ಉಡುಪಿ: ತೆಲಂಗಾಣದ ನಂತರ ಪ್ರಥಮ ಬಾರಿಗೆ ಕರ್ನಾಟಕದ ಉಡುಪಿ ಜಿಲ್ಲೆಯ 9 ಪಂಚಾಯಿತಿಗಳ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲ್ ಬಂಕ್, ಇ.ವಿ. ಚಾರ್ಜಿಂಗ್ ಮತ್ತು ಭಾರತ್ ಕೆಫೆಗಳನ್ನು ಮುಂದಿನ ವರ್ಷದೊಳಗೆ ಆರಂಭಿಸಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಉಡುಪಿಯಲ್ಲಿ ಭಾರತ್ ಪೆಟ್ರೋಲಿಯಂ ಅಧಿಕಾರಿಗಳ ಮತ್ತು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿದ ಸಂಸದರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು. ಜಿಲ್ಲೆಯ ಆಯ್ದ ಪಂಚಾಯಿತಿಗಳನ್ನು ಹಾದು ಹೋಗುವ ಹೆದ್ದಾರಿಗಳಲ್ಲಿ ಭಾರತ್ ಪೆಟ್ರೋಲಿಯಂ ಸಂಸ್ಥೆ ಮೂಲಕ ಪೆಟ್ರೋಲ್ ಬಂಕ್, ಇವಿ ಚಾಜಿಂಗ್ ಸ್ಟೇಷನ್, ಸಿಎನ್‌ಜಿ ಮತ್ತು ಭಾರತ್ ಕೆಫೆಗಳನ್ನು ನಿರ್ಮಿಸಲಾಗುವುದು. ಕನಿಷ್ಠ ಇನ್ನು ಆರು ತಿಂಗಳಲ್ಲಿ ಅವುಗಳು ಕಾರ್ಯರಂಭಿಸುವುದಕ್ಕೆ ಕೇಂದ್ರ ಸರ್ಕಾರ ಗುರಿ ನೀಡಿದೆ ಎಂದು ವಿವರಿಸಿದರು.

ಗ್ರಾಪಂಗೆ ಸೇರಿದ ಜಾಗದಲ್ಲಿ ಈ ಪಂಪ್‌, ಕೆಫೆಗಳು ಕಾರ್ಯನಿರ್ವಹಿಸಲಿದ್ದು, ಈ ಗ್ರಾಪಂಗಳಿಗೆ ಭಾರತ್ ಪೆಟ್ರೋಲಿಯಂ ಬಾಡಿಗೆ ಮತ್ತು ವ್ಯವಹಾರದಲ್ಲಿ ಕಮಿಷನ್ ನೀಡುತ್ತದೆ. ಇದರಿಂದ ಪಂಚಾಯಿತಿಗಳ ಆರ್ಥಿಕ ಮತ್ತು ಆಡಳಿತಾತ್ಮಕ ಶಕ್ತಿ ಹೆಚ್ಚಲಿದೆ ಎಂದು ಕೋಟ ಹೇಳಿದ್ದಾರೆ.ಗ್ರಾಪಂಗಳಲ್ಲಿ ನಡೆಸುವ ಪೆಟ್ರೋಲ್ ಪಂಪ್‌ಗಳಲ್ಲಿ ಇವಿ ಚಾಜಿಂಗ್, ಸಿಎನ್‌ಜಿ ವಿತರಣೆಯ ಜೊತೆಗೆ ಡೀಸೆಲ್ ಸಹಿತ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಮಾರಾಟಕ್ಕೂ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಆಯ್ಕೆಯಾದ ಪಂಚಾಯಿತಿಗಳ ನಿವೇಶನ ದಾಖಲೆಗಳನ್ನು ಸಂಸದರು ಕೋಟ ಭಾರತ್ ಪೆಟ್ರೋಲಿಯಂ ಅಧಿಕಾರಿಗಳಿಗೆ ಹಸ್ತಾಂತರಿಸಿ ಶೀಘ್ರವೇ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಭಾರತ್ ಪೆಟ್ರೋಲಿಯಂನ ಪ್ರಾದೇಶಿಕ ವ್ಯವಸ್ಥಾಪಕ ವಿಪಿನ್ ದಾಸ್ ವಂಶ್ವಾಲ್, ಉಡುಪಿ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಸಹಾಯಕ ಕಾರ್ಯದರ್ಶಿ ಜೇಮ್ಸ್ ಡಿಸಿಲ್ವಾ, ಕಾರ್ಕಳ ತಾಪಂ ಇಓ ಪ್ರಶಾಂತ್ ಎಂ.ಎನ್, ಉಡುಪಿ ತಾಪಂ ಇಓ ವಿಜಯ ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯಿತಿ ಮೂಲಕ ಪೆಟ್ರೋಲ್ ಪಂಪ್ ಗಳ ನಿರ್ಮಾಣದ ಯೋಜನೆ ವೈಯಕ್ತಿಕವಾಗಿ ತನಗೆ ಖುಷಿ ತಂದಿದೆ ಎಂದು ಸಂಸದ ಕೋಟ ಮಾಧ್ಯಮಗಳಿಗೆ ತಿಳಿಸಿದರು.


ಎಲ್ಲೆಲ್ಲಿ ಪಂಪ್-ಕೆಫೆ-ಸ್ಟೇಷನ್ ?: ಪ್ರಥಮ ಹಂತದಲ್ಲಿ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಮುದ್ರಾಡಿ, ಬೆಳ್ವೆ, ಅಲ್ಬಾಡಿ, ಕಾರ್ಕಳ ತಾಲೂಕಿನ ಮುಡಾರು ಬೆಳ್ಮಣ್ಣು, ಸಾಣೂರು, ಕುಕ್ಕಂದೂರು, ಬೈಲೂರು, ಉಡುಪಿ ತಾಲೂಕಿನ ತೆಂಕನಿಡಿಯೂರು ಪಂಚಾಯಿತಿಗಳಲ್ಲಿ ನಿವೇಶನ ಗುರುತಿಸಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲಿ ಸಮೀಕ್ಷೆ ನಡೆಯುತ್ತಿದ್ದು. ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಪಂಚಾಯಿತಿ ಪೆಟ್ರೋಲ್ ಬಂಕ್ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಕೋಟ ತಿಳಿಸಿದರು.