ಕಬ್ಬಿನ ದರ, ಸಕ್ಕರೆ ಬೆಲೆ ಹೆಚ್ಚಳಕ್ಕೆ ಕೇಂದ್ರದ ಗಮನ ಸೆಳೆಯಿರಿ: ರೈತರಿಂದ ಮನವಿ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

ಸಕ್ಕರೆ ಕಾರ್ಖಾನೆ ಮಾಲೀಕರು ಸಹ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ಕಾರ್ಖಾನೆ ಮಾಲೀಕರನ್ನು ಕೇಳಿದರೆ ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಹೆಚ್ಚಳ ಮಾಡದ ಕಾರಣ ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಕೇಂದ್ರ ಸರ್ಕಾರದ ಗಮನಕ್ಕೆ ತಂದು ಎಫ್‌ಆರ್‌ಪಿ ದರದಂತೆ ಕಬ್ಬಿನ ದರ ನಿಗದಿ ಹಾಗೂ ಸಕ್ಕರೆ ಬೆಲೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಕೆಸ್ತೂರು ಜಿಪಂ ವ್ಯಾಪ್ತಿಯ ಚಾಕನಕೆರೆಗೆ ಬಾಗೀನ ಅರ್ಪಿಸಲು ಆಗಮಿಸಿದ್ದ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ಎಫ್‌ಆರ್‌ಪಿ ದರದಂತೆ ಪ್ರತಿ ಟನ್ ಕಬ್ಬಿಗೆ 4500 ರು. ಮೀರಿ ನಿಗದಿ ಹಾಗೂ ಪ್ರತಿ ಕೆಜಿ ಸಕ್ಕರೆಗೆ 50 ರು. ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು.

ರಾಜ್ಯದ ಪ್ರಮುಖ ಬೆಳೆಗಳಲ್ಲಿ ಕಬ್ಬು ಸಹ ಒಂದು. ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರದ ಬೆಲೆ, ಕಟಾವು ಕೂಲಿ ದರ, ಸಾಗಾಣಿಕೆ ವೆಚ್ಚ ಸೇರಿದಂತೆ ಇನ್ನಿತರೆ ವೆಚ್ಚಗಳು ಹೆಚ್ಚಾಗಿ ರೈತ ಬೆಳೆದ ಕಬ್ಬಿನ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆ ದಾರಿ ಹಿಡಿಯಲು ಮುಂದಾಗಿದ್ದಾರೆ ಎಂದು ರೈತರು ಅಳಲು ವ್ಯಕ್ತಪಡಿಸಿದರು.

ಸಕ್ಕರೆ ಕಾರ್ಖಾನೆ ಮಾಲೀಕರು ಸಹ ಕಾರ್ಖಾನೆಗೆ ಸರಬರಾಜು ಮಾಡಿದ ಕಬ್ಬಿಗೆ ಸಮಯಕ್ಕೆ ಸರಿಯಾಗಿ ಹಣ ಪಾವತಿ ಮಾಡುತ್ತಿಲ್ಲ. ಕಾರ್ಖಾನೆ ಮಾಲೀಕರನ್ನು ಕೇಳಿದರೆ ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಹೆಚ್ಚಳ ಮಾಡದ ಕಾರಣ ಕಬ್ಬಿಗೆ ಹೆಚ್ಚಿನ ದರ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಮುಖಂಡರಾದ ಯರಗನಹಳ್ಳಿ ರಾಮಕೃಷ್ಣಯ್ಯ, ಆರ್.ಎಸ್. ಸೀತಾರಾಮ, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಸೋಶಿ ಪ್ರಕಾಶ್, ವಳೆಗೆರೆಹಳ್ಳಿ ಶ್ರೀನಿವಾಸ್, ಕೋಣಸಾಲೆ ಲಿಂಗಯ್ಯ, ದೇವರಾಜು ಸೇರಿದಂತೆ ಹಲವು ಮುಖಂಡರು ಇದ್ದರು.

Share this article