ವಿಶ್ವದರ್ಶನ ಸೇವಾ, ಸ್ವರ್ಣ ಸಮೂಹ ಸಂಸ್ಥೆಯಿಂದ ನೆರವು

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದನ್ನು ಸರ್ಕಾರಗಳು ಆದ್ಯತೆಯ ವಿಷಯವಾಗಿ ಪರಿಗಣಿಸಬೇಕು. ಸಾರ್ವಜನಿಕರು ಮತ್ತು ಸಮಾಜಮುಖಿ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿದಾಗ ಸಾರ್ವಜನಿಕ ಸೇವೆಗಳು ಇನ್ನಷ್ಟು ಪರಿಣಾಮಕಾರಿಯಾಗುತ್ತವೆ ಎಂದು ವಿಶ್ವದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.

ತಾಲೂಕಿನ ಮಂಚಿಕೇರಿ ಹಾಗೂ ಮಾವಿನಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಶ್ವದರ್ಶನ ಸೇವಾದ ವತಿಯಿಂದ ಹುಬ್ಬಳ್ಳಿಯ ಉದ್ಯಮಿ ವಿ.ಎಸ್.ವಿ. ಪ್ರಸಾದ್ ಅವರ ಒಡೆತನದ ಸ್ವರ್ಣ ಸಮೂಹ ಸಂಸ್ಥೆ ಒದಗಿಸಿದ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಹಸ್ತಾಂತರಿಸಿ ಮಾತನಾಡಿದರು.

ವಿಶ್ವದರ್ಶನ ಶಿಕ್ಷಣ ಸಮೂಹವು ಪ್ರಾಥಮಿಕದಿಂದ ಪದವಿ ಹಂತದ ವರೆಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ₹೧೮ ಲಕ್ಷ ವಿದ್ಯಾರ್ಥಿ ವೇತನ ವಿತರಿಸಿದ್ದು, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಬಿಸಿಎ ಹಾಗೂ ಪತ್ರಿಕೋದ್ಯಮ ವಿಭಾಗಗಳಲ್ಲಿ ಪದವಿಯೊಂದಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವುದು ಸಂಸ್ಥೆಯ ಹೆಮ್ಮೆಯ ಸಾಧನೆಯಾಗಿದೆ ಎಂದರು.


ಮಂಚಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಡಾ. ಸೋಮನಾಥ ಪೂಜಾರಿ ಹಾಗೂ ಮಾವಿನಕಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಯಂತ್ರಗಳನ್ನು ಸ್ವೀಕರಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಹಿರಿಯ ರಂಗಕರ್ಮಿ ಆರ್.ಎನ್. ಭಟ್ಟ ದುಂಡಿ, ರಾಘವೇಂದ್ರ ಭಟ್ಟ ಹಾಸಣಗಿ ಮಾತನಾಡಿದರು. ಆರ್.ಜಿ. ಹೆಗಡೆ ಬೆದೆಹಕ್ಲು, ನಟರಾಜ ಗೌಡರ, ವಿನೇಶ್ ಭಟ್ಟ ಮಾಳಕೊಪ್ಪ, ರಾಜೀವ ಗೌಡ್ರು, ಗಣೇಶ ಹೆಗಡೆ, ಇಂಚರ, ವಿಶ್ವನಾಥ ಬಾವಣಕೊಪ್ಪ, ದೀಪಾ ಸಿದ್ದಿ ಉಪಸ್ಥಿತರಿದ್ದರು.