ಕನ್ನಡಪ್ರಭ ವಾರ್ತೆ ರಾಮನಗರ/ ಮಂಡ್ಯಮಂಡ್ಯ ತಾಲೂಕಿನ ಹನಕೆರೆ- ಗೌಡಗೆರೆ ಗೇಟ್ ಬಳಿ ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಳ ಸೇತುವೆ (ಅಂಡರ್ ಪಾಸ್ )ನಿರ್ಮಾಣ ಮಾಡುವಂತೆ ಆಗ್ರಹಿಸಿ ಮಂಡ್ಯ ಕ್ಷೇತ್ರ ಶಾಸಕ ಪಿ.ರವಿಕುಮಾರ್ ನೇತೃತ್ವದಲ್ಲಿ ಹನಕೆರೆ ಗ್ರಾಮಸ್ಥರು ರಾಮನಗರದ ಬಸವನಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಯೋಜನಾ ನಿರ್ದೇಶಕರ ಕಚೇರಿ ಎದುರು ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೃಷಿ ಸಚಿವರು ಆದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ಮನವಿ ಆಲಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ ತರುವಾಯ ಶಾಸಕ ಗಣಿಕ ರವಿಕುಮಾರ್ ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಇದಕ್ಕೂ ಮುನ್ನ ಮಾತನಾಡಿದ ಗಣಿಗ ರವಿ, ನಮಗೆ ಯಾವ ಕಾರಣಕ್ಕೂ ಮೇಲ್ಸೇತುವೆ ಬೇಡ, ರೈತರು, ಮಹಿಳೆಯರು, ಜನಸಾಮಾನ್ಯರಿಗೆ ಅನುಕೂಲವಾಗಲು ಅಂಡರ್ ಪಾಸ್ ನಿರ್ಮಾಣ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಂಡರ್ ಪಾಸ್‌ಗೆ ಅನುಮತಿ ನೀಡುವವರೆಗೂ ನಾವು ಇಲ್ಲೇ ಇರುತ್ತೇವೆ ಎಂದು ಎಚ್ಚರಿಕೆ ನೀಡಿದರು.ಅಂಡರ್ ಪಾಸ್ ನಿರ್ಮಾಣಕ್ಕೆ ಒತ್ತಾಯಿಸಿ ವಿಧಾನಸಭಾ ಚುನಾವಣೆಗೂ ಮುನ್ನ ಸಾವಿರಾರು ರೈತರು, ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆಗ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿ ರೈತರು ಮಹಿಳೆಯರ ಮೇಲೆ ಲಾಠಿ ಪ್ರಹಾರ ಮಾಡಿಸಿದ್ದರು. ಈಗ ಮೇಲ್ಲೇತುವೆಗಾಗಿ ಪರಿಶೋಧನೆ ಮಾಡುತ್ತಿದ್ದಾರೆ. ಇದರಿಂದ ಬೈಕ್ ಸವಾರರು, ಕಬ್ಬಿನ ಗಾಡಿ, ಟ್ರ್ಯಾಕ್ಟರ್ ಗಳಿಗೆ ತೊಂದರೆಯಾಗಲಿದೆ. ಎಲ್ಲ ಬಗೆಯ ಹೋರಾಟ ಮಾಡಿ ಕೊನೆಗೆ ಗಾಂಧೀಜಿ ಹಾದಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದರು.
ಅಂಡರ್ ಪಾಸ್ ವಿಚಾರವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಬಗ್ಗೆ ಸಂಸದೆ ಸುಮಲತಾ ಅಂಬರೀಶ್, ಕ್ರೆಡಿಟ್ ಪಡೆಯಲು ಶಾಸಕರು ಈ ರೀತಿ ಗಿಮಿಕ್ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ, ಸುಮಲತಾ ಅವರಿಗೆ ಮಾಹಿತಿಯ ಕೊರತೆ ಇದೆ. ಅವರು ಈಗಲೂ ನಾನೇ ಅಂಡರ್ ಪಾಸ್ ನಿರ್ಮಾಣಕ್ಕೆ ಕಾರಣ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಮೇಲ್ಸೇತುವೆ ಆದೇಶವಾಗಿರುವುದು ಗೊತ್ತಾಗಿಲ್ಲ ಅನಿಸುತ್ತಿದೆ. ನಮಗೆ ಉಪವಾಸ ಸತ್ಯಾಗ್ರಹ ಮಾಡಿ ಕ್ರೆಡಿಟ್ ಪಡೆಯುವುದೂ ಬೇಡ. ನೀವೇ ಈ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿ, ಮೇಲ್ಸೇತುವೆ ಕಾಮಗಾರಿ ರದ್ದು ಪಡಿಸಿ ಅಂಡರ್ ಪಾಸ್ ನಿರ್ಮಾಣಕ್ಕೆ ಅನುಮತಿ ಕೊಡಿಸಿ ನೀವೇ ಇದರ ಸಂಪೂರ್ಣ ಕ್ರೆಡಿಟ್ ತೆಗೆದುಕೊಳ್ಳಿ.ನಮಗೆ ಅಂಡರ್ ಪಾಸ್ ನಿರ್ಮಾಣವಾದರೆ ಸಾಕು ಎಂದು ತಿರುಗೇಟು ನೀಡಿದರು.
ಹೆದ್ದಾರಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ:
ಹನಕೆರೆ ಭಾಗದ ಜನರಿಗೆ ಒಳ್ಳೆಯದಾಗಲೆಂದು ಶಾಸಕ ಗಣಿಕ ರವಿಕುಮಾರ್ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಮನವಿ ಮಾಡಿದ್ದರು. ಭರವಸೆ ಕೊಟ್ಟಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈಗ ವರಸೆ ಬದಲಾಯಿಸಿದ್ದಾರೆ. ಹೆದ್ದಾರಿಯಲ್ಲಿ ಎಕ್ಸಿಟ್ - ಎಂಟ್ರಿ ಸೇರಿದಂತೆ ಹಲವು ಕೆಲಸಗಳಿಗೆ 600 ಕೋಟಿ ಹಣವನ್ನು ಮೀಸಲಿಡಲಾಗಿದೆ. ಆದರೆ, ಯಾವುದೇ ಕೆಲಸ ಇನ್ನೂ ಕಾರ್ಯಗತವಾಗಿಲ್ಲ.
ಉಪವಾಸ ಸತ್ಯಾಗ್ರಹದಲ್ಲಿ ಮನ್ ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ್, ಮೈಷುಗರ್ ಮಾಜಿ ಅಧ್ಯಕ್ಷ ಬಿ. ಸಿ. ಶಿವಾನಂದ, ಮುಖಂಡರಾದ ಎಚ್. ಎನ್. ಯೋಗೇಶ್ ಶಿವಲಿಂಗೇಗೌಡ, ಶೇಖರ್, ಜೆ.ಕೆ.ಲಕ್ಷ್ಮಿನಾರಾಯಣ್ , ರಾಮನಗರ ಮುಖಂಡರಾದ ಎ.ಬಿ.ಚೇತನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.ಕ್ರೆಡಿಟ್ ಏಕೆ ?. ನಮ್ಮ ತೆರಿಗೆ ಹಣ ಅಲ್ವಾ?
- ಡಿ.ಕೆ.ಸುರೇಶ್ , ಸಂಸದರು