ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಚರಂಡಿ ಕಾಮಗಾರಿ: ಅಪಾಯಕ್ಕೆ ಆಹ್ವಾನ

KannadaprabhaNewsNetwork | Published : Mar 11, 2024 1:23 AM

ಸಾರಾಂಶ

ಹೊಸದಾಗಿ ಅಳವಡಿಸಬೇಕಾಗಿರುವ ವಿದ್ಯುತ್ ಕಂಬಗಳನ್ನು ರಸ್ತೆಯ ಮೇಲೆಯೇ ಇಡಲಾಗಿದೆ. ಚರಂಡಿಗೆ ನಿರ್ಮಿಸಲಾದ ಕಬ್ಬಿಣದ ರಾಡ್‌ಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿರುತ್ತದೆ

ಕನ್ನಡಪ್ರಭ ವಾರ್ತೆ ಶಿರಸಿ

ನಗರದ ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸದೇ ಚರಂಡಿ ಕಾಮಗಾರಿ ನಡೆಸಲಾಗುತ್ತಿರುವುದರಿಂದ ಅಪಾಯಕ್ಕೆ ಆಹ್ವಾನ ನೀಡುವಂತಿದ್ದು, ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಯಲ್ಲಾಪುರ ರಸ್ತೆಯ ಮರಾಠಿಕೊಪ್ಪ ಕ್ರಾಸ್‌ನಿಂದ ೩೦೦ ಮೀಟರ್ ಚರಂಡಿ ನಿರ್ಮಾಣ ಕಾಮಗಾರಿಯು ಆಮೆಗತಿಯಲ್ಲಿ ನಡೆಯುತ್ತಿರುವುದಲ್ಲದೇ ಮುನ್ನೆಚ್ಚರಿಕಾ ಕ್ರಮ ವಹಿಸದೇ ನಡೆಸಲಾಗುತ್ತಿದೆ. ವಾಹನ ಸವಾರರು ಆಯತಪ್ಪಿ ಬಿದ್ದರೆ ಯಾರು ಹೊಣೆ ಎಂದು ಪ್ರಶ್ನಿಸುತ್ತಿದ್ದಾರೆ.

ಚರಂಡಿ ನಿರ್ಮಿಸಲು ತೆಗೆದ ಮಣ್ಣನ್ನು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಹಾಕಲಾಗಿದೆ. ಹೊಸದಾಗಿ ಅಳವಡಿಸಬೇಕಾಗಿರುವ ವಿದ್ಯುತ್ ಕಂಬಗಳನ್ನು ರಸ್ತೆಯ ಮೇಲೆಯೇ ಇಡಲಾಗಿದೆ. ಚರಂಡಿಗೆ ನಿರ್ಮಿಸಲಾದ ಕಬ್ಬಿಣದ ರಾಡ್‌ಗಳನ್ನು ಹಾಗೆಯೇ ಬಿಟ್ಟಿದ್ದಾರೆ. ಮರಾಠಿಕೊಪ್ಪ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಅಧಿಕವಾಗಿರುತ್ತದೆ. ರಾತ್ರಿ ಸಮಯದಲ್ಲಿ ಇವುಗಳು ಗೋಚರವಾಗದೇ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುವಂತಾಗಿದ್ದು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ರಕ್ಷಣಾ ಕ್ರಮ ವಹಿಸಿ ಚರಂಡಿ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಮರಾಠಿಕೊಪ್ಪ ಹಾಗೂ ಕೊಪ್ಪಳ ಕಾಲನಿ ಭಾಗದ ನಿವಾಸಿಗಳು ಆಗ್ರಹಿಸುತ್ತಿದ್ದಾರೆ.

ಗುತ್ತಿಗೆ ಕಂಪೆನಿ ಮೇಲೆ ಪ್ರಕರಣ ದಾಖಲು: ಶಿರಸಿ: ಕಲ್ಲು ಕಾಲಿಗೆ ತಗುಲಿ ಗಟಾರಕ್ಕೆ ಬಿದ್ದು ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡ ಘಟನೆ ನಗರದ ಮರಾಠಿಕೊಪ್ಪದಲ್ಲಿ ನಡೆದಿದೆ. ಇಲ್ಲಿನ ಮರಾಠಿಕೊಪ್ಪದ ಗಣೇಶ ಜಟ್ಟಾ ನಾಯ್ಕ (೬೭) ಗಾಯಗೊಂಡ ವ್ಯಕ್ತಿ. ಯಲ್ಲಾಪುರ ರಸ್ತೆಯ ಮರಾಠಿಕೊಪ್ಪ ನಾಲ್ಕು ರಸ್ತೆ ಕ್ರಾಸ್‌ನಿಂದ ನಡೆದುಕೊಂಡು ಹೋಗುತ್ತಿರುವಾಗ ಕೆ.ವಿ. ಶೆಟ್ಟಿ ಆಂಡ್ ಕಂಪೆನಿಯು ನಗರ ಸಭೆಯಿಂದ ಕಾಂಟ್ರಾಕ್ಟ್ ಪಡೆದು ನಡೆಸುತ್ತಿರುವ ಗಟಾರ ಕಾಮಗಾರಿಯ ಗಟಾರಿನ ಕಲ್ಲು ಕಾಲಿಗೆ ತಗುಲಿ ಗಣೇಶ ಇವರು ಗಟಾರದಲ್ಲಿ ಬಿದ್ದು, ಗಟಾರದ ಕಬ್ಬಿಣದ ರಾಡುಗಳು ಗಣೇಶ ಇವರ ಹಣೆಯ ಮೇಲೆ ಚುಚ್ಚಿ ಗಂಭೀರ ಗಾಯಗೊಂಡಿದ್ದು, ಕಾಮಗಾರಿ ನಡೆಸುತ್ತಿರುವ ಸ್ಥಳದಲ್ಲಿ ಕೆ.ವಿ. ಶೆಟ್ಟಿ ಆಂಡ್ ಕಂಪೆನಿ ಕುಮಟಾ ಯಾವುದೇ ಸೂಚನಾ ಫಲಕ ಹಾಕದೇ ಬೇಜವಾಬ್ದಾರಿಯಿಂದ ಕಾಮಗಾರಿ ನಡೆಸುತ್ತಿದ್ದಿದ್ದರಿಂದಲೇ ಗಣೇಶ ಗಟಾರದಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ ಎಂದು ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article