ಗೊಂದಿಹಳ್ಳಿಯಲ್ಲಿ ರಸ್ತೆ ಮೇಲೆಯೇ ಹರಿಯುವ ಚರಂಡಿ ನೀರು

KannadaprabhaNewsNetwork | Published : Jan 1, 2025 12:01 AM

ಸಾರಾಂಶ

ಗ್ರಾಮದಲ್ಲಿರುವ ಕೆಲವು ಚರಂಡಿ ಹಾಗೂ ನೀರಿನ ತೊಟ್ಟಿಗಳು ಸ್ವಚ್ಛಗೊಳ್ಳದೇ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಇಲ್ಲಿ ಯಾರೂ ನಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲ. ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ .

ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು । ಗ್ರಾಮಕ್ಕೆ ಭೇಟಿ ನೀಡದ ಗ್ರಾಪಂ ಅಧಿಕಾರಿಗಳು

ಕನ್ನಡಪ್ರಭ ವಾರ್ತೆ ಕೊರಟಗೆರೆ

ಗೊಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದೆ ರಸ್ತೆಯ ಮಧ್ಯ ಭಾಗದಲ್ಲಿ ಹರಿಯುವ ಮಲೀನ ನೀರನ್ನು ತುಳಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಬುಕ್ಕಾಪಟ್ಟಣ ಗ್ರಾಪಂ ವ್ಯಾಪ್ತಿಗೆ ಬರುವ ಗೊಂದಿಹಳ್ಳಿ ಗ್ರಾಮದಲ್ಲಿ ೧೨೦ಕ್ಕೂ ಹೆಚ್ಚು ಮನೆಗಳು ಹಾಗೂ ಸುಮಾರು ೧೫೦೦ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಗ್ರಾಪಂಯಲ್ಲಿ ಸಾಕಷ್ಟು ಅನುದಾನ ಬರುತ್ತಿದ್ದರೂ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಗೊಂದಿಹಳ್ಳಿ ಗ್ರಾಮದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.

ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯೇ ಇಲ್ಲ, ಗ್ರಾಮದ ಮಧ್ಯ ಗ್ರಾಮ ದೇವತೆ ಮಾರಮ್ಮ ದೇವಿಯ ದೇವಸ್ಥಾನದ ಮುಂದೆ ಸುಮಾರು ವರ್ಷಗಳ ಹಿಂದೆ ಚರಂಡಿಯಿಲ್ಲದೇ ಸಿಸಿ ರಸ್ತೆ ನಿರ್ಮಾಣ ಮಾಡಿದ ಪರಿಣಾಮ ಕೊಚ್ಚೆ ನೀರು ತುಳಿದುಕೊಂಡು ದೇವಸ್ಥಾನಕ್ಕೆ ಹೋಗುವಂಥ ಪರಿಸ್ಥಿತಿ ಇಲ್ಲಿನ ಜನರಿಗೆ ಬಂದಿದೆ. ಅನೇಕ ಬಾರಿ ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚರಂಡಿ ಸ್ವಚ್ಛಗೊಳಿಸದೇ ಇರುವ ಕಾರಣ ಸೊಳ್ಳೆ ಕಾಟ:

ಗೊಂದಿಹಳ್ಳಿ ಗ್ರಾಮದಲ್ಲಿ ಚರಂಡಿ ಇಲ್ಲದೆ ರಸ್ತೆಯಲ್ಲಿ ಗ್ರಾಮದ ನೀರು ನಿಲ್ಲುತ್ತಿರುವ ಪರಿಣಾಮ ಸೊಳ್ಳೆಗಳ ಕಾಟ ಹಾಗೂ ನೀರಿನ ಮಾಲಿನ್ಯತೆಯಿಂದ ಸಾಂಕ್ರಾಮಿಕ ರೋಗಗಳು ಜಾಸ್ತಿಯಾಗಿ ಸಾರ್ವಜನಿಕರು ಆಸ್ಪತ್ರೆ ಸೇರುತ್ತಿದ್ದಾರೆ. ಶಾಲೆಯ ಮಕ್ಕಳು ಸರ್ಕಾರದ ಅನೇಕ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಇದೇ ರಸ್ತೆಯ ಮೇಲೆ ನಿಂತ ತ್ಯಾಜ್ಯ ನೀರಿನ ಮೇಲೆಯೇ ಸಂಚಾರ ಮಾಡಿ ಅರಿವು ಮೂಡಿಸುವಂಥ ದುಃಸ್ಥಿತಿ ಬಂದಿದೆ. ಮಾರುತಿನಗರದಲ್ಲೂ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಎಂದು ಸಾರ್ವಜನಿಕರು ದೂರಿದರು.

