ನ.17 ರಿಂದ ನಾಟಕೋತ್ಸವ: ಸತೀಶ್ ತಿಪಟೂರು

KannadaprabhaNewsNetwork |  
Published : Nov 11, 2025, 01:15 AM IST

ಸಾರಾಂಶ

ರಂಗಾಯಣವು ಈ ಬಾರಿ ನಾಟಕೋತ್ಸವವನ್ನು ನವೆಂಬರ್ 17 ರಿಂದ 21ರವರೆಗೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಶಿಕ್ಷಣದಲ್ಲಿ ರಂಗಸಾಧ್ಯತೆಗಳನ್ನು ನಿರಂತರವಾಗಿ ಅನ್ವೇಷಿಸುತ್ತಿರುವ ರಂಗಾಯಣವು ಈ ಬಾರಿ ನಾಟಕೋತ್ಸವವನ್ನು ನವೆಂಬರ್ 17 ರಿಂದ 21ರವರೆಗೆ ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸುತ್ತಿದೆ ಎಂದು ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ನಾಟಕೋತ್ಸವದಲ್ಲಿ ಶ್ರೀ ಗಣೇಶ ಮಂದಾರ್ತಿಯವರ ನಿರ್ದೇಶನದ ‘ಮೈ ಫ್ಯಾಮಿಲಿ'''''''' ನಾಟಕವನ್ನು ಪ್ರದರ್ಶಿಸಲಾಗುವುದು. ತುಮಕೂರು ನಗರ ವ್ಯಾಪ್ತಿಯ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಮಕ್ಕಳ ಮಾನಸಿಕ, ದೈಹಿಕ ಸಹಜ ವಿಕಾಸಕ್ಕೆ ಪೂರಕವಾಗಿ ರಂಗಾಯಣವು ರೂಪಿಸಿರುವ ಉತ್ಸವದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ನಾಟಕದ ಪ್ರವೇಶ ದರ ಪ್ರತಿ ವಿದ್ಯಾರ್ಥಿಗೆ 50 ರು.ಗಳನ್ನು ನಿಗದಿಪಡಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10.30 ಹಾಗೂ ಮಧ್ಯಾಹ್ನ 2 ಗಂಟೆಗೆ ನಾಟಕವನ್ನು ಪ್ರದರ್ಶಿಸಲಾಗುವುದು.

ಈ ನಾಟಕದ ಕಥನವು ಮಕ್ಕಳ ನೋಟಗಳ ಮೂಲಕ ಅವರ ಲೋಕವಿನ್ಯಾಸ, ಗ್ರಹಿಕೆ, ಭಾವನೆ, ಕಲ್ಪನೆಗಳನ್ನು ಮಕ್ಕಳು ಎಂದು ಪ್ರತ್ಯೇಕಿಸದೆ ಒಟ್ಟಂದದಲ್ಲಿ ಹಿಡಿದಿಡಲು ಪ್ರಯತ್ನಿಸಿದೆ. ತಂತ್ರಜ್ಞಾನ ಯುಗದ ಈ ಕಾಲದಲ್ಲಿ ಮಕ್ಕಳು ಸೇರಿದಂತೆ ಎಲ್ಲರೂ ಮೊಬೈಲ್ ಮೂಲಕ ಹಲವು ವರ್ಚ್ಯುಯಲ್ ಲೋಕದಲ್ಲಿ ಏಕಕಾಲದಲ್ಲಿ ಬದುಕುತ್ತಿದ್ದೇವೆ. ಈ ವರ್ಚ್ಯುಯಲ್ ಜಗತ್ತುಎನ್ನುವುದು ನಮ್ಮೆಲ್ಲರ ನಿಜ ಬದುಕಿನ ವಾಸ್ತವವಾಗಿದೆ. ಇಲ್ಲಿ ಬಾಳುತ್ತಿರುವ ಪ್ರತಿಯೊಬ್ಬರ ಬದುಕಿನ ಲಯಗಳೂ ಬೇರೆ-ಬೇರೆಯಾಗಿದೆ. ಹೀಗೆ ಅಸಹಜ ಮತ್ತು ಸಹಜ ಬದುಕಿನ ನಡುವಿನ ವ್ಯತ್ಯಾಸಗಳೇ ಅರಿವಾಗದಂತೆ, ಛಿದ್ರಗೊಂಡಂತೆ ಭಾಸವಾಗುತ್ತಿರುವ ಲೋಕವನ್ನು ಪ್ರಕೃತಿ ಸಹಜ ಲಯ ಮತ್ತು ಭಾವ-ಬಂಧದಲ್ಲಿ ಧ್ಯಾನಿಸುತ್ತಾ ವಾಸ್ತವ ಲೋಕದ ಅರಿವನ್ನು ಪಡೆದುಕೊಳ್ಳುವ ತೀವ್ರ ಪ್ರಯತ್ನ ಈ ಪ್ರಯೋಗದ ಭಾಗವಾಗಿದೆ.

