ವಿಶೇಷ ವರದಿ
ಕೃಷಿ ಪ್ರಧಾನವಾಗಿರುವ ಹಾವೇರಿ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆ ಬಾಡಿ ಭೀಕರ ಬರಗಾಲ ಆವರಿಸಿದೆ. ಆದರೆ ಕೇಂದ್ರ ಅಧ್ಯಯನ ತಂಡ ಈ ಸಾರಿ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಜಿಲ್ಲೆಯ ೮ ತಾಲೂಕುಗಳ ಪೈಕಿ ಶಿಗ್ಗಾಂವಿ, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿಲ್ಲ. ಇಡಿ ಜಿಲ್ಲೆಯಲ್ಲಿ ಬರ ಆವರಿಸಿದ್ದರೂ ಮೂರು ತಾಲೂಕುಗಳನ್ನು ಬಿಟ್ಟಿರುವುದಕ್ಕೆ ರೈತರ ಹೋರಾಟ ಶುರುವಾಗಿದೆ. ಕೈಬಿಟ್ಟಿರುವ 3 ತಾಲೂಕುಗಳನ್ನು ಬರಪೀಡಿತ ಘೋಷಿಸಬೇಕು ಎಂಬ ರೈತರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.
ಜಿಲ್ಲೆಯ ೩.೩೦ ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ೩.೨೭ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ಆರಂಭದಲ್ಲಿ ಮಾಯವಾದ ಮಳೆ ಇನ್ನೂ ಇತ್ತ ಸುಳಿದಿಲ್ಲ. ಹೊಲದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಬೆಳೆಗಳು ಕಾಳು ಕಟ್ಟಿಲ್ಲ. ಕೆರೆ ಕಟ್ಟೆಗಳಲ್ಲೂ ನೀರು ಬರಿದಾಗುತ್ತಿದೆ. ಹಿಂಗಾರು ಹಂಗಾಮು ಸಮೀಪಿಸುತ್ತಿದ್ದರೂ ನಿರೀಕ್ಷಿತ ಮಳೆ ಬರುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಎದುರಾಗಲಿದೆ. ಈಗಲೇ ಜಿಲ್ಲೆಯ ಜನ ಬರದಿಂದ ತತ್ತರಿಸುವಂತಾಗಿದೆ. ಪ್ರತಿಸಾರಿ ಜಿಲ್ಲೆಯ ವಿವಿಧ ಭಾಗಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದ ಕೇಂದ್ರ ಬರ ಅಧ್ಯಯನ ತಂಡ ಈ ಸಲ ಜಿಲ್ಲೆಗೆ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆ ರೈತರದ್ದಾಗಿದೆ.ವರದಿ ಸಲ್ಲಿಸಿದ್ದ ಮೊದಲ ಜಿಲ್ಲೆ:
ಮಳೆ ಮಾಯ:ಜಿಲ್ಲೆಯಲ್ಲಿ ಜುಲೈ ಹೊರತುಪಡಿಸಿದರೆ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದೆ. ಜುಲೈನಲ್ಲಿ ಬಿತ್ತನೆಯಾದ ಬೆಳೆಗಳಿಗೆ ಆಗಸ್ಟ್ ತಿಂಗಳಲ್ಲಿ ಮಳೆಯಾಗಿದ್ದರೆ ಬೆಳವಣಿಗೆಯಾಗುತ್ತಿತ್ತು. ಆದರೆ, ಕಳೆದ ಆಗಸ್ಟ್ ಇಡೀ ತಿಂಗಳು ಹಾಗೂ ಸೆಪ್ಟೆಂಬರ್‌ನಲ್ಲಿ ಇದುವರೆಗೂ ಮಳೆಯಿಲ್ಲದೇ ಬೆಳೆಗಳು ಬಾಡುತ್ತಿವೆ. ಹೊಲಗದ್ದೆಗಳು ಹಸಿರಾಗಿ ಕಂಡರೂ ಬೆಳೆ ಬಂದಿಲ್ಲ. ಮೆಕ್ಕೆಜೋಳ ಕಾಳು ಕಟ್ಟಿಲ್ಲ. ಇನ್ನಿತರ ಬೆಳೆಗಳು ಬಾಡಿ ಕೆಂಪಗಾಗುತ್ತಿವೆ. ಆಗಸ್ಟ್‌ನಲ್ಲಿ ೧೨೭ ಮಿಮೀ ವಾಡಿಕೆ ಮಳೆಯಲ್ಲಿ ಕೇವಲ ೨೭ ಮಿಮೀ ಮಳೆ ಬಿದ್ದು, ಶೇ. ೭೮ರಷ್ಟು ಮಳೆ ಅಭಾವವಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಶೇ. ೭೧ರಷ್ಟು ಕೊರತೆ, ಹಾನಗಲ್ಲ ತಾಲೂಕಿನಲ್ಲಿ ಶೇ. ೮೧, ಹಾವೇರಿ ಶೇ. ೮೫, ಹಿರೇಕೆರೂರು ಶೇ. ೭೯, ರಾಣಿಬೆನ್ನೂರು ಶೇ. ೬೯, ಸವಣೂರು ಶೇ. ೮೩, ಶಿಗ್ಗಾಂವಿ ಶೇ. ೭೨, ರಟ್ಟೀಹಳ್ಳಿ ತಾಲೂಕಿನಲ್ಲಿ ಶೇ. ೬೬ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಸೆಪ್ಟಂಬರ್ ತಿಂಗಳಲ್ಲಿ ಕೂಡ ಶೇ. ೪೦ರಷ್ಟು ಮಳೆ ಕೊರತೆಯಾಗಿದ್ದು, ಜೂ. ೧ರಿಂದ ಈ ವರೆಗಿನ ಅವಧಿಯಲ್ಲಿ ೪೬೪ ಮಿಮೀ ವಾಡಿಕೆ ಮಳೆ ಎದುರು ೩೩೮ ಮಿಮೀ ಮಳೆಯಾಗಿ ಶೇ. ೨೭ರಷ್ಟು ಕೊರತೆ ಕಾಣಿಸಿಕೊಂಡಿದೆ.ರೈತರ ಪ್ರತಿಭಟನೆ ಭೀತಿಯೇ?