ಕನ್ನಡಪ್ರಭ ವಾರ್ತೆ ಹಿರಿಯೂರು
ನಾಟಕಗಳು ಭಕ್ತಿ, ಭಾವ, ಭಾಷೆ ಮತ್ತು ಸಂಸ್ಕೃತಿ ಬಿಂಬಿಸುವ ಮಾಧ್ಯಮವಾಗಿದೆ ಎಂದು ಧರ್ಮಪುರ ಗ್ರಾಪಂ ಅಧ್ಯಕ್ಷೆ ನಾಗರತ್ನಮ್ಮ ಅಭಿಪ್ರಾಯಪಟ್ಟರು.ತಾಲೂಕಿನ ಧರ್ಮಪುರ ಗ್ರಾಪಂ ಆವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಧರ್ಮಪುರ ಗ್ರಾಪಂ ಹಾಗೂ ಧಾತ್ರಿ ರಂಗಸಂಸ್ಥೆ ಸಿರಿಗೇರಿಯ ಆಕ್ತಾಶ್ರಯದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಲನಚಿತ್ರ, ದೂರದರ್ಶನದಂತಹ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ರಂಗಭೂಮಿ ತನ್ನ ನೆಲೆಯನ್ನು ಗಟ್ಟಿಮಾಡಿಕೊಳ್ಳಬೇಕಿದೆ. ಆಧುನಿಕ ಜಗತ್ತು ಒಡ್ಡುವ ಸಮಸ್ಯೆ, ಸವಾಲುಗಳಿಗೆ ನಾಟಕಗಳು ಉತ್ತರ ನೀಡುತ್ತವೆ. ಇವುಗಳು ಮನುಕುಲಕ್ಕೆ ಬೇಕಾದ ನೆಮ್ಮದಿ, ಸಾಂತ್ವಾನ, ಸೌಹಾರ್ಧತೆ, ಸಹಬಾಳ್ವೆಯನ್ನು ತಂದು ಕೊಡುತ್ತವೆ ಎಂದರು.ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಜಾಗತೀಕರಣ, ಆಧುನೀಕರಣದಿಂದಾಗಿ ದೇಶಿಯ ಕಲೆಗೆ ಪೆಟ್ಟು ಬಿದ್ದಿದೆ. ದೃಶ್ಯ ಮಾಧ್ಯಮದ ಭರಾಟೆಯಲ್ಲಿ ಕಲಾವಿದರ ಬದುಕು ಛಿದ್ರವಾಗಿದೆ. ಸಾಹಿತ್ಯ, ಸಂಗೀತ, ರಂಗಕಲೆ, ಜಾನಪದ ಕಲೆಯ ಪರಂಪರೆಯ ಉಳಿವಿಗೆ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದರು.
ಪಂಚಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ವಿ.ವೀರಣ್ಣ ಮಾತನಾಡಿದರು. ಧಾತ್ರಿ ರಂಗಸಂಸ್ಥೆಯ ಕಲಾವಿದರು ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಮಾಡಿದರು.ಈ ವೇಳೆ ಧರ್ಮಪುರ ಗ್ರಾಪಂ ಉಪಾಧ್ಯಕ್ಷೆ ಎಂ.ಎನ್. ಮಂಜುಳ, ಮಾಜಿ ಅಧ್ಯಕ್ಷೆ ಲಕ್ಷ್ಮಿದೇವಿ, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಸಕ್ಕರ ನಾಗರಾಜು, ಉಪ ತಹಸೀಲ್ದಾರ್ ಮಂಜಪ್ಪ, ತಾಲೂಕು ಕೃಷಿಕ ಸಮಾಜದ ಸದಸ್ಯೆ ಅನ್ನಪೂರ್ಣಮ್ಮ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಕೆ.ಪಿ.ಎಲ್.ಜಗದೀಶ್ ಯಾದವ್, ಗ್ರಾಮ ಪಂಚಾಯ್ತಿ ಸದಸ್ಯರಾದ ನೂರ್‍ಜಾನ್, ನೌಷದ್‍ಖಾನ್, ಆಶ್ಲಾಭಾಷ, ಕಾವ್ಯ, ಅರವಿಂದ್, ಭೀಮೇಶ್, ಸುಮಂಗಲ ಮುಂತಾದವರು ಉಪಸ್ಥಿತರಿದ್ದರು.