ಕನ್ನಡಪ್ರಭ ವಾರ್ತೆ ಹಾಸನ
ಮಹಾರಾಷ್ಟ್ರದ ಸಂಸ್ಕೃತ ವಿದ್ಯಾ ಸಾಹಿತ್ಯ ಪ್ರವೀಣರಾದ ವಿದ್ವಾನ್ ಶ್ರೀ ರಾಮಚಂದ್ರ ಶಾಸ್ತ್ರಿಗಳು ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಗುರು ತೋರಿದ ದಾರಿಯಲ್ಲಿ ನಮ್ಮ ಜೀವನವೆಂಬ ತೇರನ್ನು ನಡೆಸಿದರೆ ಯಾವುದೇ ವಿಘ್ನಗಳು ಎದುರಾಗಲಾರವು ಎಂಬುದನ್ನು ಯಾರು ಮರೆಯಬಾರದು, ಗುರುವಿನ ಸತ್ಸಂಗ ನಮ್ಮನ್ನು ಪರಮಾತ್ಮನೆಡೆಗೆ ಕರೆದೊಯ್ಯುತ್ತದೆ ಎಂದರು. ಗುರುವಿಗೆ, ಗುರುತ್ವಕ್ಕೆ ಇರುವ ಶಕ್ತಿಯನ್ನು ಯಾರು ಅಲಕ್ಷ್ಯ ಮಾಡಬಾರದು. ಮನಸ್ಸಿನಲ್ಲಿ ಗುರುವಿನ ಬಗೆಗೆ ಪೂಜ್ಯ ಭಾವನೆ ಮೂಡಿಸಿಕೊಂಡು, ಗುರು ತೋರುವ ಸನ್ಮಾರ್ಗದಲ್ಲಿ ನಡೆದು, ನಮ್ಮಲ್ಲಿ ಮೂಡುವ ಜ್ಞಾನವನ್ನು ಪಸರಿಸುವ ಕೆಲಸ ಮಾಡಿಕೊಂಡು ಹೋದಾಗ ಮಾತ್ರ ಈ ಬದುಕಿಗೆ ಅರ್ಥ ಸಿಗಲಿದೆ ಎಂದರು.
ಮನುಷ್ಯ ಯಾವುದರಿಂದ ತನ್ನ ಧಾರಣೆಯಾಗುತ್ತದೆ ಎಂಬುದನ್ನು ಅರಿಯಬೇಕು. ಸತ್ಯ, ದಾನ, ದಯಾ, ತಪಸ್ಸು ನಮ್ಮೊಳಗೆ ರೂಢಿಸಿಕೊಂಡು ಬಂದರೆ ಆತನಿಗೆ ಮೋಕ್ಷ ದೊರೆಯಲಿದೆ. ಆತ ಸಮಾಜ ಹಾಗೂ ಭಗವಂತನಿಗೆ ಹತ್ತಿರವಾಗಿ ಬದುಕಿ ಸಮಾಜದಲ್ಲಿ ಶಾಶ್ವತನಾಗಿ ಉಳಿಯುತ್ತಾನೆ ಎಂದರು.ಬಾಗಲಕೋಟೆಯ ಮಹಲಿಂಗಪುರದ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಪೂಜ್ಯ ಸದ್ಗುರು ಸಹಜಾನಂದ ಸ್ವಾಮಿಗಳು, ಶ್ರೀಮನ್ನಿಜಗುಣ ಶಿವಯೋಗಿಗಳಿಂದ ವಿರಚಿಸಲ್ಪಟ್ಟ ಕೈವಲ್ಯ ಪದ್ಧತಿ ನೀತಿ ಕ್ರಿಯಾಚರ್ಯ ಸ್ಥಲ ವಿಷಯವಾಗಿ ಉಪನ್ಯಾಸ ನೀಡಿ, ಧರ್ಮ ಮತ್ತು ಅಧ್ಯಾತ್ಮ ಸಂಸ್ಕಾರದ ಬಲದಿಂದ ಮಾನವ ಜನ್ಮದ ಸಫಲತೆ ಪಡೆದುಕೊಳ್ಳಬೇಕು. ಮನುಷ್ಯ ತನ್ನ ಜೊತೆಗೆ ಬರದೇ ಇರುವ ಕ್ಷಣಿಕ ಸುಖಗಳ ಹಿಂದೆ ಬೆನ್ನುಹತ್ತಿದ್ದಾನೆ. ಶಾಶ್ವತ ಸುಖ ನೀಡುವುದು ಸತ್ಸಂಗ ಮಾತ್ರ. ಉಳಿದಿದೆಲ್ಲವೂ ತೋರಿಕೆಗೆ ಮಾತ್ರ ಸುಖ ನೀಡುತ್ತವೆ. ಬಹುಜನ್ಮದ ಪ್ರತಿಫಲವಾಗಿ ಸತ್ಸಂಗ ಮತ್ತು ವಿವೇಕ ಸಿಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿಯ ಶಿವಪುತ್ರನಾಥ ಸ್ವಾಮೀಜಿ ,ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ತುಳಸಿಗೆರೆ ಮಠದ ಶ್ರೀ ರಮಾನಂದ ಸ್ವಾಮೀಜಿ, ಯೋಗಗುರು ರನ್ನ ಬೆಳಗಲಿಯ ಶ್ರೀ ಸದಾಶಿವ ಸ್ವಾಮೀಜಿ, ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಹುಣ್ಣಿಮೆ ಕಾರ್ಯಕ್ರಮದ ಸಂಚಾಲಕ ಎಚ್.ಬಿ ಮದನಗೌಡ, ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಮಂಜುನಾಥ್ ಕಾರ್ಯಕ್ರಮದ ನಿರೂಪಣೆ ನಡೆಸಿಕೊಟ್ಟರು. ಭಾಗ್ಯಲಕ್ಷ್ಮೀ ಪ್ರಾರ್ಥಿಸಿದರು. ಶ್ರೀ ಮಠದ ವ್ಯವಸ್ಥಾಪಕ ಚಂದ್ರಶೇಖರ್ ಸ್ವಾಗತಿಸಿದರು, ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದರ್ಶನ್ ವಂದಿಸಿದರು.