ಮೇಲ್ಭಾಗದ ವಿತರಣಾ ಕಾಲುವೆಗಳಿಗೆ ನೀರು ಹರಿಸಿ: ದಢೇಸ್ಗೂರು

KannadaprabhaNewsNetwork |  
Published : Jul 19, 2024, 12:47 AM IST
ಕಾರಟಗಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು | Kannada Prabha

ಸಾರಾಂಶ

ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ತಲುಪುವವರೆಗೂ ಕಾಯದೆ ಮೇಲ್ಭಾಗದ ವಿತರಣಾ ಕಾಲುವೆಗಳಿಗೆ ನೀರು ಹರಿಸಿ ರೈತರು ಸಸಿ ಮಡಿ ಹಾಕಿಕೊಳ್ಳಲು ಅನುಕೂಲ ಮಾಡಿಕೊಡಬೇಕು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಒತ್ತಾಯ

ಕನ್ನಡಪ್ರಭ ವಾರ್ತೆ ಕಾರಟಗಿ

ತುಂಗಭದ್ರಾ ಎಡದಂಡೆ ನಾಲೆಯ ಕೊನೆ ಭಾಗಕ್ಕೆ ನೀರು ತಲುಪುವವರೆಗೂ ಕಾಯದೆ ಮೇಲ್ಭಾಗದ ವಿತರಣಾ ಕಾಲುವೆಗಳಿಗೆ ನೀರು ಹರಿಸಿ ರೈತರು ಸಸಿ ಮಡಿ ಹಾಕಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಮಾಜಿ ಶಾಸಕ ಬಸವರಾಜ್ ದಢೇಸ್ಗೂರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಬೇಸಿಗೆ ಬೆಳೆಗೆ ನೀರಿಲ್ಲದೆ ಭತ್ತದ ಕಣಜದ ರೈತರು ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಈ ಹಿನ್ನೆಲೆ ಕೊಪ್ಪಳ-ರಾಯಚೂರು ಜಿಲ್ಲೆಯ ವಿತರಣಾ ಕಾಲುವೆಗಳಿಗೆ ಕೂಡಲೇ ನೀರು ಹರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನೀರಿನ ಒಳಹರಿವಿನ ಪ್ರಮಾಣ ನೋಡಿಕೊಂಡು ತುಂಗಭದ್ರಾ ಮಂಡಳಿ ಕಾಲುವೆಗಳಿಗೆ ನೀರು ಬಿಡಲು ಮುಂದಾಗಿದ್ದು ಸ್ವಾಗತಾರ್ಹ. ಆದರೆ ಎಡದಂಡೆ ಕಾಲುವೆಗೆ ಮುನಿರಾಬಾದಿನಿಂದ ಬಿಟ್ಟ ನೀರು ರಾಯಚೂರುವರೆಗೆ ತಲುಪುವ ತನಕ ಸುಮಾರು ೧೦ ದಿನಗಳಾಗುತ್ತದೆ. ಅಲ್ಲಿಯವರೆಗೂ ರೈತರನ್ನು ಕಾಯಲು ಬಿಟ್ಟು ಕೂಡಲೇ ಎಲ್ಲ ವಿತರಣಾ, ಉಪಕಾಲುವೆಗಳಿಗೆ ನೀರು ಹರಿಸಿದರೆ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುತ್ತದೆ. ಭತ್ತದ ಕೃಷಿ ಚಟುವಟಿಕೆಗೆ ಜೀವಂತಿಕೆ ಬರುತ್ತದೆ. ನೀರು ಹರಿಸಿಕೊಂಡು ಸಸಿ ಮಡಿ ಹಾಕಿಕೊಂಡರೆ ಈ ಬಾರಿಯಾದರೂ ಸಕಾಲಕ್ಕೆ ಭತ್ತ ನಾಟಿ ಮಾಡಬಹುದು ಎನ್ನುವುದನ್ನು ನೀರಾವರಿ ಅಧಿಕಾರಿಗಳು ಗಮನ ಹರಿಸಿ ಯೋಚಿಸಬೇಕಾಗಿದೆ ಎಂದರು.

ಎಡದಂಡೆ ಮುಖ್ಯನಾಲೆಗೆ ಶುಕ್ರವಾರದಿಂದ ೨೦೦೦ ಕ್ಯುಸೆಕ್ಸ್‌ ನೀರನ್ನು ಹರಿಸಿ ಪ್ರತಿ ವಿತರಣಾ ನಾಲೆಗಳಿಗೆ ಕನಿಷ್ಠ ೨೦೦ ಕ್ಯುಸೆಕ್ಸ್‌ ನೀರನ್ನಾದರೂ ಬಿಡುಗಡೆ ಮಾಡಿದರೆ ಎಲ್ಲ ಉಪಕಾಲುವೆಗಳಿಗೆ ನೀರು ಸರಾಗವಾಗಿ ಕೊನೆ ಭಾಗದವರೆಗೂ ತಲುಪಿ ರೈತರ ಜಮೀನಿಗೆ ನೀರುಣಿಸಲು ಸಾಧ್ಯ. ಈಗಾಗಲೇ ಕೆಲ ಭಾಗದಲ್ಲಿ ಸಸಿ ಮಡಿ ಬೆಳೆಸಿಕೊಂಡು ಭತ್ತ ನಾಟಿಗೆ ಈಗಾಗಲೇ ಕಾಲುವೆ ನೀರಿಗಾಗಿ ಚಾತಕ ಪಕ್ಷಿಯಂತೆ ರೈತ ಕಾಯುತ್ತಿದ್ದಾರೆ. ಈಗಾಗಲೇ ಜುಲೈ ಅರ್ಧ ತಿಂಗಳು ಮುಂದಿದೆ. ನೀರನ್ನು ರಾಯಚೂರುವರೆಗೂ ತಲುಪಿಸಿ ನಂತರ ಕಾಲುವೆಗೆ ನೀರು ಬಿಡುಗಡೆ ಮಾಡುವ ವೇಳೆ ಆಗಷ್ಟ್ ಬರುತ್ತದೆ. ಹೀಗಾಗಿ ನಮ್ಮ ರೈತರಿಗೆ ಎರಡನೇ ಬೆಳೆ ಹಚ್ಚಿಕೊಳ್ಳಲು ತೊಂದರೆಯಾಗುತ್ತದೆ. ಈ ನಿಟ್ಟಿನಲ್ಲಿ ನೀರಾವರಿ ಅಧಿಕಾರಿಗಳು ಮತ್ತು ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಉಮೇಶ ಭಂಗಿ ಮತ್ತು ಸತ್ಯನಾರಾಯಣ ಕುಲಕರ್ಣಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