ನರಸಿಂಹಗಡ ತಪ್ಪಲಿನಲ್ಲಿ ಭವ್ಯ ದೇಗುಲ ನಿರ್ಮಾಣ ಕನಸು: ಹರೀಶ್ ಪೂಂಜ

KannadaprabhaNewsNetwork | Published : May 7, 2025 12:47 AM

ಸಾರಾಂಶ

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನರಸಿಂಹಗಡದ ತಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರ ವಠಾರದಲ್ಲಿ ಮೇ ೩ ಮತ್ತು ೪ ರಂದು ನಡ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ನರಸಿಂಹಗಡ(ಗಡಾಯಿಕಲ್ಲು)ದ ತಪ್ಪಲಿನಲ್ಲಿ ಮುಂದೆ ಉತ್ಖನನ ನಡೆಸುವ ಮೂಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವರ ಸಾನಿಧ್ಯ ಉಂಟಾಗಿ ಇಲ್ಲಿ ಭ್ಯವ್ಯ ದೇಗುಲದ ನಿರ್ಮಾಣ ಕನಸನ್ನು ಕಾಣೋಣ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.

ಜಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ನರಸಿಂಹಗಡದ ತಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂದಿರ ವಠಾರದಲ್ಲಿ ಮೇ ೩ ಮತ್ತು ೪ ರಂದು ನಡ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ವತಿಯಿಂದ ನಡೆದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನರಸಿಂಗಡದ ತಪ್ಪಲಿನಲ್ಲಿ ಪುರಾತನ ಸಾನಿಧ್ಯ ಇರುವ ಕುರಿತು ೨೦೧೮ರಲ್ಲಿ ನಂದಕುಮಾರ್ ತಂತ್ರಿಗಳು ಉಲ್ಲೇಖಿಸಿದ್ದರು. ಅವರ ಅಭಿಲಾಷೆಯಂತೆ ವಿಹಿಂಪ ಜತೆಗೂಡಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಸುವ ಮೂಲಕ ಪುಣ್ಯ ಕ್ಷಣಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಜಾತಿಯ ಹಿಂದೆ ಹೋಗದೇ ನಾವೆಲ್ಲ ಹಿಂದೂಗಳು ಎಂಬ ಭಾವನೆಯಡಿ ಒಟ್ಟಾಗಿ ದೇವಸ್ಥಾನ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಮಾತನಾಡಿದರು.

ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ, ಸುರ್ಯಗುತ್ತು ಡಾ.ಎಸ್.ಸತೀಶ್ಚಂದ್ರ ಮಾತನಾಡಿ, ಧಾರ್ಮಿಕ ಮತ್ತು ಸಾಮಾಜಿಕ ಸಮ್ಮಿಳಿತದ ಕಾರ್ಯಕ್ರಮವಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮೂಡಿಬಂದಿದೆ. ಈ ಕಾರ್ಯಕ್ರಮದ ಮೂಲಕ ನಾಡಿನ, ತಾಲೂಕಿನ ಜನರು ಪುನೀತರಾಗಿದ್ದಾರೆ ಎಂದರು.

ಮಂಗಳೂರು ಶ್ರೀ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಪ್ರಧಾನ ಭಾಷಣ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಹರೀಶ್ ಕುಮಾರ್, ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ., ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್, ಕಳೆಂಜ ನಂದಗೋಕುಲ ಗೋಶಾಲೆ ಅಧ್ಯಕ್ಷ ಡಾ.ಎಂ.ಎಂ.ದಯಾಕರ್, ಹಿರಿಯ ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಮಾಜಿ ಜಿ.ಪಂ. ಉಪಾಧ್ಯಕ್ಷೆ ರಾಜಶ್ರೀ ಹೆಗ್ಡೆ, ನೇಮಿರಾಜ ಆರಿಗ, ಸಮಿತಿ ಪ್ರ. ಕಾರ್ಯದರ್ಶಿ ಕರುಣಾಕರ ಗೌಡ, ಕೋಶಾಧಿಕಾರಿ ಪುರುಷೋತ್ತಮ ಶೆಣೈ, ಚೆನ್ನಕೇಶವ ಗೌಡ, ಪ್ರಧಾನ ಸಂಚಾಲಕ ನವೀನ್ ನೆರಿಯ ಸಹಿತ ಪ್ರಮುಖರು ಇದ್ದರು.

ಶನಿವಾರ ಸಂಜೆ ೪.೩೦ ಕ್ಕೆ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ದೇವರ ಮೆರವಣಿಗೆಗೆ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ ತಂತ್ರಿಗಳು ಚಾಲನೆ ನೀಡಿದರು. ಬಳಿಕ ತಾಲೂಕಿನ ವಿವಿಧ ಭಜನಾ ತಂಡಗಳ ಮೂಲಕ ಭಜನಾ ಮೆರವಣಿಗೆ ನಡೆಯಿತು. ಮೇ ೪ ರಂದು ಬೆಳಗ್ಗೆ ೬ ಕ್ಕೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ೮.೩೦ ರಿಂದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಮೇ ೪ ರಂದು ಸಂಜೆ ೩.೩೦ ಕ್ಕೆ ನಡ ಪೇಟೆಯಿಂದ ವೈಭವೋಪೇತ ಶೋಭಾಯಾತ್ರೆ ನಡೆಯಿತು.

ಭಾನುವಾರ ರಾತ್ರಿ ೮ ಗಂಟೆಗೆ ಆರಂಭವಾದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ವೈದಿಕ ಕ್ರಮಗಳು ಸತತ ೪ ತಾಸುಗಳ ಕಾಲ ನೆರವೇರಿತು.

Share this article