ಹುಬ್ಬಳ್ಳಿ:

ತಾಲೂಕಿನ ಶೇರೆವಾಡದಲ್ಲಿ ಫೆ. 4ರಂದು ಪ್ರತ್ಯೇಕ್ಷವಾಗಿದ್ದ ಚಿರತೆ ಈ ವರೆಗೂ ಸೆರೆ ಸಿಕ್ಕಿಲ್ಲ. ಇದು ಆ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಸಭಾಪತಿ ಬಸವರಾಜ ಹೊರಟ್ಟಿ ಅವರ ಫಾರ್ಮ್‌ಹೌಸ್‌ನಲ್ಲಿ ಯಾವುದೇ ಚಿರತೆ ಕಂಡು ಬಂದಿಲ್ಲ. ಇದೆಲ್ಲ ಸುಳ್ಳು ಎಂದು ಅರಣ್ಯ ಇಲಾಖೆ ತಿಳಿಸಿದೆ. ಇದರ ನಡುವೆ ಕಲಘಟಗಿ ತಾಲೂಕಿನ ಅರಣ್ಯದಂಚಿನಲ್ಲಿ ಬರುವ ಹಟಕಿನಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಆಕಳು ಕರುಗಳು ಬಲಿಯಾದ ಘಟನೆ ಬುಧವಾರ ನಡೆದಿದೆ. ಶಂಕರ ಅಮಗಾಂವಕರ ಎನ್ನುವ ರೈತರಿಗೆ ಸೇರಿದ ಜಮೀನಿನಲ್ಲಿ ಕಟ್ಟಿ ಹಾಕಿದ ಎರಡು ಕರುಗಳ ಮೇಲೆ ಚಿರತೆ ದಾಳಿ ಮಾಡಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.ವಿಮಾನ ನಿಲ್ದಾಣದ ಹಿಂಬದಿಯಲ್ಲಿ ಡಿಸೆಂಬರ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಬರೋಬ್ಬರಿ 38 ದಿನಗಳ ಬಳಿಕ ಸೆರೆ ಸಿಕ್ಕಿತ್ತು. ಇದರಿಂದಾಗಿ ಗಾಮನಗಟ್ಟಿ, ವಿಮಾನ ನಿಲ್ದಾಣದ ಭಾಗದ ಜನತೆ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದರು. ಇದಾದ ಬಳಿಕ ಶೇರೆವಾಡ ಬಳಿ ಫೆ. 4ರಂದು ಮನೆಗೆ ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸೆರೆಯಾಗಿದ್ದವು. ಅದನ್ನು ಫೆ.7ರಂದು ಪರಿಶೀಲಿಸಿದಾಗ ತಿಳಿದು ಬಂದ ಕಾರಣ ಅರಣ್ಯ ಇಲಾಖೆ ಆ ಪ್ರದೇಶದಲ್ಲಿ ಪಂಜರ್‌ ಅಳವಡಿಸಿ, ಕೆಲವೊಂದಿಷ್ಟು ಕಾಮೆರಾ ಟ್ರ್ಯಾಪ್‌ ಅಳವಡಿಸಿದೆ. ಆದರೆ, ಈ ವರೆಗೂ ಚಿರತೆ ಸೆರೆ ಸಿಕ್ಕಿಲ್ಲ. ಇದು ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಹೊರಟ್ಟಿ ತೋಟದಲ್ಲಿ ಚಿರತೆ ಇಲ್ಲ:

