ಎಸ್‌ಡಿಪಿಐಗೆ ಜಮೀರ್ ಫಂಡಿಂಗ್ ಮಾಡಿಲ್ಲ ಅನ್ಸುತ್ತೆ: ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ

KannadaprabhaNewsNetwork |  
Published : Apr 12, 2026, 01:30 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಸಚಿವ ಜಮೀರ್ ಅಹಮ್ಮದ್ ಫಂಡಿಂಗ್ ಮಾಡಿದ್ದಾರೆಂದು ಅನಿಸುವುದಿಲ್ಲ. ಚುನಾವಣೆಯಲ್ಲಿ ಜಮೀರ್ ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿಗೆ ಸಚಿವ ಜಮೀರ್ ಅಹಮ್ಮದ್ ಫಂಡಿಂಗ್ ಮಾಡಿದ್ದಾರೆಂದು ಅನಿಸುವುದಿಲ್ಲ. ಚುನಾವಣೆಯಲ್ಲಿ ಜಮೀರ್ ನಮಗೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹಮ್ಮದ್ ದಾವಣಗೆರೆಗೆ ಬಂದು, ನನಗೆ ಸಪೋರ್ಟ್ ಮಾಡಿದ್ದಾರೆ. ಇಲ್ಲಿ ಜಮೀರ್ ಸಹಕಾರ ನೀಡಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿಗೆ ಫಂಡಿಂಗ್ ಮಾಡಿದ್ದಾರೆಂದು ಅನಿಸುವುದಿಲ್ಲ ಎಂದರು.

ಚುನಾವಣೆಗೆ ನಿಲ್ಲುವುದೇ ಗೆಲ್ಲುವುದಕ್ಕೆಂದು. ಯಾರಾದರೂ ಸೋಲುತ್ತೇವೆಂದು ಹೇಳುತ್ತಾರಾ? ಆದರೆ, ಜನರ ದೃಷ್ಟಿಯಲ್ಲಿ ನಮ್ಮ ಮನೆತನ ಹಾಗೂ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಲ್ಪಸಂಖ್ಯಾತರಲ್ಲಿ ಅಸಮಾಧಾನವಿಲ್ಲ. ಎಲ್ಲರೂ ಒಟ್ಟಿಗೆ ಕುಳಿತು ತೀರ್ಮಾನ ಮಾಡಿಯೇ, ಅಭ್ಯರ್ಥಿ ಆಯ್ಕೆ ಮಾಡಿದ್ದು. ಎಲ್ಲರ ಅಭಿಪ್ರಾಯ ಕೇಳಿಯೇ ಹೈಕಮಾಂಡ್‌ ಅಭ್ಯರ್ಥಿ ಘೋಷಣೆ ಮಾಡಿದ್ದು ಎಂದು ಅವರು ಹೇಳಿದರು.

- - -

* ಬುದ್ಧಿವಂತರಿಗೆ ಸೇರಿಸಲ್ಲ ಅಂದೋನು ಬುದ್ಧಿವಂತನಾ?: ಎಸ್ಸೆಸ್ಸೆಂ

- ಮೂರು ಸಲ ಜಬ್ಬಾರ್‌ಗೆ ಅಪ್ಪಾರು, ನಾನು ಸೇರಿಯೇ ಎಂಎಲ್ಸಿ ಮಾಡಿಸಿದ್ದೇವೆ

- ಪಕ್ಷದ ಅನ್ನ ತಿಂದ ಮೇಲೆ ಪಕ್ಷದ ಕೆಲಸ ಮಾಡ್ಬೇಕು, ಕರೆಯಲಿ ಅನ್ನೋದು ಅಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶಾಮನೂರು ಕುಟುಂಬ ಬುದ್ಧಿವಂತರನ್ನು ಹತ್ತಿರ ಸೇರಿಸೊಲ್ಲ ಅಂದವನು ಬುದ್ಧಿವಂತ ಅಂತಾನಾ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೇ ಹೈಕಮಾಂಡ್ ಇತ್ತು. ಏನೇನು ನಡೆದಿದೆ ಅಂತಾ ತಲೆಕೆಡಿಸಿಕೊಂಡಿಲ್ಲ. ತನಗೆ ಪ್ರಚಾರಕ್ಕೆ ಕರೆದಿಲ್ಲವೆಂಬ ಹೇಳಿಕೆ ನೀಡಿದ್ದಾರೆ. ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು ಎಂದು ಜಬ್ಬಾರ್‌ಗೆ ಹೇಳಿಕೆಗೆ ಕಿಡಿಕಾರಿದರು.

