ಹೊಸಪೇಟೆ: ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಚರಂಡಿ ನೀರು ಹರಿಯುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಡಿಪೋ ಮ್ಯಾನೇಜರ್ ಗೆ ನೋಟಿಸ್ ಜಾರಿಗೊಳಿಸಲು ಪೌರಾಯುಕ್ತರಿಗೆ ಸೂಚಿಸಿದರು.
ಲಾಡ್ಜ್ ಗೆ ನೊಟೀಸ್ ಜಾರಿ:
ಬಸ್ ಸ್ಟಾಂಡ್ ಮುಂಭಾಗ ಹರಿಯುತ್ತಿರುವ ಚರಂಡಿ ನೀರಿನ ಮೂಲದ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ತಿಳಿಸಿದಾಗ, ಹತ್ತಿರದ ವಿಶ್ವ ಲಾಡ್ಜ್ ಮುಂದೆ ಡ್ರೈನೇಜ್ ಲೈನ್‌ನಲ್ಲಿ ನೀರು ನಿಂತು ಅದು ಬಸ್ ಸ್ಟಾಂಡ್‌ನತ್ತ ಹರಿಯುತ್ತಿರುವುದು ಕಂಡು ಬಂದಿತು. ನಗರಸಭೆ ಪೌರಾಯುಕ್ತರೊಂದಿಗೆ ಜಿಲ್ಲಾಧಿಕಾರಿ, ಲಾಡ್ಜ್ ಒಳಗೆ ಪ್ರವೇಶಿಸಿ ಪರಿಶೀಲಿಸಿದರು. ಟ್ರೇಡ್ ಲೈಸೆನ್ಸ್ ಇಲ್ಲದೆ ಲಾಡ್ಜ್ ನಡೆಸುತ್ತಿರುವುದು ಜೊತೆಗೆ ನಗರಸಭೆಯ ಇನ್ನು ಕೆಲವು ಷರತ್ತುಗಳು ಉಲ್ಲಂಘನೆಯಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಈ ಬಗ್ಗೆ ಕೂಡಲೇ ನೋಟಿಸ್ ಜಾರಿ ಮಾಡಿ ನಿಯಮಾನಸಾರ ಕ್ರಮವಹಿಸಲು ಜಿಲ್ಲಾಧಿಕಾರಿಗಳು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.
ಅಧಿಕಾರಿಗಳಿಗೆ ಎಚ್ಚರಿಕೆ:ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಾರೆ ಎನ್ನುವ ದೂರಿನ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ, ಹೆಚ್ಚಿನ ಹಣ ಪಡೆದು ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.