ಮಾನವೀಯ ಮೌಲ್ಯ, ಗುರುಹಿರಿಯರಿಗೆ ಗೌರವ ನೀಡುವ ಶಿಕ್ಷಣ ಅಗತ್ಯ: ಅಶೋಕ ಪಟ್ಟಣ

KannadaprabhaNewsNetwork | Published : Jan 11, 2025 12:45 AM

ಸಾರಾಂಶ

ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಗುರು ಹಿರಿಯರಿಗೆ ಗೌರವ ನೀಡುವ ಶಿಕ್ಷಣ ಇಂದು ಅಗತ್ಯವಿದ್ದು, ಅವುಗಳತ್ತ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಗಮನಹರಿಸುವ ಅವಶ್ಯವಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಸಮಾಜದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಮತ್ತು ಗುರು ಹಿರಿಯರಿಗೆ ಗೌರವ ನೀಡುವ ಶಿಕ್ಷಣ ಇಂದು ಅಗತ್ಯವಿದ್ದು, ಅವುಗಳತ್ತ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಗಮನಹರಿಸುವ ಅವಶ್ಯವಿದೆ ಎಂದು ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಶುಕ್ರವಾರ ಪಟ್ಟಣದ ಬಸವೇಶ್ವರ ಶಾಲಾ ಆವರಣದಲ್ಲಿ ನಡೆದ ಬಿವಿವಿ ಸಂಭ್ರಮ ಅಂಗವಾಗಿ ನಡೆದ ರಾಮದುರ್ಗ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾಗಲಕೋಟೆಯ ಬಿವಿವಿ ಸಂಘ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದು, ಈ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ ವಿದ್ಯಾರ್ಥಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಂಸ್ಥೆಯ ಮತ್ತು ಪಾಲಕರ ಹೆಸರು ತರಬೇಕು ಎಂದು ತಿಳಿಸಿದರು.

ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಶಿಕ್ಷಣ ನೀಡುವ ಸಂಸ್ಥೆಯು ಕಲುಷಿತಗೊಂಡ ರಾಜಕಾರಣ ಸುಧಾರಣೆ ನಿಟ್ಟಿನಲ್ಲಿ ಯುವಕರಿಗೆ ಹಾಗೂ ರಾಜಕಾರಣಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವ ತರಬೇತಿ ಆರಂಭಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿಯ ವಿಸ್ತಾರ ಜಿಂದಗಿಯ ಮಹೇಶ ಮಾಸಾಳ ಮಾತನಾಡಿ, ಮನುಷ್ಯ ಬಡತನ, ಹಿಂದುಳಿದ ಜನಾಂಗ ಎಂದು ಪರಿಸ್ಥಿತಿಯ ಗುಲಾಮನಾಗದೆ ಮನಸ್ಥಿತಿ ಗಟ್ಟಿ ಮಾಡಿಕೊಂಡು ಸಂಕಷ್ಟದ ಪರಿಸ್ಥಿತಿ ಎದುರಿಸುವ, ಯಶಸ್ಸು ಸಾಧಿಸುವ ಛಲದಿಂದ ಪ್ರಯತ್ನ ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಶಿಕ್ಷಕರು ಜೀವಂತವಿರುವ ಸಂಕಷ್ಟದಲ್ಲಿಯೂ ಸಾಧನೆ ಮಾಡಿರುವ ವ್ಯಕ್ತಿಗಳ ಸ್ಫೂರ್ತಿದಾಯಕ ಕತೆ, ಜೀವನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳುವ ಮೂಲಕ ಸಾಧನೆ ಮಾಡುವಂತೆ ಪ್ರೇರೇಪಣೆ ನೀಡಬೇಕು ಎಂದ ಅವರು, ಜೀವನದಲ್ಲಿ ಮನುಷ್ಯನಿಗೆ ಕಣ್ಣೀರು, ಅವಮಾನ, ಸೋಲು ಮತ್ತು ಬಡತನ ವೈರಿಗಳಾಗಿದ್ದು, ಇವುಗಳನ್ನು ಸವಾಲಾಗಿ ಸ್ವೀಕರಿಸುವ ಮುಖಾಂತರ ಸಾಧನೆ ಮಾಡಬೇಕೆಂದರು.

ಸಾನ್ನಿಧ್ಯ ವಹಿಸಿದ್ದ ಶೇಗುಣಿಸಿಯ ವೀರಕ್ತಮಠದ ಡಾ.ಮಹಾಂತಪ್ರಭು ಸ್ವಾಮೀಜಿ ಮಾತನಾಡಿ, ಅಜ್ಞಾನ, ಅಂಜಿಕೆ, ಅವಮಾನ, ಆಲಸ್ಯ ಮತ್ತು ಅಹಂಕಾರ ಜೀವನದಲ್ಲಿ ಹಿಂದುಳಿಯಲು ಕಾರಣವಾಗಿದ್ದು, ಇವುಗಳನ್ನು ಮೆಟ್ಟಿನಿಂತು ವಿದ್ಯಾರ್ಜನೆ ಮಾಡಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದು ತಿಳಿಸಿದರು.

ಸಂಸ್ಥೆಯ ಗೌರವಕಾರ್ಯದರ್ಶಿ ಮಹೇಶ ಅಥಣಿ ಸ್ವಾಗತಿಸಿದರು. ಶಾಲಾ ಆಡಳಿತಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿ.ಎಸ್.ಕಟಗಿಹಳ್ಳಿಮಠ ಪರಿಚಯಿಸಿದರು. ಪದನಿಮಿತ್ತ ಕಾರ್ಯದರ್ಶಿ ಕೆ.ಎಚ್. ಹೊಸುರ ವಂದಿಸಿದರು. ಸುಮಂಗಲಾ ಕಳಸಪ್ಪನವರ ನಿರೂಪಿಸಿದರು.ಸಂಘ ಹೆಮ್ಮರವಾಗಿ ಬೆಳೆಯಲು ಗುರುವಿನ ಆಶೀರ್ವಾದ ಮತ್ತು ಹಿರಿಯರ ಶ್ರಮದಿಂದ ಹೆಮ್ಮರವಾಗಿ ಬೆಳೆದಿದೆ. ಇನ್ನಷ್ಟು ಬೆಳೆಯಲು ಎಲ್ಲರ ಸಹಕಾರ ಅಗತ್ಯ. ರಾಜಕೀಯ ಸುಧಾರಣೆಯಾಗುವ ನಿಟ್ಟಿನಲ್ಲಿ ಈ ರೀತಿಯ ಶಿಕ್ಷಣ ನೀಡಲು ತಜ್ಞರ ಸಲಹೆ ಪಡೆಯುತ್ತೇನೆ.

- ವೀರಣ್ಣ ಚರಂತಿಮಠ ಕಾರ್ಯಾಧ್ಯಕ್ಷ ಬಿವಿವಿ ಸಂಘ

Share this article