ಕನ್ನಡಪ್ರಭ ವಾರ್ತೆ ಬೀದರ್12 ನೇ ಶತಮಾನಕ್ಕಿಂತ ಪೂರ್ವ ಇಂಥ ವಿಚಾರ ಸಾಹಿತ್ಯದಲ್ಲಿರಲಿಲ್ಲ. ಶರಣರ ಸತ್ಯದ ಶಕ್ತಿ ಇದರಲ್ಲಿ ಕಾಣಬಹುದಾಗಿದೆ ಎಂದು ಮನಗುಂಡಿಯ ಬಸವಾನಂದರು ನುಡಿದರು.ಬಸವಸೇವಾ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಶರಣ ಉದ್ಯಾನದಲ್ಲಿ ಶರಣ ಸಂಗಮ ಹಾಗೂ ವಚನ ಹೃದಯ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗ್ರಂಥ ಕರ್ತರಾದ ಬಸವಾನಂದ ಸ್ವಾಮಿಗಳು ಅನುಭಾವ ನೀಡಿ ವಚನಾಂಕಿತಗಳ ಸುದೀರ್ಘ ಚಿಂತನ ಮಂಥನ ಇಲ್ಲಿ ಅಳವಡಿಸಿದೆ. ಶರಣರ ಅಂಕಿತ ನಾಮ ಗಳು ಸ್ಥಾವರ ಮೂಲದವಲ್ಲ. ಜಂಗಮ ಭಾವದ ಸ್ವೋಪಜ್ಞ ಕುರುಹುಗಳು ಎಂಬುದು ಎತ್ತಿ ಹಿಡಿಯಲಾಗಿದೆ. ಶರಣರ ಅಂಕಿತನಾಮಗಳು ವಿಶ್ವ ಸಾಹಿತ್ಯದಲ್ಲಿ ಪ್ರಥಮ ಶರಣರ ವಚನಾಂಕಿತ ಕಲ್ಪನೆ ವೈಚಾರಿಕ ಹಿನ್ನೆಲೆಯಲ್ಲಿ ಅಳವಡಿಸಿದೆ. ಆದ್ಯರು, ವೇದ್ಯರು, ಪುರಾತನರು ಮತ್ತು ಪ್ರಮಥರು ಎಂಬ ಪದಗಳಿಗೆ ನಿಖರವಾದ ಅರ್ಥ ನೀಡಿದೆ. ಪುಸ್ತಕದಲ್ಲಿ ಬದಲಾದ ಜೀವನ ಚರಿತ್ರೆ ಮತ್ತು ಶರಣ ತತ್ವ ವನ್ನು ಹೊಸ ದೃಷ್ಟಿಯಿಂದ ನೋಡುವ ಅವಕಾಶ ಕಲ್ಪಿಸುತ್ತದೆ. ಚಿಂತಕರಿಗೆ ಪ್ರಗತಿಪರ ವಿಚಾರ ಉಳ್ಳವರಿಗೆ ವಚನಾಧ್ಯಯಗಳಿಗೆ ಇದು ಮಾರ್ಗದರ್ಶನ ವಾಗಿದೆ ಎಂದರು.ಗಾಂಧಿ ಗಂಜ ಬ್ಯಾಂಕ್ ನ ಉಪಾಧ್ಯಕ್ಷರಾದ ಸುನೀಲ ಗೂನಳ್ಳಿ ಉದ್ಘಾಟಿಸಿದರು. ಪುಸ್ತಕ ಬಿಡುಗಡೆಗೊಳಿಸಿದ ರಾಷ್ಟ್ರೀಯ ಬಸವ ದಳದ ಬಳ್ಳಾರಿ ಅಧ್ಯಕ್ಷೆ ಶಾರದಾ ತಾಯಿ ಬಳ್ಳಾರಿ ಮಾತನಾಡಿ, ಪೂಜ್ಯರು ಎರಡು ಕಣ್ಣುಗಳು ಕಳೆದುಕೊಂಡು ಸಂಕಷ್ಟದ ಜೀವನದ ಮಧ್ಯೆ ಇಡೀ ರಾಜ್ಯವೇ ತನ್ನತ್ತ ನೋಡುವ ಹಾಗೆ ಕಾರ್ಯ ಮಾಡುತ್ತಿದ್ದಾರೆ. ಅವರು ಬರೆದ ಆರೋಗ್ಯ ಅಮೃತ ಗ್ರಂಥ ಸುಮಾರು ಹದಿನಾಲ್ಕು ಸಲ ಮರು ಮುದ್ರಣಗೊಂಡಿದೆ. ವಚನ ಹೃದಯ ಗ್ರಂಥ ಹೊಸ ವಿವೇಚನೆ ಹಾಗೂ ಮೌಲಿಕ ಗ್ರಂಥವಾಗಿದೆ ಎಂದರು.