ಹರಿಯುತ್ತಿರುವ ನೀರಿನಲ್ಲೇ ಚರಂಡಿ ಕಾಮಗಾರಿ: ವಿಡಿಯೋ ವೈರಲ್

KannadaprabhaNewsNetwork |  
Published : Jan 02, 2025, 12:33 AM IST
ಮ | Kannada Prabha

ಸಾರಾಂಶ

ಸಾರ್ವಜನಿಕರ ವಿರೋಧದ ನಡುವೆಯೂ ಹರಿಯುತ್ತಿರುವ ನೀರಿನಲ್ಲೇ ಬ್ಯಾಡಗಿ ಪಟ್ಟಣದ 8ನೇ ವಾರ್ಡ್‌ನಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಮಗಾರಿ ಸ್ಥಗಿತಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿ ಸೂಚಿಸಿದ್ದಾರೆ.

ಬ್ಯಾಡಗಿ: ಸಾರ್ವಜನಿಕರ ವಿರೋಧದ ನಡುವೆಯೂ ಹರಿಯುತ್ತಿರುವ ನೀರಿನಲ್ಲೇ ಪಟ್ಟಣದಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಒಟ್ಟು ₹12 ಲಕ್ಷ ವೆಚ್ಚದಲ್ಲಿ ಪಟ್ಟಣದ 8ನೇ ವಾರ್ಡ್‌ ಕೆವಿಜಿ ಬ್ಯಾಂಕ್ ಎದುರು ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಸವಣೂರಿನ ಗೌಸಮೋದಿನ ಪೀರಜಾದೆ ಎಂಬುವರು ಗುತ್ತಿಗೆ ಪಡೆದುಕೊಂಡಿದ್ದರು. ಆದರೆ ಚರಂಡಿಗಳಲ್ಲಿ ಹರಿಯುತ್ತಿರುವ ನೀರನ್ನು ಸ್ಥಗಿತಗೊಳಿಸದೇ ಕಾಂಕ್ರೀಟ್ ಕಾಮಗಾರಿ ನಡೆಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಯಿತು.

ನಮ್ಮ ಕೆಲಸ ಹಿಂಗೇರಿ ನೀವ್ಯಾರು ಕೇಳೋಕೆ?: ಹರಿಯುತ್ತಿರುವ ನೀರಿನಲ್ಲಿ ಸಿಮೆಂಟ್ ನಿಲ್ಲುವುದಾದರೂ ಹೇಗೆ? ಗಟ್ಟಿಯಾಗಲು ಕನಿಷ್ಠ 6 ತಾಸುಗಳಾದರೂ ಬೇಕು. ನೀವು ಮಾಡುತ್ತಿರುವ ಕಾಮಗಾರಿ ಸರಿಯಿಲ್ಲ, ಕೂಡಲೇ ಕೆಲಸ ಸ್ಥಗಿತಗೊಳಿಸುವಂತೆ ಸುತ್ತಲಿನ ಜನ ಹೇಳಿದರೂ ಕ್ಯಾರೇ ಎನ್ನದ ಉದ್ಧಟತನ ತೋರಿದ ಕೆಲಸಗಾರರು, ನಮ್ಮ ಕೆಲಸ ಹೀಗೆ ಅದನ್ನು ಕೇಳೋಕೆ ನೀವ್ಯಾರು ಎಂದು ಮರು ಪ್ರಶ್ನಿಸಿದ್ದಾರೆ.ವಿಡಿಯೋ ವೈರಲ್ ಎಚ್ಚೆತ್ತುಕೊಂಡ ಅಧಿಕಾರಿಗಳು: ಕಳಪೆ ಕಾಮಗಾರಿಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ನೀರಿನಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಬೇಕೆ ಬೇಡವೇ ಎನ್ನುವ ಕನಿಷ್ಠ ಜ್ಞಾನ ಮೇಸ್ತ್ರಿಗಳಿಗೆ ಅರ್ಥವಾಗಬೇಕಿತ್ತು, ಕೆಲಸಗಾರರು ನಿರ್ಲಕ್ಷ್ಯ ತೋರಿದ್ದರಿಂದ ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

ಸಾರ್ವಜನಿಕರ ಮಾತುಗಳಿಗೆ ಕಿಂಚಿತ್ತೂ ಬೆಲೆ ನೀಡದೇ ಕಾಮಗಾರಿ ಮುಂದುವರಿಸಿ ಉದ್ಧಟತನ ತೋರಿದ್ದು ನೋಡಿದರೇ, ಗುತ್ತಿಗೆದಾರನ ಹಿಂದೆ ಪುರಸಭೆ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತದೆ. ಒಂದು ವೇಳೆ ಜನರು ಕಾಮಗಾರಿ ಗಮನಿಸದಿದ್ದರೆ ಯಾರು ಹೊಣೆ? ಕಾಮಗಾರಿಗಳ ಬಳಿ ಪುರಸಭೆ ಸಿಬ್ಬಂದಿ ಇಲ್ಲದಿರುವುದು ಕೂಡ ಇಂತಹ ಘಟನೆಗಳಿಗೆ ಕಾರಣವಾಗಬಹುದು ಎಂದು ಸ್ಥಳೀಯ ನಿವಾಸಿ ಮಂಜುನಾಥ ಜಾಧವ ಹೇಳುತ್ತಾರೆ.

ಗುತ್ತಿಗೆದಾರರ ಮೇಲೆ ಪುರಸಭೆ ಅಧಿಕಾರಿಗಳ ಬಿಗಿ ಹಿಡಿತವಿಲ್ಲ, ಯಾವುದೇ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಿಸಿದ ವಾರ್ಡ್‌ ಸದಸ್ಯರ ಗಮನಕ್ಕೆ ತರುವಂತೆ ಸೂಚನೆ ನೀಡಿದರೂ ಪುರಸಭೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿದ್ದು ಸದಸ್ಯರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು 8ನೇ ವಾರ್ಡ್‌ ಸದಸ್ಯ ಮಂಜುನಾಥ ಬಾರ್ಕಿ ಹೇಳುತ್ತಾರೆ.

ಸಾರ್ವಜನಿಕರೂ ತಿಳಿಸಿದರೂ ಗೌರವ ನೀಡದೇ ಕೆಲಸ ಮುಂದುವರೆಸಿದ ಗುತ್ತಿಗೆದಾರನ ವರ್ತನೆ ಸರಿಯಿಲ್ಲ, ಅವರ ವಿರುದ್ಧ ಕ್ರಮ ಅನಿವಾರ್ಯ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೇಳುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ
ರಾಜ್ಯ ರಾಜಕಾರಣದಲ್ಲಿ ನನ್ನ ಕ್ಷೇತ್ರ ಚಾಮರಾಜನಗರ : ಪ್ರತಾಪ್‌ ಸಿಂಹ