ನವದೆಹಲಿ: ಮುಂಗಾರು ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶವ್ಯಾಪ್ತಿಯಲ್ಲಿ ಬರದ ಛಾಯೆ ಆವರಿಸಿದ್ದು, ಲಭ್ಯವಿರುವ ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ನೀರಿನ ಕೊರತೆ ಎದುರಾಗುವುದನ್ನು ತಪ್ಪಿಸುವ ಸಲುವಾಗಿ, ಕೃಷಿ ಹಾಗೂ ಇತರ ನೀರಾವರಿ ಉದ್ದೇಶಗಳಿಗೆ ಕಾವೇರಿ ನೀರನ್ನು ಬಳಸಬಾರದು ಎಂದು ಕರ್ನಾಟಕ ಮತ್ತು ತಮಿಳನಾಡಿಗೆ ‘ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ’ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದೇ ವೇಳೆ, ನೀರು ಹಂಚಿಕೆ ವಿಚಾರವಾಗಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಲು ಪ್ರಾಧಿಕಾರ ಸೂಚನೆ ನೀಡಿದ್ದು, ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದಂತಾಗಿದೆ.

ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಪ್ರಾಧಿಕಾರದ ಸಭೆ

ದೆಹಲಿಯಲ್ಲಿ ಬುಧವಾರ ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದಲ್ಲಿ ಪ್ರಾಧಿಕಾರದ ಸಭೆ ನಡೆಯಿತು. ತಮಿಳುನಾಡು ಎಂದಿನಂತೆ ನೀರು ಬಿಡುಗಡೆಗೆ ಪಟ್ಟು ಹಿಡಿಯಿತು. ಜೂನ್‌ ಮತ್ತು ಜುಲೈ ತಿಂಗಳಲ್ಲಿ ತಮಿಳುನಾಡಿಗೆ ಕರ್ನಾಟಕ 28 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ, ಈವರೆಗೆ ಕೇವಲ 3.4 ಟಿಎಂಸಿಯಷ್ಟು ನೀರನ್ನು ಮಾತ್ರ ಹರಿಸಿದೆ. ಹೀಗಾಗಿ, ಸುಪ್ರೀಂಕೋರ್ಟ್‌ ನಿರ್ದೇಶನದ ಪ್ರಕಾರ ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಪಟ್ಟು ಹಿಡಿಯಿತು.


ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ, ರಾಜ್ಯದಲ್ಲಿ ಮುಂಗಾರು ಕೊರತೆಯಿಂದ ಬರದ ಛಾಯೆ ಆವರಿಸಿದೆ. ಕಾವೇರಿ ಜಲಾನಯನ ಪ್ರದೇಶವ್ಯಾಪ್ತಿಯಲ್ಲಿ ತೀವ್ರ ನೀರಿನ ಕೊರತೆ ಎದುರಾಗಿದ್ದು, ಜಲಾಶಯಗಳಿಗೆ ಕನಿಷ್ಟ ಪ್ರಮಾಣದ ನೀರು ಹರಿದು ಬಂದಿದೆ. ಬೆಂಗಳೂರು ಸೇರಿದಂತೆ ನಗರ ಹಾಗೂ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದೇ ಕಷ್ಟಕರವಾಗಿದೆ. ಐಎಂಡಿ ಪ್ರಕಾರ ಮುಂದಿನ ದಿನಗಳು ಮತ್ತಷ್ಟು ಕಷ್ಟಕರವಾಗಿವೆ. ಹೀಗಾಗಿ, ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿತು.

ಉಭಯ ರಾಜ್ಯಗಳ ವಾದ ಆಲಿಸಿದ ಪ್ರಾಧಿಕಾರ, ಸಾಧಕ-ಬಾಧಕಗಳನ್ನು ಪರಿಶೀಲಿಸಿ, ನೀರು ಹಂಚಿಕೆ ವಿಚಾರವಾಗಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ರಾಜ್ಯಗಳಿಗೆ ಸೂಚನೆ ನೀಡಿತು. ಇದು ಬಹಳ ಸಂಕಷ್ಟದ ವರ್ಷ. ಹೀಗಾಗಿ, ಕುಡಿಯಲು ಮಾತ್ರ ನೀರು ಬಳಸಿ. ಕೃಷಿಗೆ ಕಾವೇರಿ ನೀರಿನ ಬಳಕೆ ಮಾಡಬೇಡಿ ಎಂದು ಉಭಯ ರಾಜ್ಯಗಳಿಗೆ ಎಚ್ಚರಿಕೆ ನೀಡಿತು. ಇದರಿಂದಾಗಿ ಕರ್ನಾಟಕಕ್ಕೆ ತಾತ್ಕಾಲಿಕ ರಿಲೀಫ್‌ ಸಿಕ್ಕಂತಾಗಿದೆ.

ಈ ಮಧ್ಯೆ, ಜುಲೈ 28ರಂದು ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಸಭೆ ನಿಗದಿಯಾಗಿದೆ.

ಪ್ರಾಧಿಕಾರದ ಸೂಚನೆಗಳು

- ನಿನ್ನೆ ದೆಹಲಿಯಲ್ಲಿ ನಡೆದ ಕಾವೇರಿ ನದಿ ನೀರು ನಿರ್ವಹನಾ ಪ್ರಾಧಿಕಾರದ ಮಹತ್ವದ ಸಭೆ

- ಕರ್ನಾಟಕ 28 ಟಿಎಂಸಿ ನೀರು ಬದಲು 3.4 ಟಿಎಂಸಿ ನೀರು ಹರಿಸಿದೆ ಎಂದ ತಮಿಳ್ನಾಡು

- ಈ ಸಲ ಕರ್ನಾಟಕದಲ್ಲಿ ಭಾರೀ ಬರಗಾಲ ಇದೆ ಎಂಬುದನ್ನು ಮನಗಂಡ ಪ್ರಾಧಿಕಾರ

- ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯಲು ಸೂಚನೆ

- ಇದರಿಂದ ಕಾವೇರಿಯಲ್ಲಿ ನೀರಿಲ್ಲದೇ ಬವಣೆ ಅನುಭವಿಸುತ್ತಿರುವ ಕರ್ನಾಟಕಕ್ಕೆ ರಿಲೀಫ್‌