ಕನ್ನಡಪ್ರಭ ವಾರ್ತೆ ಮೈಸೂರು
ಇವ ನಮ್ಮವ ಇವ ನಮ್ಮವ ಆಶಯದೊಡನೆ ಆಯೋಜಿಸಿರುವ ಬಹುರೂಪಿಗೆ ಕವಿ ಜಯಂತಿ ಕಾಯ್ಕಿಣಿ ಅವರು ವೇದಿಕೆಯಲ್ಲಿ ನಿರ್ಮಿಸಿದ ಅನುಭವ ಮಂಟಪದ ಪರದೆ ತೆರೆದು ಉದ್ಘಾಟಿಸಿದರು. ಆ ಮೂಲಕ ರಂಗಾಯಣದ ವನರಂಗದಲ್ಲಿ ನೆರೆದಿದ್ದ ನೂರಾರು ಮಂದಿಯ ಸಮ್ಮುಖದಲ್ಲಿ ಬಹುರೂಪಿಯು ರಂಗ ಕಣ್ಣುಗಳೆಡೆಗೆ ತೆರೆದುಕೊಂಡಿತು.
ಈ ವೇಳೆ ಪರದೆಯೊಳಗಿಂದ ಹೊರ ಬಂದ ಬಸವಣ್ಣನವರ ವೇಷಧಾರಿ ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ... ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ... ಎಂಬ ವಚನ ಹೇಳುತ್ತಾ ಗಣ್ಯರು ಮತ್ತು ಸಾರ್ವಜನಿಕರಿಗೆ ವಚನಗಳ ಪುಸ್ತಕ ಹಂಚಿದರು.ಅವರ ಹಿಂದೆ ಅನೇಕ ಕಾಯಕ ಶರಣರ ವೇಷಧಾರಿಗಳು ಹೊರ ಬಂದು ವಚನ ಹೇಳಿದರು. ಈ ಮಧ್ಯೆ ಕಲಾವಿದರಿಂದ ಮೂಡಿಬಂದ ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಎಂಬ ಹಿನ್ನೆಲೆ ಗಾಯನದೊಂದಿಗೆ ಬಹುರೂಪಿ ರಂಗು ಪಡೆಯಿತು.
ವಾಟ್ಸ್‌ಆಪ್ ಸ್ಟೇಟಸ್ ಗೆ ಲೈಕ್ ಕೊಡುವವರು, ಶುಭಾಶಯ ಹೇಳುವವರು ಮುಖಾಮುಖಿಯಾದಾಗ ಮುಕ್ತ ಮನಸ್ಸಿನಿಂದ ಮಾತನಾಡುವುದು ಇರಲಿ ಒಂದು ಸಣ್ಣ ಕಿರುನಗೆಯನ್ನೂ ಸೂಚಿಸುವುದಿಲ್ಲ. ಆಗದರೇ ನಮ್ಮವರೂ ಯಾರು? ನಮ್ಮನ್ನು ಉಜ್ಜಿವನಗೊಳಿಸುವಂತಹ ರಂಗ ಚಟುವಟಿಕೆಗಳೇ ನಮ್ಮವರು ಎಂದು ಅವರು ವಿಶ್ಲೇಷಿಸಿದರು.
ಸಮಾಜ ಎಂಬುದು ಒಂದೇ ಕಂಬದ ಮೇಲೆ ನಿಂತ ಡೇರೆ ಅಲ್ಲ. ಅದು ಸಾವಿರ ಕಂಬಗಳ ಚಪ್ಪರ. ಇದರ ಆತ್ಮಬಲ ಹೆಚ್ಚಿಸುವ ಕಲಾಪ ರಂಗಭೂಮಿ. ಅಂತರ್ಜಾಲ ಬಳಕೆಯಿಂದ ಮನುಷ್ಯ ಸಂಬಂಧ ಕೊಂಡಿಯನ್ನು ಕಳೆದುಕೊಳ್ಳುತ್ತಿದೆ. ನಾವಾಗಿಯೇ ಹಿಂದೆ ಇಳಿಯುವುದು ಬೇಡ. ಮಮತೆ ಮತ್ತು ಸಮತೆಗೆ ಮಿಗಿಲಾದ ಯಾವುದೇ ಅಧ್ಯಾತ್ಮವಿಲ್ಲ ಎಂದು ಹೇಳಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಮಾತನಾಡಿ, ಸಮಾಜದಲ್ಲಿ ಬೇರೆರುವ ಜಾತಿಯತೆ, ಅಂಧ ಶ್ರದ್ಧೆ, ಲಿಂಗ ತಾರತಮ್ಯವನ್ನು 12ನೇ ಶತಮಾನದ ಶರಣರು ತೊಲಗಿಸಲು ಪ್ರಯತ್ನಿಸಿದರು. ಶರಣರ ಆಶಯವೇ ರಂಗಭೂಮಿ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ರಂಗಭೂಮಿಗಿದೆ ಎಂದು ಹೇಳಿದರು.
ಬಹುರೂಪಿ ನಾಟಕೋತ್ಸವ ಸಂಚಿಕೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜ್ ಬಿಡುಗಡೆಗೊಳಿಸಿದರು. ಶಾಸಕ ಕೆ. ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.