- ಮಾಗಿ ಚಳಿಗೆ ದಿನದಿನಕ್ಕೂ ನಲುಗುತಿದೆ ಮಧ್ಯ ಕರ್ನಾಟಕ ।
"ಚಳಿ ಚಳಿ ತಾಳೆನು ಈ ಚಳಿಯಾ... ಆಹಾ... " ಎಂಬ ಹಾಡು ಈಗ ಮಧ್ಯ ಕರ್ನಾಟಕವೇನು, ಇಡೀ ಕರ್ನಾಟಕದಲ್ಲೇ ನೆನಪಿಸಿಕೊಳ್ಳುವಂತಾಗಿದೆ. ಇದಕ್ಕೆ ಕಾರಣ, ಈ ಬಾರಿಯ ಚಳಿಗಾಲದ ಮಹಿಮೆ!
ಹೌದು. ಮಾಗಿ ಚಳಿಗೆ ದಾವಣಗೆರೆ ನಗರ, ಜಿಲ್ಲೆಯ ಜನರು, ಜಾನುವಾರುಗಳು ತತ್ತರಿಸುತ್ತಿವೆ. ಆರಂಭದಲ್ಲೇ ದಿನದಿನಕ್ಕೂ ಮೂಳೆ ಕೊರೆಯುವಂಥ ಚಳಿ ತೀವ್ರತೆ ಪಡೆಯುತ್ತಿದ್ದು, ಜನರು ಥಂಡಾ ಹೊಡೆಯುವಂತೆ ಮಾಡುತ್ತಿದೆ.ಕಳೆದ ಕೆಲವು ದಿನಗಳಿಂದ ನಸುಕಿನಲ್ಲಿ ಇಬ್ಬನಿ ಜೊತೆಗೆ ಮೈಕೊರೆಯುವ ಚಳಿಯೂ ಶುರುವಾಗಿದೆ. ಡಿಸೆಂಬರ್ ಚಳಿ ಅಂದರೆ ಏನೆಂಬುದನ್ನು ಜನರಿಗೆ ಅಕ್ಷರಶಃ ಪ್ರಕೃತಿ ಗಡಗಡ ನಡುಗುವಂತೆ ತೋರಿಸುತ್ತಿದೆ. ಮೈ ಕೊರೆವ ಚಳಿಯ ಅನುಭವ ಜನರಿಗೆ ಆಗುತ್ತಿದೆ. ಶೀತಗಾಳಿಯಿಂದಾಗಿ ಜನರು ನಡುಗಲಾರಂಭಿಸಿದ್ದಾರೆ. ಶೀತ, ಕೆಮ್ಮು, ಕಫ, ಜ್ವರ, ಚಳಿಜ್ವರ ಹೀಗೆ ಸಣ್ಣಪುಟ್ಟ ಕಾಯಿಲೆಗಳು ಜನರಿಗೆ ಕಾಣಿಸಿಕೊಳ್ಳುತ್ತಿವೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.
ಶೀತಗಾಳಿ ಪರಿಣಾಮ ಜನರು ಸಹ ಕೆಲಸ, ಕಾರ್ಯಗಳ ಮುಗಿಸಿ, ಬೇಗ ಬೇಗನೆ ಮನೆ ಸೇರಿಕೊಳ್ಳುವ ತವಕ ಕಂಡುಬರುತ್ತಿದೆ. ಸ್ವೆಟರ್, ಜರ್ಕಿನ್, ಉಣ್ಣೆ ಬಟ್ಟೆಗಳು ಸೇರಿದಂತೆ ಬೆಚ್ಚನೆಯ ವಸ್ತುಗಳು, ಕುರುಕಲು ತಿಂಡಿಗಳು, ಕಂಬಳಿ-ಬೆಡ್‌ಶೀಟ್‌ಗಳು, ಬಿಸಿ ಬಿಸಿ ಊಟ, ಪಾನೀಯಗಳಿಗೆ ಜನ ಮೊರೆ ಹೋಗುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವಯೋವೃದ್ಧರು ಹೀಗೆ ಎಲ್ಲರೂ ಚಳಿಯಿಂದಾಗಿ ತತ್ತರಿಸುತ್ತಿದ್ದಾರೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಚಳಿಗೆ ತತ್ತರಿಸುತ್ತಿವೆ.
ಗ್ರಾಮೀಣ ಪ್ರದೇಶದಲ್ಲಿ ದೇಹವನ್ನು ಕಾವೇರಿಸಲು ಒಂದೆಡೆ ಬೆಂಕಿ ಹಾಕಿ, ಎಲ್ಲರೂ ಸುತ್ತಲು ಕುಳಿತು ಮೈ ಕಾಯಿಸಿಕೊಳ್ಳುವಂತಾಗಿದೆ. ರಾತ್ರಿ 10-11ರಿಂದ ಬೆಳಗಿನ ಆರೇಳು ಗಂಟೆವರೆಗೆ ತಾಪಮಾನ ಸಾಕಷ್ಟು ಕಡಿಮೆಯಾಗುತ್ತಿದೆ. ವಾಕ್ ಮಾಡಲು ಜನ ಹಿಂದೇಟು ಹಾಕುವಷ್ಟರ ಮಟ್ಟಿಗೆ ಚಳಿ ಮೈಕೊರೆಯುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಲೆನಾಡಿನ ಚಳಿಯ ಅನುಭವ ಜನರಿಗಾಗುತ್ತಿದೆ. ನವೆಂಬರ್‌ವರೆಗೆ ಸುರಿದ ಭಾರಿ ಮಳೆಯಿಂದಾಗಿ ಇಳೆ ತಂಪಾಗಿರೋದೂ ಚಳಿ ಹೆಚ್ಚಳಕ್ಕೆ ಕಾರಣವಾಗಿದೆ. ಉತ್ತರ ಭಾರತದ ಶೀತಗಾಳಿ ಸುದ್ದಿ ಬಗ್ಗೆ ಕೇಳಿದ್ದ ಜನರಿಗೆ ಐದಾರು ದಿನಗಳಿಂದ ಅಂತಹ ಅನುಭವ ದಾವಣಗೆರೆ ಜಿಲ್ಲೆಯಲ್ಲೇ ತಕ್ಕಮಟ್ಟಿಗೆ ದರ್ಶನವಾಗುತ್ತಿದೆ.
ಚಳಿಯಿಂದಾಗಿಯೇ ಶೇ.15-20ರಷ್ಟು ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ಬಾರ್‌ಗೆ ಬರುತ್ತಿದ್ದವರು ಚಳಿಗೆ ಹೆದರಿ, ಮನೆಗೆ ಪಾರ್ಸೆಲ್ ಅಲ್ಲಿಯೇ ಬಳಸುತ್ತಿದ್ದಾರೆ. ರಮ್, ವಿಸ್ಕಿ, ಬ್ರಾಂಡಿಯಂತಹ ಹಾಟ್ ಡ್ರಿಂಕ್ಸ್‌ಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುತ್ತಾರೆ ಮದ್ಯದ ವ್ಯಾಪಾರಸ್ಥರು.
-17ಕೆಡಿವಿಜಿ15: ಹೈಸ್ಕೂಲ್ ವಿದ್ಯಾರ್ಥಿನಿ ಪೂಜಾ. -17ಕೆಡಿವಿಜಿ16: ತಿಲಕ್ ಕುಮಾರ ಬಿ.ಗುಬ್ಬಿ.