ಯಾರಾದರೂ ಸಹಾಯ ಮಾಡಿದರೂ ಋಣ ಇಟ್ಟುಕೊಳ್ಳಬೇಕು. ಮೂರು ಅವಧಿಗೆ ಅಪ್ಪ (ಶಾಮನೂರು ಶಿವಶಂಕರಪ್ಪ) ಹಾಗೂ ನಾನು ಸೇರಿಯೇ, ಎಂಎಲ್‌ಸಿ ಮಾಡಿಸಿದ್ದು. ಮೂರು ಬಾರಿ ಎಂಎಲ್‌ಸಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಅಂತಹ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕು. ಅವ್ರು ಕರೆಯಬೇಕು, ಇವ್ರು ಕರೆಯಬೇಕು ಅನ್ನೋದಲ್ಲ. ಕೆಲಸಕ್ಕೆ ಬಾರದೇ ಇರುವುದನ್ನು ಮಾತನಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಹೈಕಮಾಂಡ್ ಹೇಳಿದ್ದನ್ನು ಚಾಚೂ ತಪ್ಪದೇ ಮಾಡುವುದು ಪಕ್ಷದ ಪ್ರತಿಯೊಬ್ಬರ ಕೆಲಸವಾಗಿರುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣೆಯಲ್ಲಿ ನಮಗೆ ಒಳ್ಳೆಯ ರೀತಿಯಲ್ಲೇ ಗೆಲುವು ಬರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಹಿಡಿದಿದ್ದಾರೆ. ಸಮರ್ಥನಿಗೆ ಆಶೀರ್ವಾದ ಮಾಡಿದ್ದಾರೆ. ದಕ್ಷಿಣ ಕ್ಷೇತ್ರದ ಕಾಂಗ್ರೆಸ್ಸಿನ ಭದ್ರ ಕೋಟೆ. ಅದು ಭದ್ರಕೋಟೆಯಾಗಿಯೇ ಇರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಮುಗಿಸಿದ ನಂತರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದೆ. ನನಗೆ ಯಾರೂ ಈ ವಿಚಾರದ ಬಗ್ಗೆ ಕರೆ ಮಾಡಿಲ್ಲ. ನನಗೆ ಅದರ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲ. ಅದರ ಬಗ್ಗೆ ಗೊತ್ತೂ ಇಲ್ಲ ಎಂದು ಅವರು ತಿಳಿಸಿದರು.

ನಾನು 1994ರಿಂದಲೂ ಚುನಾವಣೆ ಮಾಡುತ್ತಿದ್ದೇನೆ. ನನಗೆ ಇದು 16ನೇ ಚುನಾವಣೆಯಾಗಿದೆ. ಹಿಂದಿನ ಚುನಾವಣೆಗಳಷ್ಟು ಇದೇನೇ ಟೈಟ್ ಆಗಿಲ್ಲ. 2013ರ ಚುನಾವಣೆಯ ಫಲಿತಾಂಶ ಮರುಕಳಿಸುತ್ತದೆಂಬ ಸಂಪೂರ್ಣ ವಿಶ್ವಾಸ, ನಂಬಿಕೆ ನನಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅದರದ್ದೇ ಆದ ಸಾಂಪ್ರಾದಾಯಿಕ ಮತದಾರರಿದ್ದಾರೆ. ಅಲ್ಲದೇ, ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯೆ ಆಗಿದೆ. ಇಲ್ಲಿ ಕಾಂಗ್ರೆಸ್ ಖಂಡಿತ ಜಯ ಸಾಧಿಸಲಿದೆ ಎಂದು ಅವರು ಹೇಳಿದರು.

ಚುನಾವಣೆ ವೇಳೆ ನಾಯಕರ ನಡುವಿನಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗಿದೆ. ದಾವಣಗೆರೆ ದಕ್ಷಿಣದ ಚುನಾವಣೆಯಲ್ಲಿ ನಾವು ಗೆದ್ದರೆ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಇಲ್ಲದಿದ್ದರೆ, ಕಡಿಮೆ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ. ಇದಂತೂ ಸ್ಪಷ್ಟವೆಂಬ. ಗೆಲ್ಲುವುದಂತೂ ನಿಶ್ಚಿತ ಎಂಬ ವಿಶ್ವಾಸ ನಮಗಿದೆ ಎಂದು ಎಸ್‌.ಎಸ್‌. ಮಲ್ಲಿಕಾರ್ಜುನ ಪುನರುಚ್ಛರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

16ಕ್ಕೆ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ರ್‍ಯಾಲಿ
ಏ.14ರಿಂದ ವಿಶೇಷ ಸುದರ್ಶನ ಕ್ರಿಯಾ ಶಿಬಿರ