ಡಿಸಿಎಂ ಡಾ. ಜಿ. ಪರಮೇಶ್ವರ ಭೇಟಿಯಾದ ನಿವೇದಿತ್ ಆಳ್ವಾ ನೇತೃತ್ವದ ಉತ್ತರ ಕನ್ನಡ ಜಿಲ್ಲಾ ಕ್ರೈಸ್ತರ ನಿಯೋಗಕನ್ನಡಪ್ರಭ ವಾರ್ತೆ ಹಳಿಯಾಳ
ಉತ್ತರಕನ್ನಡ ಜಿಲ್ಲೆಯ ಯುವಕ-ಯುವತಿಯರಿಗೆ ಅದರಲ್ಲೂ ಮುಖ್ಯವಾಗಿ ಕ್ರಿಶ್ಚಿಯನ್ ಸಮುದಾಯದವರಿಗೆ ವಿದೇಶಕ್ಕೆ ತೆರಳಲು ಅಗತ್ಯವಿರುವ ಅವಿವಾಹಿತ ಪ್ರಮಾಣ ಪತ್ರ ನೀಡಲು ತಹಸೀಲ್ದಾರರು ಹಿಂದೇಟು ಹಾಕುತ್ತಿದ್ದು, ಅದಕ್ಕಾಗಿ ಜಿಲ್ಲಾಧಿಕಾರಿಗೆ ಸೂಕ್ತ ನಿರ್ದೇಶನ ನೀಡಿ ಅವಿವಾಹಿತ ಪ್ರಮಾಣ ಪತ್ರ ಪೊರೈಸಲು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ಬೆಂಗಳೂರಿಗೆ ತೆರಳಿದ ಉತ್ತರ ಕನ್ನಡ ಜಿಲ್ಲಾ ಕ್ರೈಸ್ತ ಮುಖಂಡರುಗಳ ನಿಯೋಗವು ನಿವೇದಿತ್ ಆಳ್ವಾ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಉತ್ತರ ಕನ್ನಡ ಜಿಲ್ಲೆಯ ಅನೇಕ ಯುವಕ-ಯುವತಿಯರು ಉದ್ಯೋಗ ಹಾಗೂ ಇತರ ಕಾರಣಗಳಿಗಾಗಿ ವಿದೇಶಕ್ಕೆ ತೆರಳುತ್ತಿರುತ್ತಾರೆ. ಹೀಗಿರುವಾಗ ಅವರಿಗೆ ನಿಯಮಾವಳಿಗಳ ಪ್ರಕಾರ ಅವಿವಾಹಿತ ಪ್ರಮಾಣಪತ್ರ ಅತ್ಯಂತ ಅಗತ್ಯವಾಗಿದೆ. ಆದರೆ ಜಿಲ್ಲೆಯ ತಹಸೀಲ್ದಾರರು ಈ ಪ್ರಮಾಣಪತ್ರವನ್ನು ನೀಡಲು ಅನಗತ್ಯವಾದ ವಿಳಂಬ ಮಾಡಿ ಅಲೆದಾಡಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಯುವಜನತೆಗೆ ವಿದೇಶದಲ್ಲಿ ಉದ್ಯೋಗವಕಾಶಗಳು ಕೈತಪ್ಪುವ ಭೀತಿಯು ಎದುರಾಗಿದೆ. ಆದುದರಿಂದ ರಾಜ್ಯ ಸರ್ಕಾರ ತಕ್ಷಣ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ ಮೂಲಕ ಎಲ್ಲಾ ತಹಸೀಲ್ದಾರರಿಗೆ ಈ ಪ್ರಮಾಣ ಪತ್ರವನ್ನು ಸುಲಭ-ಸರಳವಾಗಿ ಲಭಿಸುವಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.ನಿಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕ್ರೈಸ್ತ ಸಮುದಾಯದ ಪ್ರಮುಖರಾದ ಲೂಕಸ್ ಫರ್ನಾಂಡೀಸ್, ಸ್ಟೀಪನ್ ರೊಡ್ರಿಗ್ಸ್, ಸಾವೇರ್ ಸಿಲ್ವಾ, ಹೆನ್ರಿ ಲೀಮಾ ಹಾಗೂ ಇತರರು ಇದ್ದರು.