ನಾಟಕ ಮಾನವೀಯತೆ ಬಿತ್ತುವ ಪ್ರಮುಖ ಸಾಧನ

KannadaprabhaNewsNetwork |  
Published : Dec 18, 2024, 12:45 AM IST
ಕಾರ್ಯಕ್ರಮವನ್ನು ಉದ್ದೇಶಿಸಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ. ಜಿ ಮಾತನಾಡಿದರು.  | Kannada Prabha

ಸಾರಾಂಶ

ಎಲ್ಲ ಭೇದ ಅಳಿಸಿ, ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವ ಜನತೆ ರೂಪಿಸುವ ತುರ್ತು ಇದೆ

ಗದಗ: ನಾಟಕಗಳು ಜನರಲ್ಲಿ ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿ ಬಿತ್ತುವ ಪ್ರಮುಖ ಸಾಧನಗಳಾಗಿವೆ, ಬರೀ ಮನೋರಂಜನೆ ಮಾತ್ರವಲ್ಲ. ಜಾತ್ಯಾತೀತತೆ, ಧರ್ಮಾತೀತ ಮೌಲ್ಯ ಸಾರುವಲ್ಲಿ ರಂಗಭೂಮಿಯ ಪಾತ್ರ ಮಹತ್ವರವಾದದ್ದೆಂದು ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ವಿಶ್ವನಾಥ.ಜಿ ಹೇಳಿದರು.

ಅವರು ಗದಗ ನಗರದ ಕೆ.ಎಲ್.ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗವು ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಮತ್ತು ನಟರಂಗ ಸಂಸ್ಥೆಯ ಸಹಭಾಗಿತ್ವದಲ್ಲಿ 21 ದಿನಗಳ ಕಾಲ ಹಮ್ಮಿಕೊಂಡಿದ್ದ ವಿದ್ಯಾರ್ಥಿ ರಂಗ ತರಬೇತಿ ಕಾರ್ಯಗಾರ ಸಮಾರೋಪ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಎಲ್ಲ ಭೇದ ಅಳಿಸಿ, ಒಡೆದ ಮನಸ್ಸುಗಳನ್ನು ಕಟ್ಟುವ ಸಮರ್ಥ ಮಾಧ್ಯಮ ರಂಗಭೂಮಿ. ರಂಗಭೂಮಿಯ ಮುಖಾಂತರ ಆರೋಗ್ಯಕರ ಮನಸ್ಸುಳ್ಳ ಯುವ ಜನತೆ ರೂಪಿಸುವ ತುರ್ತು ಇದೆ. ಈ ಹೊತ್ತು ರಂಗಭೂಮಿ ಕೂಡ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆ ಪಡೆದುಕೊಂಡಿದೆ. ರಂಗಭೂಮಿ ಎಂದ ತಕ್ಷಣ ನಾಟಕ, ಅಭಿನಯ ಸನ್ನಿವೇಶಗಳು ಎದುರಾಗುತ್ತವೆ. ನಾಟಕ ಪ್ರಕಾರ ಕೇವಲ ಹವ್ಯಾಸ ಹಾಗೂ ಮನರಂಜನೆಯ ಮಾಧ್ಯಮವಾಗಿ ಸ್ವೀಕರಿಸದೇ ಆ ಮೂಲಕ ಸಾಮಾಜಿಕ ಜಾಗೃತಿ ಹಾಗೂ ಸಾಮಾನ್ಯ ಜನತೆಗೆ ಅರಿವು ಮೂಡಿಸುವ ಮಾಧ್ಯಮವಾಗಿ ರಂಗಭೂಮಿ ಗುರುತಿಸಿಕೊಂಡಿದೆ ಎಂದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಾಗಾರದ ಸಂಚಾಲಕ ಡಾ.ಅಂದಯ್ಯ ಅರವಟಗಿಮಠ, ಸಮಾಜದ ಅನೇಕ ಸ್ಥಿತ್ಯಂತರಗಳಿಗೆ ರಂಗಭೂಮಿ ಕಾರಣವಾಗಿದೆ. ಉತ್ತಮ ಸಮಾಜ ನಿರ್ಮಾಣಗೊಳ್ಳಲು ಆಳುವ ವ್ಯವಸ್ಥೆಯ ಲೋಪದೋಷ ಜನರಿಗೆ ತಲುಪಿಸುವಾಗ ಸಮಾಜದ ದುಷ್ಟ ವ್ಯಕ್ತಿಗಳ ದಬ್ಬಾಳಿಕೆ ಎಚ್ಚರಿಸುವಾಗ, ವೈಜ್ಞಾನಿಕ ಸತ್ಯ ತಿಳಿಸುವಾಗ, ಮೌಢ್ಯತೆಗಳನ್ನು ಧಿಕ್ಕರಿಸುವಾಗ, ಶಿಕ್ಷಣ ಪದ್ಧತಿ ಸಾರ್ವತ್ರೀಕರಿಸುವಾಗ, ಜಾತಿ ಪದ್ಧತಿ ಧರ್ಮಾಂಧತೆಯ ದುಷ್ಪರಿಣಾಮ ತಿಳಿಸುವಾಗ, ಯುದ್ಧದ ಭೀಕರತೆಯ ಬಗ್ಗೆ ಎಚ್ಚರಿಸುವಾಗ ಪಾತ್ರಗಳ ಮೂಲಕ ಸಮಾಜ ಕಟ್ಟಿಕೊಡುವ ರಂಗಭೂಮಿಯ ಕೊಡುಗೆ ಅಪಾರವಾಗಿದೆ ಎಂದರು.

