ಎನ್.ಪಂಪನಗೌಡ ಬಾದನಹಟ್ಟಿ
ಕುರುಗೋಡು: ಈ ಬಾರಿ ಮುಂಗಾರು ಮಳೆ ಮರೀಚಿಕೆಯಾಗಿದೆ. ಪಟ್ಟಣ ಸೇರಿದಂತೆ ನದಿ ದಡದ ಭೂಮಿಗಳು ಪಂಪ್‌ಸೆಟ್ ನಂಬಿ ಬೆಳೆದ ಭತ್ತದ ಬೆಳೆಗಳು ನೀರಿಲ್ಲದೇ ಬಣಗುಡುತ್ತಿವೆ. ಮೂರು ರಾಜ್ಯದ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ನೀರು ಇಲ್ಲದಂತಾಗಿರುವುದು, ಮೇಲ್ಭಾಗದ ಮಲೆನಾಡಿನಲ್ಲಿ ಮಳೆ ಬಾರದೇ ಇರದಿರುವುದರಿಂದ ಬೆಳೆ ಒಣಗುತ್ತಿದೆ.ನದಿಯಲ್ಲಿ ನೀರು ಬತ್ತಿದ್ದು, ಅನ್ನದಾತರ ಜೀವನವೂ ದುಸ್ತರವಾಗಿದೆ. ಸಮೀಪದ ಎಮ್ಮಿಗನೂರು, ಮಣ್ಣೂರು ಸೂಗೂರು, ರುದ್ರಪಾದ, ನಡವಿ, ಮಣ್ಣೂರು ಕ್ಯಾಂಪ್,ರಾಮಚಂದ್ರಾಪುರ ಕ್ಯಾಂಪ್, ಸಣಾಪುರ, ಇಟಗಿ, ನಂ.2 ಮುದ್ರಾಪುರ ಸೇರಿದಂತೆ ನದಿ ಆಧರಿಸಿದ ಸಾವಿರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ಭತ್ತ ಬೆಳೆ ಬೆಳೆಯಲಾಗಿದೆ. ರೈತರು 1 ಎಕರೆಗೆ ಗೊಬ್ಬರದೊಂದಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ. ಈಗ ಬೆಳೆದ ಬೆಳೆ ತೆಗೆದುಕೊಳ್ಳಲು ಹರಸಾಹಸಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನದಿಯಲ್ಲಿ ನೀರಿನ ಹರಿವು ಬತ್ತಿದ್ದು, ಬೆಳೆಗಳಿಗೆ ನೀರು ಹರಿಸುವುದು ತ್ರಾಸದಾಯಕವಾಗಿದೆ.
ಮಧ್ಯ ಪ್ರದೇಶದ ಯುದ್ಧದಿಂದಾಗಿ ಡೀಸೆಲ್, ಪೆಟ್ರೋಲ್, ರಸಗೊಬ್ಬರ ಬೆಲೆಗಳು ಗಗನಕ್ಕೇರಿದೆ. ಅನಿವಾರ್ಯವಾಗಿ ಬೆಳೆದ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಧ್ಯದಲ್ಲಿ ರೈತರ ಬದುಕು ನೆಲಕಚ್ಚಿದೆ.ರೈತರು ಕಳೆದ ಬಾರಿ ಕ್ರಸ್ಟ್ ಗೇಟ್ ಕಟ್ಟಾದ ಪರಿಣಾಮ ಎದುರಿಸಿದ್ದರು. ಈಗ ಜಲಾಶಯದ ಹೊಸ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸಿದ ಹಿನ್ನೆಲೆ ಈ ಬಾರಿಯಾದರೂ ರೈತರ ಬದುಕಿಗೆ ಬೆಳೆಗಳು ಆಸರೆಯಾಗಬಹುದು ಎಂಬ ನಿರೀಕ್ಷೆ ಹೊಂದಿದ್ದರು. ಆದರೆ, ಈ ಸಲ ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗೆ ನೀರಿಲ್ಲದಂತಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿದೆ.
ಅಂತರ್ಜಲ ಕುಸಿತ:
ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಇದರಿಂದ ಅಂತರ್ಜಲ ಕೂಡ ಸಂಪೂರ್ಣವಾಗಿ ಕುಸಿದಿದೆ. ರೈತರ ಬದುಕು ಅತಂತ್ರದಲ್ಲಿ ಸಾಗಿದೆ. ನದಿಗೆ ನೀರು ಹರಿಸಿದರೆ ಬೆಳೆಗಳನ್ನು ಉಳಿಸಲು ಸಾಧ್ಯವಾಗಲಿದೆ.
ಜಲಚರ ಸಾವು:ನೀರು ಇಲ್ಲದೇ ನದಿ ಬರಿದಾಗಿ ಒಣಗುತ್ತಿರುವ ಪರಿಣಾಮ ಮೀನು, ಏಡಿ, ಮೊಸಳೆ ಸೇರಿದಂತೆ ಪ್ರಾಣಿ- ಪಕ್ಷಿಗಳು ವಾಸಿಸುವುದು ತುಂಬ ಕಷ್ಟಕರವಾಗಿದೆ. ಎಲ್ಲೆಂದರಲ್ಲಿ ನೀರು, ಆಹಾರ ಇಲ್ಲದೇ ಸತ್ತು ಬಿದ್ದಿವೆ.
ನದಿ ನೀರನ್ನೇ ಅವಲಂಬಿಸಿದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ನದಿಯಲ್ಲಿ ನೀರು ಇಲ್ಲ. ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದೆ. ನದಿ ಭಾಗದ ರೈತರು ಸುಮಾರು ಸಾವಿರಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಆದರೆ, ಪಂಪ್‌ಸೆಟ್‌ನ ಬೆಳೆಗಳು ಒಣಗುತ್ತಿವೆ. ಇದರಿಂದ ಬೆಳೆ ರಕ್ಷಣೆ ಕಷ್ಟಕರವಾಗಿದೆ. ನದಿಗೆ ನೀರು ಬಿಟ್ಟರೆ ಪಂಪ್‌ಸೆಟ್ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯ ಎನ್ನುತ್ತಾರೆ ಮಣ್ಣೂರು ಗ್ರಾಮದ ಪ್ರಗತಿಪರ ರೈತ ಪ್ರಭು.