ಹಾನಗಲ್ಲ: ತಾಲೂಕಿನಾದ್ಯಂತ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯಾದೀತೆಂಬ ಕಾರಣಕ್ಕೆ ರೈತರ 80 ಕೊಳವೆಬಾವಿಗಳನ್ನು ಬಾಡಿಗೆಗಾಗಿ ಗುರುತಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸದ್ಯಕ್ಕೆ ನೀರು ಒದಗಿಸುತ್ತಿವೆ, ಅಂತರ್ಜಲ ಈ ಬಾರಿ ಚೆನ್ನಾಗಿದೆ ಎಂಬ ಆಭಿಪ್ರಾಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳದ್ದಾಗಿದ್ದರೂ ಎಚ್ಚರಿಕೆ ವಹಿಸಬೇಕಾಗಿದೆ.
ಹಾನಗಲ್ಲ ತಾಲೂಕಿನ 42 ಗ್ರಾಮ ಪಂಚಾಯಿತಿಗಳಲ್ಲಿ 248 ಮೇಲ್ಮಟ್ಟದ ಜಲಾಗಾರಗಳಿವೆ. 12 ನೆಲಮಟ್ಟದ ಜಲಾಗಾರಗಳಿವೆ. ಕೊಳವೆ ಬಾವಿಗಳಲ್ಲಿ ನೀರಿನ ಕೊರತೆಯಾಗುವ ಲಕ್ಷಣಗಳಿಲ್ಲ. 119 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಇವುಗಳಲ್ಲಿ 50ನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. 14 ಕುಡಿಯುವ ನೀರಿನ ಘಟಕಗಳು ದುರಸ್ತಿಗಾಗಿ ಕಾಯುತ್ತಿವೆ.ನೀರಿನ ಸಮಸ್ಯೆಯಾಗದು: ಈ ಹಿಂದೆ ಕುಡಿಯುವ ನೀರಿನ ಕೊರತೆಯಾದ ಗ್ರಾಮಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಕುಡಿಯುವ ನೀರಿನ ಕೊರತೆ ಆಗದು ಎಂಬ ವಿಶ್ವಾಸವಿದೆ. ಸಾಕಷ್ಟು ಕೊಳವೆಬಾವಿಗಳು, ನೀರು ಸಂಗ್ರಹ ಜಲಾಗಾರಗಳೂ ಇರುವುದರಿಂದ ತೊಂದರೆಯಾಗದು. ಕೊರತೆಯಾದರೂ ರೈತರ ಕೊಳವೆಬಾವಿಗಳನ್ನು ಬಾಡಿಗೆಗೆ ಬಳಸಿಕೊಂಡು ನೀರು ಪೂರೈಸುವ ಯೋಜನೆಯೂ ಇದೆ. ರೈತರೂ ಕೂಡ ತಕರಾರಿಲ್ಲದೆ ಕೊಳವೆಬಾವಿಗಳನ್ನು ಕೊಟ್ಟಿದ್ದಾರೆ. ನೀರಿನ ಸಮಸ್ಯೆಯಾಗದು ಎಂದು ಹಾನಗಲ್ಲ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನೆಗಳೂರ ಹೇಳಿದರು.