ನರೇಗಾ ಯೋಜನೆಯಲ್ಲಿ ಚರಂಡಿ ನಿರ್ಮಿಸಿ:

ಗ್ರಾಮೀಣ ಭಾಗದ ಜನತೆಯ ಮೂಲಭೂತ ಕೆಲಸಗಳನ್ನು ಮಾಡಲು ನರೇಗಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಈ ಗ್ರಾಮದಲ್ಲಿ ಸಾಕಷ್ಟು ಕೆಲಸಗಳಾಗದೇ ಬಾಕಿ ಉಳಿದಿವೆ. ನರೇಗಾ ಯೋಜನೆಯಲ್ಲಿ ಚರಂಡಿ ಹಾಗೂ ರಸ್ತೆಗಳನ್ನು ನಿರ್ಮಾಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಗೊಂದಿಹಳ್ಳಿ ಗ್ರಾಮಸ್ಥೆ ಗಂಗಮ್ಮ ಮಾತನಾಡಿ, ನಮ್ಮ ಮನೆಯ ಮುಂದೆ ಚರಂಡಿ ಸ್ವಚ್ಛಗೊಳಿಸಿ ಒಂದು ವರ್ಷವೇ ಆಗಿದೆ. ಗ್ರಾಪಂ ಅಧಿಕಾರಿಗಳು ಯಾರೂ ಇಲ್ಲಿಗೆ ಬಂದು ನಮ್ಮ ಸಮಸ್ಯೆ ಕೇಳಿಲ್ಲ. ಅನೇಕ ಬಾರಿ ಚರಂಡಿ ಸ್ವಚ್ಛಗೊಳಿಸುವಂತೆ ತಿಳಿಸಿದರೂ ಯಾರು ಕೂಡ ಬಂದಿಲ್ಲ, ಆದ್ದರಿಂದ ನಾವೇ ಚರಂಡಿ ಸ್ವಚ್ಛಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.

ಮಾರುತಿ ನಗರ ವಾಸಿ ತಿಮ್ಮಕ್ಕ ಮಾತನಾಡಿ, ಗ್ರಾಮದಲ್ಲಿರುವ ಕೆಲವು ಚರಂಡಿ ಹಾಗೂ ನೀರಿನ ತೊಟ್ಟಿಗಳು ಸ್ವಚ್ಛಗೊಳ್ಳದೇ ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು, ಇಲ್ಲಿ ಯಾರೂ ನಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲ. ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಗ್ರಾಪಂ ಪಿಡಿಒ ವೀರಭದ್ರ ಆರಾಧ್ಯ ಮಾತನಾಡಿ, ಗೊಂದಿಹಳ್ಳಿ ಗ್ರಾಮದಲ್ಲಿ ರಸ್ತೆಗೆ ನೀರು ಬಿಡಬಾರದು ಎಂದು ಸಾರ್ವಜನಿಕರಿಗೆ ಅನೇಕ ಬಾರಿ ತಿಳಿಸಿದರೂ ಯಾರೂ ನಮ್ಮ ಮಾತು ಕೇಳುತ್ತಿಲ್ಲ. ಮುಂದಿನ ದಿನಗಳಲ್ಲಿ ನರೇಗಾ ಯೋಜನೆಯಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.

Share this article