ಬೋವಿ ಸಮಾಜದ ಬಡವರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅರ್ಹರು ಸದುಪಯೋಗ ಪಡೆಯಬೇಕು.
ಗದಗ ಜಿಲ್ಲೆಯಲ್ಲಿ 54 ಫಲಾನುಭವಿಗಳಿಗೆ 54 ಲಕ್ಷ ನೆರವು, ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕಿರು ಉದ್ಯಮಗಳಿಗೆ ಪ್ರೋತ್ಸಾಹ
ಕನ್ನಡಪ್ರಭ ವಾರ್ತೆ ಗದಗಬೋವಿ ಸಮಾಜದ ಬಡವರು, ನಿರುದ್ಯೋಗಿಗಳು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದ್ದು, ಅರ್ಹರು ಸದುಪಯೋಗ ಪಡೆಯಬೇಕು ಎಂದು ನಿಗಮದ ಅಧ್ಯಕ್ಷ ಎಂ. ರಾಮಪ್ಪ ಕರೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011ರ ಜನಗಣತಿಯಂತೆ ರಾಜ್ಯದಲ್ಲಿ 11.20 ಲಕ್ಷ ಬೋವಿ ಜನಸಂಖ್ಯೆಯಿದ್ದು, ಸಮುದಾಯದ ಏಳ್ಗೆಗಾಗಿ 2016ರಲ್ಲಿ ನಿಗಮ ಸ್ಥಾಪಿಸಲಾಗಿದೆ. 2022-23ರಿಂದ 2025-26ನೇ ಸಾಲಿನವರೆಗೆ ಗದಗ ಜಿಲ್ಲೆಯ 54 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಒಟ್ಟು 54 ಲಕ್ಷ ನೆರವು ನೀಡಲಾಗಿದೆ.ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಕಿರು ಉದ್ಯಮಗಳಿಗೆ 1 ಲಕ್ಷ ಘಟಕ ವೆಚ್ಚದಲ್ಲಿ 50 ಸಾವಿರ ಸಹಾಯಧನ ಹಾಗೂ ಶೇ.4ರ ಬಡ್ಡಿದರದಲ್ಲಿ 50 ಸಾವಿರ ಸಾಲ (36 ಕಂತು) ನೀಡಲಾಗುತ್ತಿದೆ. ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯಡಿ ಕನಿಷ್ಠ 10 ಮಹಿಳೆಯರಿರುವ ಸ್ವಸಹಾಯ ಸಂಘಗಳಿಗೆ 5 ಲಕ್ಷ (2.50 ಲಕ್ಷ ಸಹಾಯಧನ, 2.50 ಲಕ್ಷ ಸಾಲ) ಆರ್ಥಿಕ ನೆರವು ನೀಡಲಾಗುತ್ತಿದೆ. ಅಲ್ಲದೆ ಕುರಿ ಮೇಕೆ ಸಾಕಾಣಿಕೆ, ವಾಹನ ಖರೀದಿ ಸಹಾಯಧನ, ಭೂರಹಿತ ಮಹಿಳೆಯರಿಗೆ ಭೂ ಒಡೆತನ, ಗಂಗಾ ಕಲ್ಯಾಣ ಹಾಗೂ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ.
ಸಮಾಜದವರು ಕೇವಲ ನಿಗಮವನ್ನೇ ಅವಲಂಬಿಸದೆ ಇತರ ಇಲಾಖೆಗಳ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ, ಬ್ಯಾಂಕ್ ಸಾಲ ಪಡೆಯಲು ದಾಖಲೆಗಳ ಕೊರತೆಯಾಗದಂತೆ ನಿಗಮದಿಂದಲೇ ಪರಿಹಾರ ಒದಗಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಿಥುನ್ ಎಚ್.ಎನ್, ನಿಗಮದ ಪ್ರಧಾನ ವ್ಯವಸ್ಥಾಪಕ ಶಿವಸ್ವಾಮಿ, ರವಿ ಗುಂಜಿಕರ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.ಸಮಾಜದವರು ಕೇವಲ ನಿಗಮವನ್ನೇ ಅವಲಂಬಿಸದೆ ಇತರ ಇಲಾಖೆಗಳ ಸೌಲಭ್ಯಗಳನ್ನೂ ಬಳಸಿಕೊಳ್ಳಬೇಕು. ಶಿಕ್ಷಣಕ್ಕೆ ಆದ್ಯತೆ ನೀಡುವುದರ ಜೊತೆಗೆ, ಬ್ಯಾಂಕ್ ಸಾಲಕ್ಕೆ ದಾಖಲೆಗಳ ಕೊರತೆಯಾಗದಂತೆ ನಿಗಮದಿಂದಲೇ ಪರಿಹಾರ ಒದಗಿಸಲಾಗುವುದು.ಎಂ. ರಾಮಪ್ಪ, ಅಧ್ಯಕ್ಷರು, ಕರ್ನಾಟಕ ಬೋವಿ ಅಭಿವೃದ್ಧಿ ನಿಗಮ