ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಸ್ವಾಭಿಮಾನದ ರಕ್ಷಣೆಯಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಕನ್ನಡಪ್ರಭ ವಾರ್ತೆ ನರಗುಂದ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡಿಗರ ಸ್ವಾಭಿಮಾನದ ರಕ್ಷಣೆಯಲ್ಲಿ ಮಠಮಾನ್ಯಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆ ಹಿನ್ನೆಲೆ ಕನ್ನಡ ನಾಡು-ನುಡಿ ಕಟ್ಟುವಲ್ಲಿ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಕೊಡುಗೆ ಅಪಾರವಾದುದು ಎಂದು ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯ ಕಚೇರಿ ಅಧೀಕ್ಷಕ ರಮೇಶ ಕೊರ್ಲಹಳ್ಳಿ ಹೇಳಿದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಶ್ರೀ ದೊರೆಸ್ವಾಮಿ ವಿರಕ್ತಮಠ ಹಾಗೂ ಶ್ರೀ ಮಾದಾರ ಚನ್ನಯ್ಯ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ತಾಲೂಕಿನ ಶಿರೋಳ ಗ್ರಾಮದ ಶ್ರೀ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಸಮುದಾಯ ಭವನದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಾಭಿಮಾನಿ ಕನ್ನಡಿಗರು ಉಪನ್ಯಾಸ ಸರಣಿ-2026 ಸಮಾರಂಭದಲ್ಲಿ ಕನ್ನಡ ಕಟ್ಟುವಲ್ಲಿ ಮಠಮಾನ್ಯಗಳ ಪಾತ್ರ ವಿಷಯದ ಕುರಿತು ಮಾತನಾಡಿದರು.

ಗಡಿನಾಡಿನ ಭಾಗದಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಗದುಗಿನ ಸಿದ್ದಲಿಂಗ ಶ್ರೀಗಳು ಹಾಗೂ ಪೂಜ್ಯ ಗುರುಬಸವ ಶ್ರೀಗಳ ಸೇವೆ ಅನನ್ಯವಾದುದು ಎಂದರು.

ಕನ್ನಡದ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಅಪಾರ ಕಾಳಜಿ ಹೊಂದಿದ್ದ ಈರ್ವರು ಶ್ರೀಗಳು ಕನ್ನಡಪರ ಚಳವಳಿಗಳಿಗೆ ನೈತಿಕ ಬಲ ತುಂಬಿದ ಮಹಾನ್ ಚೇತನರಾಗಿದ್ದರು. ಮಠಗಳು ಕೇವಲ ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿರದೆ, ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ ಈ ಇಬ್ಬರು ಪೂಜ್ಯರ ಕನ್ನಡಪರ ಕಾಳಜಿ ಮತ್ತು ಕಾರ್ಯಗಳು ಜೀವಂತ ನಿದರ್ಶನವಾಗಿವೆ. ಕನ್ನಡ ನಾಡು-ನುಡಿಯ ಸೇವೆಯೇ ನಾಡಿನ ಸೇವೆ ಎಂಬ ಆಶಯದೊಂದಿಗೆ ಇಂತಹ ಮಹನೀಯರ ಕಾರ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಕನ್ನಡದ ಕುಲಗುರುಗಳಾದ ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳು, ಸಿಂದಗಿಯಲ್ಲಿ ಆಶೀರ್ವಚನದ ಮೂಲಕ ಗೋಕಾಕ ಚಳವಳಿಗೆ ನಾಂದಿಹಾಡಿದರು. ಒಂದು ವಿಶ್ವವಿದ್ಯಾಲಯ ಮಾಡಬಹುದಾದ ಪುಸ್ತಕ ಪ್ರಕಟಣೆಯನ್ನು ಕೈಂಕರ್ಯವನ್ನು ಶ್ರೀಗಳು ಮಾಡಿರುವುದು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ ಎಂದರು.

ಗಡಿ ನಾಡಿನ ಪರಿಸರದಲ್ಲಿ ಕನ್ನಡ ಭಾಷೆ ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಪೂಜ್ಯ ಗುರುಬಸವ ಶ್ರೀಗಳು ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸಿದ್ದಾರೆ. ಕನ್ನಡ ಶಾಲೆಗಳ ಪ್ರೋತ್ಸಾಹ, ಕನ್ನಡಪರ ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಮಾಡುವ ಮೂಲಕ ಕನ್ನಡಿಗರಲ್ಲಿ ಭಾಷಾಭಿಮಾನ ಮೂಡಿಸಿ ಗಡಿನಾಡಿನಲ್ಲಿ ಕನ್ನಡದ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಪ್ರಕಾಶಗೌಡ ತಿರಕನಗೌಡ್ರ, ದ್ಯಾಮಣ್ಣ ಕಾಡಪ್ಪನವರ, ಬಸು ಪಾಟೀಲ, ಮಂಜು ಮೆಣಸಗಿ, ರವಿ ಮೆಣಸಗಿ, ಚನ್ನಬಸಪ್ಪ ತಿಗಡಿ, ಎಸ್.ವ್ಹಿ. ವಸ್ತ್ರದ, ಈರಣ್ಣ ಸೋನಾರ, ಪ್ರಾಚಾರ್ಯ ಬಿ.ಎಸ್. ಸಾಲಿಮಠ, ಚಂದ್ರಕಾಂತ ಕಾಡದೇವರಮಠ, ಮಹಾಂತೇಶ ಹಿರೇಮಠ ಇದ್ದರು.

ಕಿರಿಯ ತರಬೇತಿ ಅಧಿಕಾರಿ ಎಸ್.ವಿ. ಕುಪಸ್ತ ಕಾರ್ಯಕ್ರಮ ನಿರೂಪಿಸಿದರು.