ನಾಟಕ ಶಿಬಿರದ ಸಂಚಾಲಕ ಮಹೇಶ್ ಮಾತನಾಡಿ, ರಂಗದಲ್ಲಿ ಇದ್ದಷ್ಟು ಹೊತ್ತು ವೈಯಕ್ತಿಕ ಬದುಕಿನ ಪಾತ್ರ ಮರೆತು ಹೋಗುತ್ತದೆ. ವೈಯಕ್ತಿಕ ಜೀವನದಲ್ಲಿ ಬಡವನಾಗಿರುವವನು ಕೂಡ, ರಂಗದಲ್ಲಿ ಆಗರ್ಭ ಶ್ರೀಮಂತನಾಗುತ್ತಾನೆ. ಅದೇ ರಂಗದ ಶಕ್ತಿ. ಬಣ್ಣ ಕಳಚಿದ ಮೇಲಷ್ಟೇ ಆತನ ವೈಯಕ್ತಿಕ ಬದುಕು ಅದರೊಳಗಿನ ಸಮಸ್ಯೆ ನೆನಪಾಗುತ್ತದೆ. ಇಲ್ಲಿ ಸಿಗುವ ಆತ್ಮತೃಪ್ತಿ ಮತ್ತೆಲ್ಲೂ ಸಿಗಲಾರದು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎ.ಕೆ. ಮಠ, ನಮಗೆ ಕನ್ನಡಿಯಾಗಿ, ಸ್ವವಿಮರ್ಶೆಯ ಮಾರ್ಗವಾಗಿ ರಂಗಭೂಮಿ ಇದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವ ದೃಷ್ಟಿಯಿಂದ ರಂಗಭೂಮಿ ಉತ್ತಮ ಆಯ್ಕೆ. ಇವತ್ತಿನ ಮಕ್ಕಳು ಹತ್ತು-ಹನ್ನೆರಡು ವಷರ್ಗಳವರೆಗೂ ವಿಶ್ವಮಾನವರಾಗಿಯೇ ಇರುತ್ತಾರೆ. ಆ ನಂತರವಷ್ಟೇ ಸಾಮಾಜಿಕ ವ್ಯವಸ್ಥೆಯ ಕೈಗೆ ಸಿಕ್ಕು ವಾತಾವರಣದ ಕೈ ಗೊಂಬೆಗಳಾಗಿ ಬಿಡುತ್ತಾರೆ. ಇಂತಹ ಅಪಾಯ ಮೀರಬೇಕಾದರೆ ರಂಗಭೂಮಿಯ ಸಂಪರ್ಕ ಅನಿವಾರ್ಯ ಎಂದರು.

ಸಹನಾ ನಿರೂಪಿಸಿದರು. ಭೂಮಿಕಾ ಪ್ರಾರ್ಥಿಸಿದರು. ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