ಮಂಡ್ಯ ಜಿಲ್ಲಾದ್ಯಂತ ಸಡಗರದಿಂದ ಸಂಕ್ರಾಂತಿ ಆಚರಣೆ

KannadaprabhaNewsNetwork |  
Published : Jan 15, 2025, 12:46 AM IST
ಮಂಡ್ಯ ಜಿಲ್ಲಾದ್ಯಂತ ಸಡಗರದಿಂದ ಸಂಕ್ರಾಂತಿ ಆಚರಣೆ | Kannada Prabha

ಸಾರಾಂಶ

ಮಕರ ಸಂಕ್ರಾತಿ ಹಬ್ಬದ ದಿನವಾದ ಮಂಗಳವಾರ ಮಂಡ್ಯ ನಗರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಎಳ್ಳು-ಬೆಲ್ಲ ವಿನಿಯಮದೊಂದಿಗೆ ಸಂತಸಪಟ್ಟರೆ ಗ್ರಾಮೀಣ ಪ್ರದೇಶದಲ್ಲಿ ಪುರುಷರು ಜಾನುವಾರುಗಳ ಕಿಚ್ಚು ಹಾಯಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಕರ ಸಂಕ್ರಾತಿ ಹಬ್ಬದ ದಿನವಾದ ಮಂಗಳವಾರ ನಗರ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು ಎಳ್ಳು-ಬೆಲ್ಲ ವಿನಿಯಮದೊಂದಿಗೆ ಸಂತಸಪಟ್ಟರೆ ಗ್ರಾಮೀಣ ಪ್ರದೇಶದಲ್ಲಿ ಪುರುಷರು ಜಾನುವಾರುಗಳ ಕಿಚ್ಚು ಹಾಯಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.

ಹಬ್ಬದ ದಿನ ಮುಂಜಾನೆಯೇ ಎಲ್ಲಾ ದೇವಾಲಯಗಳಲ್ಲೂ ಸಂಕ್ರಾಂತಿ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರವನ್ನು ಮಾಡಿದ್ದರು. ಶುಚಿರ್ಭೂತರಾದ ಮಹಿಳೆಯರು, ಮಕ್ಕಳು ಹೊಸಬಟ್ಟೆ ತೊಟ್ಟು ದೇವಾಲಯಗಳಿಗೆ ತೆರಳಿ ಪ್ರಥಮ ದರ್ಶನ ಪಡೆದು ಧನ್ಯತಾಭಾವ ಮೆರೆದರು. ಧನುರ್ಮಾಸದ ಪ್ರಯುಕ್ತ ಕಳೆದ ಒಂದು ತಿಂಗಳಿಂದ ನಾನಾ ಪೂಜೆಗಳು ನಡೆಯುತ್ತಿದ್ದು, ಧರ್ನುರ್ಮಾಸದ ಕೊನೆಯ ದಿನ ವಿಶೇಷ ಪೂಜೆ ವಿಜೃಂಭಣೆಯಿಂದ ನಡೆದವು. ದೇವಾಲಯಗಳಲ್ಲಿ ಭಕ್ತರಿಗೆ ಬಿಸಿಬಿಸಿ ಪೊಂಗಲ್‌ನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿತ್ತು.

ಮನೆಯಲ್ಲಿ ರುಚಿಯಾದ ಅಡುಗೆ ತಯಾರಿಸಿ ಸವಿದು ಸಂತೋಷದಿಂದ ಹಬ್ಬ ಆಚರಿಸಿದರು. ಸಂಜೆಯಾದ ಬಳಿಕ ಮಹಿಳೆಯರು-ಮಕ್ಕಳು ಎಳ್ಳು-ಬೆಲ್ಲದೊಂದಿಗೆ ಸ್ನೇಹಿತರು, ಬಂಧುಗಳ ಮನೆಗೆ ತೆರಳಿ ಪರಸ್ಪರ ವಿನಿಮಯ ಮಾಡಿಕೊಂಡರು. ರೈತರು ತಾವು ಬೆಳೆದ ದವಸ-ಧಾನ್ಯಗಳನ್ನು ದೇವಾಲಯಗಳಿಗೆ ನೀಡಿ ಪೂಜೆ ಸಮರ್ಪಿಸಿದರು.

ರಾಸುಗಳ ಕಿಚ್ಚು ಸಂಕ್ರಾಂತಿಯ ಮತ್ತೊಂದು ವಿಶೇಷವಾಗಿತ್ತು. ಬೆಳಗ್ಗೆಯಿಂದಲೇ ಜಾನುವಾರುಗಳ ಮೈ ತೊಳೆದು ಅವುಗಳಿಗೆ ಹೊಸ ಮೂಗುದಾರ, ಕುತ್ತಿಗೆಗೆ ಹೊಸ ಕರಿದಾರ, ಕೊರಳಿಗೆ ಗಂಟೆ, ಗೊಂಡೆ ಹಾರಗಳನ್ನು ಹಾಕಿದರು. ಕೊಂಬುಗಳನ್ನು ಸವರಿಸಿ ಆಕರ್ಷಣೆಗೊಳಿಸಿದ್ದರು. ಮೈಗೆ ಬಣ್ಣ ಹಚ್ಚಿ, ಪ್ಲಾಸ್ಟಿಕ್ ಹಾರಗಳು, ವಸ್ತುಗಳಿಂದ ಸಿಂಗರಿಸಿದರು. ಆಕರ್ಷಕ ಬಣ್ಣಗಳು, ಟೇಪು, ಥರ್ಮಾಕೋಲ್, ಹೂವು, ಹಾರ, ನಿಂಬೆಹಣ್ಣುಗಳಿಂದ ರಾಸುಗಳನ್ನು ಅಲಂಕರಿಸಲಾಗಿತ್ತು. ರಾಸುಗಳಿಗೆ ಅಲಂಕಾರಿಕ ಮೇಲುಹೊದಿಕೆ (ಗೌಸ) ಹಾಕಿ ಆಕರ್ಷಣೆಯನ್ನು ಹೆಚ್ಚಿಸಲಾಗಿತ್ತು.