ಈ ಪ್ರಯೋಗವು ಪೋಷಕರು, ಶಿಕ್ಷಕರು ಸೇರಿದಂತೆ ಭವಿಷ್ಯಕ್ಕಾಗಿ ಮಕ್ಕಳನ್ನು ರೂಪಿಸುತ್ತಿದ್ದೇವೆ ಎಂದು ಭಾವಿಸಿರುವ ಈ ಸಮಾಜದ ಎಲ್ಲರೂ ಮಕ್ಕಳ ಕಣ್ಣಿನಲ್ಲಿ ತಮ್ಮನ್ನು ನೋಡಿಕೊಳ್ಳಬೇಕಾದ ನಾಟಕ, ಇವತ್ತಿನ ಮಕ್ಕಳು ನಮ್ಮೆಲ್ಲರೊಳಗಿನ ಮಗುತನವನ್ನು ಎಚ್ಚರಿಸುತ್ತಿರುವ ಪ್ರಕ್ರಿಯೆಯೊಂದು ಈ ನಾಟಕದ ಮೂಲಕ ಅರಿವಿಗೆ ಬರುವುದನ್ನು ನಾವಿಲ್ಲಿ ಕಾಣಬಹುದು. ಆದ್ದರಿಂದಲೇ ‘ಮೈ ಫ್ಯಾಮಿಲಿ'''''''' ನಾಟಕವು ಮಕ್ಕಳು, ಶಿಕ್ಷಕರು, ಹಾಗೂ ಪೋಷಕರು ಕೂಡಿ ನೋಡಬೇಕಾದ ನಾಟಕವಾಗಿದೆ.

ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ರಂಗಾಯಣದ ರಂಗ ಉತ್ಸವದಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ತಿಳಿಸಿದರು.

ಮೈ ಫ್ಯಾಮಿಲಿ ನಾಟಕದ ಮೂಲಕ ಕಥೆಯನ್ನು ಗೌತಮಿ ಅವರು ರಚಿಸಿದ್ದು, ರಂಗವಿನ್ಯಾಸವನ್ನು ಹೆಚ್.ಕೆ. ದ್ವಾರಕಾನಾಥ್, ಬೆಳಕಿನ ವಿನ್ಯಾಸವನ್ನು ಮಹೇಶ್ ಕಲ್ಲತ್ತಿ, ಸಂಗೀತ-ವಿನ್ಯಾಸ-ನಿರ್ದೇಶನವನ್ನು ಗಣೇಶ್ ಮಂದಾರ್ತಿ, ಪಪೆಟ್ರಿ ಅನ್ನು ಶ್ರವಣ್ ಹೆಗ್ಗೋಡು, ಪರಿಕರವನ್ನು ನಂದಿ ಕೆ.ಆರ್. ಹಾಗೂ ಶಶಿಕಲಾ ಬಿ.ಎನ್. ಅವರು ವಸ್ತç ವಿನ್ಯಾಸಗೊಳಿಸಲಿದ್ದಾರೆ ಎಂದು ಹೇಳಿದರು.

ನಂತರ ರಂಗಾಯಣ ರಂಗ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ರಂಗಾಯಣ ಮೈಸೂರು ನಿರ್ದೇಶಕ ಸತೀಶ್ ತಿಪಟೂರು, ಸಂಚಾಲಕ ಯೋಗಾನಂದ್ ಅರಸೀಕೆರೆ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಹಾಜರಿದ್ದರು.

PREV

Recommended Stories

ನೊಂದಣಿಯಿಲ್ಲದ ಆರ್‌ಎಸ್‌ಎಸ್‌ ಬ್ಯಾನ್‌ ಮಾಡಿ
ಸತತ 9 ಗಂಟೆ ಕೆಡಿಪಿ ಸಭೆ ನಡೆಸಿದ ಸಿಎಂ!