ಮಲ್ಲಿಗೆ ನಾಡಿನಲ್ಲಿ ತುಂಬಿ ಹರಿಯುತ್ತಿವೆ ಒಳಚರಂಡಿ!

KannadaprabhaNewsNetwork | Published : Feb 10, 2024 1:46 AM

ಪಟ್ಟಣದ ಎಲೆ ಪೇಟೆಯಲ್ಲಿ ಚರಂಡಿ ತುಂಬೆಲ್ಲ ನೀರಿನ ಬಾಟಲಿ, ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಹೋಗಿವೆ. ಜತೆಗೆ ಸಾಕಷ್ಟು ಹೂಳು ಕೂಡಾ ತುಂಬಿಕೊಂಡಿದೆ. ಸರಾಗವಾಗಿ ನೀರು ಹರಿದು ಹೋಗಲು ದಾರಿಯೇ ಇಲ್ಲದಂತಾಗಿದೆ.

ಹೂವಿನಹಡಗಲಿ: ಮಲ್ಲಿಗೆ ಸುವಾಸನೆ ಬೀರಬೇಕಿದ್ದ ಮಲ್ಲಿಗೆ ನಾಡಿನಲ್ಲಿ ಒಳ ಚರಂಡಿ ನೀರಿನ ದುರ್ನಾತ ಮೂಗುಮುಚ್ಚಿಕೊಳ್ಳುವಂತೆ ಮಾಡುತ್ತಿದೆ. ಗಲೀಜು ನೀರು ರಾಜ್ಯ ಹೆದ್ದಾರಿಗೆ ಬಂದು ನಿಂತು ಜನರು ಓಡಾಡುವುದೇ ಕಷ್ಟಕರವಾಗಿದೆ.

ಹೌದು, ಪಟ್ಟಣದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ ರಸ್ತೆಗೆ ಹೊಂದಿಕೊಂಡಿರುವ, ವಿಜಯನಗರ ಬಡಾವಣೆಯಲ್ಲಿನ ಒಳಚರಂಡಿ ತುಂಬಿ ಹರಿದು ರಸ್ತೆಯಲ್ಲಿ ಹರಿಯುತ್ತಿದೆ. ನಿಂತ ನೀರಿನ ಮೇಲೆ ವಾಹನಗಳು ಸಾಗಿದಾಗ ರಸ್ತೆಯ ಗಲೀಜು ಜನರ ಮೈಗೆ ಎರಚುತ್ತಿದೆ.

ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಮಾಡುವಾಗ ಆಗಿರುವ ಎಡವಟ್ಟಿನಿಂದ ಒಳಚರಂಡಿ ಪೈಪ್‌ಲೈನ್‌ಗೆ ಹಾನಿಯಾಗಿದೆ. ಬೇರೆ ಕಡೆಗೆ ನೀರು ಹರಿದು ಹೋಗಲು ಸಾಧ್ಯವೇ ಇಲ್ಲದಂತಾಗಿದೆ. ಹೀಗೆ ಪಟ್ಟಣದ ನಾನಾ ಕಡೆಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಒಡೆದುಹೋಗಿದೆ. ಪಾದಚಾರಿ ರಸ್ತೆಯಂತೂ ಸಂಪೂರ್ಣ ಕಿತ್ತು ಹೋಗಿದೆ. ಪಟ್ಟಣದ ಸೌಂದರ್ಯವೂ ಹಾಳಾಗಿ ಹೋಗಿದೆ.

ಗದಗ-ಹರಪನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ವಿವಿಧ ಮಾರ್ಗಗಳಲ್ಲಿ ರಸ್ತೆಗೆ ಹೊಂದಿಕೊಂಡಿರುವಂತೆ ಮನೆ ಬಳಕೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಗ್ಯಾಸ್‌ ಪೈಪ್‌ಲೈನ್‌ ಮಾಡುವ ಗುತ್ತಿಗೆದಾರರು ಸಿಕ್ಕ ಸಿಕ್ಕ ಕಡೆಗಳಲ್ಲಿ ಚರಂಡಿಗಳನ್ನು ಒಡೆದು ಹಾಕಿದ್ದಾರೆ.

