ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ದೃಶ್ಯಕಲಾ ಮಹಾವಿದ್ಯಾಲಯದ ಚಿಂದೋಡಿ ವೀರಪ್ಪ ರಂಗ ವೇದಿಕೆಯಲ್ಲಿ ಶನಿವಾರ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೃತ್ತಿ ರಂಗೋತ್ಸವದ 2ನೇ ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ನಾಟಕ ರಚನೆ ಕುರಿತಂತೆ ಇರುವ ಕೆಲ ಗೊಂದಲಗಳು, ನಮ್ಮ ಮುಂದೆ ಹೆಚ್ಚು ತಳಕೆ ಮೂಡಿಸುತ್ತಿದ್ದು, ಬದಲಾಗುವ ಕಾಲದ ಜೊತೆಗೆ ನಾಟಕ ರಚನೆ ಮಾಡಬೇಕು ಎಂದರು.
ಕೇರಳದಲ್ಲಿ ಸಂಸ್ಕೃತ ನಾಟಕ ಪರಂಪರೆ ಇಂದಿಗೂ ಜೀವಂತವಿದೆ. ಮಲಯಾಳಂ ರಂಗಭೂಮಿಯಲ್ಲಿ ಕೇವಲ ಸ್ವತಂತ್ರ ನಾಟಕಗಳಷ್ಟೇ ಅಲ್ಲ, ಸಂಸ್ಕೃತ ಮೂಲಗಳಿಂದ ರೂಪಾಂತರಗೊಂಡ ಕೃತಿಗಳೂ ನಿರಂತರ ಪ್ರದರ್ಶನವಾಗುತ್ತವೆ. ಪ್ರಾಚೀನ ಸಂಸ್ಕೃತ ನಾಟಕಕಾರ ಭಾಸ ರಚಿಸಿದ ನಾಟಕಗಳು ಕೇರಳದ ವಿವಿಧ ರಂಗ ಮಂದಿರದಲ್ಲಿ ಇಂದಿಗೂ ಪ್ರದರ್ಶನಗೊಳ್ಳುತ್ತವೆ. ಭಾರತೀಯ ನಾಟಕ ಪರಂಪರೆಯಲ್ಲಿ ಭಾಸ ಅತ್ಯಂತ ಹಳೆಯ ಮತ್ತು ಮಹತ್ವದ ಹೆಸರಾಗಿ ಉಳಿದಿದ್ದಾರೆ ಎಂದು ಅವರು ಹೇಳಿದರು.ಭಾಸ ರಚಿತ ಕೃತಿಗಳನ್ನು ಬರೀ ಸಂರಕ್ಷಿಸುವುದಷ್ಟೇ ಅಲ್ಲ, ಸಮಕಾಲೀನ ಶೈಲಿಗಳಲ್ಲಿ ಮರುರೂಪಗೊಳಿಸಿ, ಪ್ರೇಕ್ಷಕರ ಮುಂದಿರುವ ಪ್ರಯತ್ನ ಕೇರಳ ಕಲಾವಿದರು ನಿರಂತರ ಮಾಡಿಕೊಂಡು ಬಂದಿದ್ದಾರೆ. ಅಂತಹ ಪ್ರಯತ್ನ ನಾವು ಮಾಡುತ್ತಿದ್ದೇವೆಯೇ? ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆಗಳಲ್ಲೂ ಸಂಸ್ಕೃತ ನಾಟಕ ಪರಂಪರೆಯನ್ನು ಅಷ್ಟೇ ಶ್ರದ್ಧೆಯಿಂದ ಮುಂದುವರಿಸಿದ್ದೇವಾ? ಇದು ಕೇವಲ ಒಂದು ಭಾಷೆಗೆ ಸೀಮಿತ ವಿಚಾರ ಅಲ್ಲ. ಇದು ಸಮಗ್ರ ಭಾರತೀಯ ನಾಟಕ ಸಂಸ್ಕೃತಿಗೆ ಸಂಬಂಧಿಸಿದ ಪ್ರಶ್ನೆ. ಸಂಸ್ಕೃತ ನಾಟಕ ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲ ಭಾಷೆಗಳ ಕಲಾವಿದರ ಮೇಲೂ ಇದೆ ಎಂದು ಅವರು ತಿಳಿಸಿದರು.
ಹೈದರಾಬಾದ್‌ನ ಪ್ರಾಧ್ಯಾಪಕ ಡಾ. ವಿ.ಬಿ.ತಾರಕೇಶ್ವರ ಈಶಾನ್ಯ ಭಾರತದ ವೃತ್ತಿ ರಂಗಭೂಮಿ ವಿಷಯದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ವೃತ್ತಿ ರಂಗಭೂಮಿ, ಗ್ರಾಮೀಣ ರಂಗಭೂಮಿ ಎಂಬ ಎರಡು ಭಾಗ ಮಾಡುವುದು ಮಾತ್ರ ಸಮಸ್ಯೆಯ ಮೂಲವಲ್ಲ ಎಂದು ಹೇಳಿದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಎಂ. ಗಾಜನೂರು ಭಾರತೀಯ ವೃತ್ತಿ ರಂಗಭೂಮಿಃ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಗ್ರಹಿಕೆಗಳು ಕುರಿತಂತೆ ವಿಷಯ ಮಂಡಿಸಿದರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ರಾಜಪ್ಪ ದಳವಾಯಿ, ವಿಶೇಷಾಧಿಕಾರಿ ರವಿಚಂದ್ರ ಇತರರು ಇದ್ದರು.
ರಾಷ್ಟ್ರಕವಿ ಕುವೆಂಪು ತಾವು ರಂಗಭೂಮಿಗಾಗಿ ನಾಟಕ ಬರೆಯಲಿಲ್ಲವೆಂದು ಅನೇಕ ಕಡೆ ಹೇಳಿದ್ದರು. ಆದರೆ, 80ರ ದಶಕದಿಂದಲೇ ಕುವೆಂಪು ಅವರ ಎಲ್ಲ ನಾಟಕಗಳೂ ದೊಡ್ಡ ಯಶಸ್ಸನ್ನು ಕಂಡವು. ಕುವೆಂಪು ನಾಟಕ ರಚನೆಯನ್ನು ವೃತ್ತಿಯಾಗಿ ಮಾಡಲಿಲ್ಲ. ಆದರೆ, ಅನೇಕರು ರಂಗಭೂಮಿಯಲ್ಲಿ ವೃತ್ತಿಯಾಗಿ ತೊಡಗಿಸಿಕೊಂಡಿದ್ದಾರೆ. ನಾಟಕ ರಚನೆಯಲ್ಲೂ ಪ್ರಯೋಗಗಳು ಆಗಬೇಕು. ಈ ನಿಟ್ಟಿನಲ್ಲಿ ಇಂತಹದ್ದೊಂದು ರಾಷ್ಟ್ರೀಯಮಟ್ಟದ ರಂಗೋತ್ಸವ ಪ್ರೇರಣೆಯಾಗಲಿ.