಕು ಎಂಬ ಆದೇಶ ಅನುಷ್ಠಾನಗೊಳಿಸಲು ಸಾಧ್ಯವಿಲ್ಲ. ಮಳೆ ನಿಂತೋಗಿದೆ. ಕರ್ನಾಟಕಕ್ಕೆ ದೊಡ್ಡ ತೊಂದರೆಯಾಗಲಿದೆ. ರೈತರಿಗೂ ತೊಂದರೆಯಾಗಲಿದೆ ಎಂದರು.

ವಿವಾದದ ಸಂದರ್ಭದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ತಮಿಳುನಾಡು ಸಿಎಂ ವಿಜಯ್ ಸಕಾರಾತ್ಮಕ ನಿರ್ಧಾರ ಕೈಗೊಂಡಿದ್ದಾರೆ. ಶಿವಕುಮಾರ್ ರೈತರಿಗೆ ಅಭಯ ಕೊಟ್ಟಿರುವುದನ್ನು ಸ್ವಾಗತಿಸುತ್ತೇನೆ. ಉತ್ತಮ ಆಡಳಿತದ ಮಾದರಿಯಾಗಿದೆ ಎಂದರು.

ಕಾವೇರಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಫೋನಿನಲ್ಲಿ ಮಾತಾಡಿರುವುದು ಒಳ್ಳೆಯ ಬೆಳವಣಿಗೆ. ವಿಜಯ್ ಕರ್ನಾಟಕಕ್ಕೆ ಬರುವುದನ್ನು ಖಂಡಿಸಿ ಬಂದ್ ಕರೆ ಕೊಡುವುದು ರಾಜ್ಯಕ್ಕೆ ಒಳ್ಳೆಯದಲ್ಲ ಎಂದರು.

ಮುಖಂಡರಾದ ಎಂ.ಎನ್. ನಟರಾಜ್, ಬಸವೇಗೌಡ, ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಫಿನಾಡಿನಲ್ಲಿ 100 ಮೀಟರ್‌ ಉದ್ದದ ತ್ರಿವರ್ಣ ಧ್ವಜ ಯಾತ್ರೆ
ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