ನಿತ್ಯ ಕಸ ವಿಲೇವಾರಿ ಮಾಡಲು ಪುರಸಭೆಯ ಸಾಕಷ್ಟು ವಾಹನಗಳು ಇವೆ. ಆದರೆ ಪಟ್ಟಣದ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿ ಇಕ್ಕೆಲಗಳಲ್ಲಿ ಚಿಕನ್‌, ಮಟನ್‌ ಅಂಗಡಿಗಳ ಮಾಲೀಕರು, ಕೋಳಿ ಪುಚ್ಚ ಸೇರಿದಂತೆ ತ್ಯಾಜ್ಯಗಳನ್ನು ರಸ್ತೆ ಬದಿಯಲ್ಲೇ ಹಾಕಿದ್ದಾರೆ. ಇದರಿಂದ ಸಾಕಷ್ಟು ವಾತಾವರಣ ಕಲುಷಿತವಾಗಿದೆ. ರಸ್ತೆಯ ಬದಿಯಲ್ಲಿ ಅಳಿದುಳಿದ ಮಾಂಸ ಇನ್ನಿತರ ವಸ್ತುಗಳನ್ನು ಹಾಕುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಿಂಡು ಹಿಂಡು ನಾಯಿಗಳು ರಸ್ತೆಯಲ್ಲೇ ನಿಂತುಕೊಳ್ಳುತ್ತಿವೆ. ಅದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗಿದೆ.

ಪಟ್ಟಣದ ಎಲೆ ಪೇಟೆಯಲ್ಲಿ ಚರಂಡಿ ತುಂಬೆಲ್ಲ ನೀರಿನ ಬಾಟಲಿ, ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಹೋಗಿವೆ. ಜತೆಗೆ ಸಾಕಷ್ಟು ಹೂಳು ಕೂಡಾ ತುಂಬಿಕೊಂಡಿದೆ. ಸರಾಗವಾಗಿ ನೀರು ಹರಿದು ಹೋಗಲು ದಾರಿಯೇ ಇಲ್ಲದಂತಾಗಿದೆ. ಸ್ವಚ್ಛತೆ ಕಾಪಾಡದ ಪುರಸಭೆ ವ್ಯವಸ್ಥೆಗೆ ಎಲೆಪೇಟೆಯಲ್ಲಿನ ಅಂಗಡಿಗಳ ಮಾಲೀಕರು ಹಾಗೂ ಅಂಗಡಿಗಳಿಗೆ ಬರುವ ಗ್ರಾಹಕರು ಹಿಡಿಶಾಪ ಹಾಕುತ್ತಿದ್ದಾರೆ.

ಅಧಿಕಾರಿಗಳು ಕ್ರಮ ಕೈಗೊಳ್ಳಲಿ: ಕಸ ವಿಲೇವಾರಿ ಸೇರಿದಂತೆ ಸ್ವಚ್ಛತೆಗೆ ಸಾಕಷ್ಟು ಅನುದಾನ ಬಳಕೆ ಮಾಡುತ್ತಿರುವ ಪುರಸಭೆಯಲ್ಲಿನ ಜಟ್ಟಿಂಗ್‌ ಮಿಷನ್‌ ಇದೆ. ಒಳಚರಂಡಿ ತುಂಬಿದ ಕೂಡಲೇ ಬೇರೆಡೆ ಸಾಗಾಣೆ ಮಾಡಿರುವ ಹಿನ್ನೆಲೆಯಲ್ಲಿ ಕಲುಷಿತ ನೀರು ರಾಜ್ಯ ಹೆದ್ದಾರಿಗೆ ಬಂದು ನಿಂತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎನ್ನುತ್ತಾರೆ ವಿಜಯನಗರ ಬಡಾವಣೆ ನಿವಾಸಿಗಳು.

ಸ್ವಚ್ಛತೆ ಕಾಪಾಡ್ತೇವೆ: ಪಟ್ಟಣ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿನ ಒಳಚರಂಡಿಯ ಪೈಪ್‌ಲೈನ್‌ನ್ನು ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ ಮಾಡುವಾಗ ಪೈಪ್‌ಲೈನ್‌ ಒಡೆದು ಹಾಕಿದ್ದಾರೆ. ಒಳಚರಂಡಿಯಲ್ಲಿನ ನೀರು ತುಂಬಿಕೊಂಡು ರಸ್ತೆಗೆ ಬಂದು ನಿಂತಿದೆ. ಈ ಕೂಡಲೇ ಪುರಸಭೆ ಜಟ್ಟಿಂಗ್‌ ಮಿಷನ್‌ ಮೂಲಕ ನೀರು ಬೇರೆಗೆ ಸಾಗಾಣೆ ಮಾಡಿ ಸ್ವಚ್ಛತೆಯನ್ನು ಕಾಪಾಡುತ್ತೇವೆ ಎಂದು ಹೂವಿನಹಡಗಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ತಿಳಿಸಿದರು.