ಈ ನಡುವೆ ಸಭಾಪತಿ ಬಸವರಾಜ ಹೊರಟ್ಟಿ ಅವರ ವರೂರ ಬಳಿ ಇರುವ ತೋಟದ ಮನೆಯಲ್ಲೂ ಚಿರತೆ ಕಂಡು ಬಂದಿದೆ ಎಂಬ ವದಂತಿ ಬುಧವಾರ ಹಬ್ಬಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಪರಿಶೀಲಿಸಿದಾಗ ಅದು 2023ರಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯದ ಕಾಂಪೌಂಡ್‌ ಮೇಲೆ ಕಂಡು ಬಂದಿದ್ದ ಚಿರತೆಯ ಚಿತ್ರ ಹಾಗೂ ವೀಡಿಯೋ ಎಂಬುದು ಬಯಲಿಗೆ ಬಂದಿದೆ. ಇದು ಸುಳ್ಳು. ಜನರ ಹಾದಿ ತಪ್ಪಿಸಲು ಕಿಡಿಗೇಡಿಗಳು ಬಿಟ್ಟಿರುವ ವೀಡಿಯೋ ಅಷ್ಟೇ ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಈ ನಡುವೆ ಶೇರೆವಾಡದಲ್ಲಿ ಚಿರತೆ ಕಂಡು ಬಂದಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಕೆಲ ಕಿಡಿಗೇಡಿಗಳು, ಎಐ ತಂತ್ರಜ್ಞಾನ ಬಳಸಿ ಬೇರೆ ಬೇರೆ ಗ್ರಾಮಗಳಲ್ಲೂ ಚಿರತೆ ಬಂದಿದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಸಾರ್ವಜನಿಕರು ಆತಂಕ ಪಡಬಾರದು ಎಂದು ಅರಣ್ಯ ಇಲಾಖೆ ತಿಳಿಸಿದೆ.ಶೇರೆವಾಡದಲ್ಲಿ ಫೆ. 4ರಂದು ಚಿರತೆ ಕಂಡು ಬಂದಿದ್ದು ನಿಜ. ಅದರ ಹೆಜ್ಜೆ ಗುರುತು, ಲದ್ದಿಗಳೆಲ್ಲ ಪತ್ತೆಯಾಗಿವೆ. ಆದರೆ, ಸಭಾಪತಿ ಹೊರಟ್ಟಿ ಅವರ ತೋಟದಲ್ಲಿ ಚಿರತೆ ಕಂಡು ಬಂದಿಲ್ಲ. ಬೆಂಗಳೂರ ವಿವಿಯಲ್ಲಿ 2023ರಲ್ಲಿ ಕಂಡು ಬಂದಿದ್ದ ಚಿರತೆ ವೀಡಿಯೋ ಹರಿಬಿಟ್ಟು ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ ಅಷ್ಟೇ.


ಆರ್‌.ಎಸ್‌. ಉಪ್ಪಾರ, ವಲಯ ಅರಣ್ಯಾಧಿಕಾರಿಗಳು, ಹುಬ್ಬಳ್ಳಿ

ಚಿರತೆ ದಾಳಿಗೆ ಎರಡು ಕರುಗಳ ಬಲಿ

ಕಲಘಟಗಿ ತಾಲೂಕಿನ ಅರಣ್ಯದಂಚಿನಲ್ಲಿ ಬರುವ ಹಟಕಿನಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎರಡು ಆಕಳು ಕರುಗಳು ಬಲಿಯಾದ ಘಟನೆ ಬುಧವಾರ ನಡೆದಿದೆ. ಶಂಕರ ಅಮಗಾಂವಕರ ಎನ್ನುವ ರೈತರಿಗೆ ಸೇರಿದ ಜಮೀನಿನಲ್ಲಿ ಕಟ್ಟಿ ಹಾಕಿದ ಎರಡು ಕರುಗಳ ಮೇಲೆ ಚಿರತೆ ದಾಳಿ ಮಾಡಿದ್ದು ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಆರ್‌ಎಫ್‌ಒ ಅರುಣಕುಮಾರ ಅಷ್ಠಗಿ, ಹೆಚ್ಚಿನ ಅರಣ್ಯ ರಕ್ಷಕ ಸಿಬ್ಬಂದಿಗಳನ್ನು ನೇಮಿಸಿದ್ದು, ಗ್ರಾಮವು ಅರಣ್ಯದಂಚಿನಲ್ಲಿ ಬರುವುದರಿಂದ ಪಕ್ಕದ ಕೆರೆಯಲ್ಲಿ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳು ಗ್ರಾಮದ ಜಮೀನಿನಲ್ಲಿ ಕಟ್ಟಿರುವ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿವೆ. ಗ್ರಾಮಸ್ಥರು ರಾತ್ರಿಯ ವೇಳೆ ಒಬ್ಬಬ್ಬರಾಗಿ ಹೊರಬರದಂತೆ ಎಚ್ಚರಿಸಲಾಗಿದೆ ಎಂದರು.