ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜೂನ್ ೨೧ ರಿಂದ ಜುಲೈ ೧ರವರೆಗೂ ಹೆಸರಾಂತ ಕಲಾ ತಂಡಗಳಿಂದ ನಾಟಕೋತ್ಸವವನ್ನು ಪ್ರತಿದಿನ ಬೆಳಗ್ಗೆ ೧೧ ರಿಂದ ರಾತ್ರಿ ೮ ಗಂಟೆಯವರೆಗೂ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಲಕ್ಷ್ಮೀ ರಂಗನಾಥ್ ಸಾಂಸ್ಕೃತಿಕ ಕಲಾ ಸಂಘದ ಚಂದ್ರಶೇಖರ್ ಹಾಸನ ಜಿಲ್ಲಾ ಕಲಾವಿದರ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ಬಿದರೆ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ೨ನೇ ವರ್ಷದ ನಾಟಕೋತ್ಸವದಲ್ಲಿ ಶ್ರೀ ಲಕ್ಷ್ಮೀ ರಂಗನಾಥ್ ಸಾಂಸ್ಕೃತಿಕ ಕಲಾ ಸಂಘ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜೂನ್ ೨೧ರಿಂದ ಜುಲೈ ೧ರ ಸೋಮವಾರದವರೆಗೂ ಪ್ರತಿನಿತ್ಯ ಒಂದೊಂದು ಕಲಾತಂಡಗಳಿಂದ ಒಂದೊಂದು ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀ ಹರೀಶ್ ರವರ ನೇತೃತ್ವದಲ್ಲಿ ನ್ಯೂ ಇಂದ್ರ ಡ್ರಾಮಾ ಸೀನರಿ ಸಿದ್ಧಪಡಿಸಲಾಗಿದೆ. ಜೂನ್.೧ ರಂದು ಶುಕ್ರವಾರ ಕೌಂಡ್ಲಿಕನ ವಧೆ, ಎರಡನೇ ದಿನ ರಾಮಾಯಣ, ಮೂರನೇ ದಿನ ಕುರುಕ್ಷೇತ್ರ, ನಾಲ್ಕನೇ ದಿನ ದಕ್ಷಯಜ್ಞ, ೫ನೇ ದಿನ ಧರ್ಮರಾಜ್ಯ ಸ್ಥಾಪನೆ, ಆರನೇ ದಿನ ಕುರುಕ್ಷೇತ್ರ, ಏಳನೇ ದಿನ ಸರಕಾರಿ ಕಾರ್ಯಕ್ರಮ, ಎಂಟನೇ ದಿನ ಕುರುಕ್ಷೇತ್ರ, ಒಂಬತ್ತನೇ ದಿನ ತ್ರಿಜನ್ಯ ಮೋಕ್ಷ, ಹತ್ತನೇ ದಿನ ರಾಮಾಯಣ, ಕೊನೆಯ ದಿನದಂದು ಕುರುಕ್ಷೇತ್ರ ಸೇರಿ ಒಟ್ಟು ೧೧ ದಿನಗಳ ಕಾಲ ಪ್ರತಿದಿನ ವಿವಿಧ ಕಲಾತಂಡಗಳಿಂದ ನಾಟಕ ನಡೆಯಲಿದೆ ಎಂದರು.
ಹಾಸನ ಜಿಲ್ಲಾ ಕಲಾವಿದರ ವೇದಿಕೆ ಜಿಲ್ಲಾಧ್ಯಕ್ಷ ರವಿಕುಮಾರ್ ಬಿದರೆ ಮಾತನಾಡಿ, ನಾವು ಒಂದು ನಾಟಕ ಮಾಡಬೇಕಾದರೆ ಮೂರರಿಂದ ನಾಲ್ಕು ಲಕ್ಷ ರು. ಖರ್ಚು ಆಗುತ್ತದೆ. ಕಲಾವಿದರು ೭೫ ಸಾವಿರ ರು.ಗಳನ್ನು ಕಲಾವಿದರಿಂದಲೇ ಪಡೆದುಕೊಂಡು ನಾಟಕ ಪ್ರದರ್ಶಿಸುವ ಮೂಲಕ ಕಲೆ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಜಿಲ್ಲೆಗಳಲ್ಲಿ ಸುಸ್ಜಿಜಿತ ಕಲಾಭವನಗಳಿದ್ದು, ಹಾಸನ ಜಿಲ್ಲೆಯಲ್ಲಿ ಮೊದಲಿನಿಂದಲೂ ಸಾಕಷ್ಟು ಸಮಸ್ಯೆಗಳಿವೆ. ಇಲ್ಲಿನ ಕಲಾವಿದರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕಾಯಂ ಅಧಿಕಾರಿಯನ್ನು ಹಾಸನಾಂಬ ಕಲಾಕ್ಷೇತ್ರಕ್ಕೆ ಒದಗಿಸಿಕೊಡಬೇಕು. ಇರುವ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮಾಸಾಶನ ಕೂಡ ಕಲಾವಿದರಿಗೆ ಬರುತ್ತಿಲ್ಲ. ಈ ಬಗ್ಗೆ ಡೀಸಿಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಈ ೧೧ ದಿನದ ನಾಟಕೋತ್ಸವಕ್ಕೆ ಒಟ್ಟು ೨೫ ಲಕ್ಷ ರು. ಖರ್ಚು ಆಗುತ್ತದೆ. ಈ ಹಣವನ್ನು ಕಲಾವಿದರೇ ಭರಿಸುತ್ತಿದ್ದೇವೆ. ಪ್ರತಿ ತಂಡಕ್ಕೆ ೩೦ ಸಾವಿರ ಕೊಟ್ಟರೆ ಸಾಕಾಗುವುದಿಲ್ಲ, ಕಲಾಭವನದ ಬಾಡಿಗೆಯೇ ದಿನಕ್ಕೆ ೧೫ ಸಾವಿರ ಕೊಡಬೇಕು.ಈ ಸ್ಥಿತಿ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕಲಾಭವನಕ್ಕೆ ಬೀಗಿ ಹಾಕಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಲಾವಿದರಾದ ಬಿ.ಪಿ. ರಮೇಶ್, ಚೆಲುವನಹಳ್ಳಿ ಶೇಖರಪ್ಪ, ಪ್ರಕಾಶ್, ದೇವಣ್ಣ ಸೇರಿ ಇತರರು ಉಪಸ್ಥಿತರಿದ್ದರು.