ಸಂಜೆ ಎಲ್ಲ ಗ್ರಾಮಗಳಲ್ಲಿ ರಾಸುಗಳನ್ನು ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯಿತು. ಕೆಲವೆಡೆ ರಾಸುಗಳ ಸ್ಪರ್ಧೆಗಳನ್ನು ನಡೆಸಲಾಯಿತು. ಉತ್ತಮ ರಾಸುಗಳು ಹಾಗೂ ಅವುಗಳ ಅಲಂಕಾರಕ್ಕಾಗಿ ಬಹುಮಾನವನ್ನು ನೀಡಲಾಯಿತು. ಕಿಚ್ಚು ಹಾಯಿಸುವಾಗಿ ಮೊದಲು ಬಂದ ರಾಸುಗಳಿಗೆ ಬಹುಮಾನ ವಿತರಿಸಲಾಯಿತು.

ನಗರದ ಸ್ವರ್ಣಸಂದ್ರ, ಗುತ್ತಲು ಬಡಾವಣೆ, ಚಿಕ್ಕೇಗೌಡನದೊಡ್ಡಿ, ಕ್ಯಾತುಂಗೆರೆ, ಉದಯಗಿರಿ, ಕಲ್ಲಹಳ್ಳಿ, ಬನ್ನೂರು ರಸ್ತೆ, ಹೊಸಹಳ್ಳಿ ವೃತ್ತ ಸೇರಿದಂತೆ ನಗರದ ವಿವಿಧೆಡೆಗಳಲ್ಲೂ ಸಹ ರಸ್ತೆಗಳಲ್ಲೇ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.

ಗೋವುಗಳಿಗೆ ಗೋಗ್ರಾಸ:

ಮಂಡ್ಯ ತಾಲೂಕು ಪಣಕನಹಳ್ಳಿ ಗ್ರಾಮದಲ್ಲಿ ಶ್ರೀಭೈರವೇಶ್ವರ ದೇವಾಲಯ ಆವರಣದಲ್ಲಿ ಕಿಚ್ಚು ಹಾಯಿಸುವುದಕ್ಕೆ ಮುಂಚಿತವಾಗಿ ಶ್ರೀಭೈರವೇಶ್ವರ ಯುವಕರ ಸಂಘ ಹಾಗೂ ಗ್ರಾಮಸ್ಥರಿಂದ ನೂರಾರು ರಾಸುಗಳಿಗೆ ಸಾಮೂಹಿಕವಾಗಿ ಗೋಗ್ರಾಸ (ಎಳ್ಳು, ಬೆಲ್ಲ, ಕಾಯಿ, ಹಿಂಡಿ-ಬೂಸಾ, ರವೆ) ನೀಡಲಾಯಿತು. ಆಕರ್ಷಕವಾದ ೪೦-೫೦ ಜೋಡೆತ್ತುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಾಗುವ ರಸ್ತೆಯನ್ನು ರಂಗೋಲಿ ಇಟ್ಟು, ತಳಿರು-ತೋರಣಗಳನ್ನು ಕಟ್ಟಿ ಶೃಂಗರಿಸಲಾಗಿತ್ತು. ಹೊಳಲು ರಸ್ತೆಯಲ್ಲಿ ಜಾನುವಾರುಗಳನ್ನು ಕಿಚ್ಚು ಹಾಯಿಸಲಾಯಿತು.

ಕಿಚ್ಚು ಹಾಯಿಸುವ ವೇಳೆ ಗೂಳಿಗುದ್ದಿ ವ್ಯಕ್ತಿಗೆ ಗಂಭೀರ ಗಾಯ

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜುಗಳ ಕಿಚ್ಚು ಹಾಯಿಸುವ ವೇಳೆ ಜನರ ಬಳಿಗೆ ನುಗ್ಗಿದ ಗೂಳಿಯೊಂದು ವ್ಯಕ್ತಿಯೊಬ್ಬರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ನಗರದ ಹೊಸಹಳ್ಳಿ ಬಡಾವಣೆಯಲ್ಲಿ ನಡೆದಿದೆ.

ಕಿಚ್ಚು ಹಾಯಿಸಿಕೊಂಡು ಮುನ್ನುಗುವ ಸಮಯದಲ್ಲಿ ಬೆದರಿದ ಗೂಳಿ ಜನರು ನಿಂತಿದ್ದ ಕಡೆಗೆ ನುಗ್ಗಿದೆ. ಕಿಚ್ಚು ಹಾಯಿಸುವುದನ್ನು ನೋಡುತ್ತಾ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಜೋರಾಗಿ ಗುದ್ದಿದೆ. ಗೂಳಿ ಗುತ್ತಿದ ರಭಸಕ್ಕೆ ವ್ಯಕ್ತಿ ಪಲ್ಟಿ ಹೊಡೆದಿದ್ದು ತೀವ್ರ ಗಾಯಗೊಂಡನು.

ಸ್ಥಳದಲ್ಲಿದ್ದ ಮಂಡ್ಯ ಪೂರ್ವ ಠಾಣೆ ಸಬ್ ಇನ್ಸ್ಪೆಕ್ಟರ್ ಎಸ್. ಶೇಷಾದ್ರಿ ಅವರು ಗಾಯಾಳುವನ್ನು ತಮ್ಮ ಜೀಪ್ನಲ್ಲಿ ಮಿನ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದರೊಂದಿಗೆ ಮಾನವೀಯತೆ ಮೆರೆದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!