ಕುಡಿಯುವ ನೀರು ಅಭಾವ ಸಾಧ್ಯತೆ: ತಾಲೂಕು ಮಟ್ಟದ ಅಧಿಕಾರಿಗಳ ಸಭೆ

KannadaprabhaNewsNetwork | Published : May 7, 2025 12:47 AM

ಕುಡಿಯುವ ನೀರು ಒದಗಿಸುವ ವಿಚಾರದಲ್ಲಿ ಯಾವುದೇ ತೊಡಕಾಗದಂತೆ ಎಚ್ಚರ ವಹಿಸಿ ಎಂದು ನಗರಾಭಿವೃದ್ಧಿ ಜಂಟಿ ಕಾರ್ಯದರ್ಶಿ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಪುತ್ತೂರು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ತಲೆದೋರುವ ಸಾಧ್ಯತೆಗಳಿದ್ದು, ಇದಕ್ಕೆ ಪೂರ್ವ ತಯಾರಿ ಅತೀ ಅಗತ್ಯ. ಜನತೆಯಿಂದ ಕುಡಿಯುವ ನೀರಿಗೆ ತೊಂದರೆ ಎಂಬ ದೂರು ಬರದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಒದಗಿಸುವ ವಿಚಾರದಲ್ಲಿ ಯಾವುದೇ ತೊಡಕಾಗದಂತೆ ಎಚ್ಚರ ವಹಿಸಿ ಎಂದು ನಗರಾಭಿವೃದ್ಧಿ ಜಂಟಿ ಕಾರ್ಯದರ್ಶಿ ಹಾಗೂ ಪುತ್ತೂರು ತಾಲೂಕು ನೋಡೆಲ್ ಅಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಹೇಳಿದ್ದಾರೆ.ಕುಡಿಯುವ ನೀರಿನ ವಿಚಾರಕ್ಕೆ ಸಂಬಂಧಿಸಿ ಮಂಗಳವಾರ ಪುತ್ತೂರಿನ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಆಸ್ಪತ್ರೆಗಳು, ಹಾಸ್ಟೆಲ್ಸ್, ನಗರಸಭೆ ವ್ಯಾಪ್ತಿ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವ ಮೇಲ್ವಿಚಾರಣೆಗಾಗಿ ತಾಲೂಕುಮಟ್ಟದಲ್ಲಿ ತಂಡ ರಚನೆ ಮಾಡಬೇಕು ಎಂದು ಸೂಚಿಸಿದ ಅವರು ಗುಣಮಟ್ಟದ ನೀರು ಒದಗಿಸುವಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಎಲ್ಲಾ ಇಲಾಖೆಗಳೂ ಇದರಲ್ಲಿ ಸಮಾನ ಜವಾಬ್ದಾರಿ ವಹಿಸಬೇಕು. ಕಂದಾಯ ಇಲಾಖೆಗೆ ಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.ಕುಡಿಯುವ ನೀರು ಒದಗಿಸಲು ಸಾಕಷ್ಟು ಮೂಲಗಳಿವೆ. ಕೆರೆ, ಬಾವಿ, ಕೊಳವೆಬಾವಿ, ಕಿಂಡಿಅಣೆಕಟ್ಟುಗಳಿಂದ ನೀರನ್ನು ಒದಗಿಸುವ ಕೆಲಸ ಪ್ರಸ್ತುತ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಬೇರೆ ಪರಿಹಾರ ದಾರಿಗಳು ಇಲ್ಲದಾಗ ಮಾತ್ರ ಟ್ಯಾಂಕರ್ ನಲ್ಲಿ ನೀರು ಒದಗಿಸುವುದಕ್ಕೆ ಆದ್ಯತೆ ನೀಡಬೇಕು. ಮೊದಲಿಗೇ ಟ್ಯಾಂಕರ್ ವ್ಯವಸ್ಥೆಯತ್ತ ಹೋಗೋದು ಬೇಡ. ಟ್ಯಾಂಕರ್‌ನಲ್ಲಿ ನೀರು ಪೂರೈಕೆಗೆ ಕೆಲವೊಂದು ನಿಯಮಗಳಿವೆ. ಹಾಗಂತ ಆ ನಿಯಮದ ನೆಪ ಹೇಳಿ ನೀರು ಒದಗಿಸುವಲ್ಲಿ ವಿಳಂಬ ಮಾಡಬೇಡಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸರ್ಕಾರ ಹೊಸ ಬೋರ್‌ವೆಲ್ ಕೊರೆಯಲು ನಿರ್ಬಂಧ ಹಾಕಿದೆ. ಹಾಗಾಗಿ ಕೊಳವೆಬಾವಿಗಳು ಕುಡಿಯುವ ನೀರು ಪೂರೈಕೆಯ ಕೊನೆಯ ಅಸ್ತ್ರವಾಗಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ರಸ್ತೆಬದಿಯಲ್ಲಿ ಪೈಪ್ ಲೈನ್ ಅಳವಡಿಕೆ ಮಾಡಿರುವ ಭಾಗಗಳಲ್ಲಿ ಖುದ್ದಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಲ್ಲಿ ಮಣ್ಣು ಕುಸಿತ ಉಂಟಾಗಿದ್ದರೆ ಅದನ್ನು ಸರಿಪಡಿಸಬೇಕು. ಈ ಬಗ್ಗೆ ವಾರದೊಳಗೆ ನನಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.ತಹಸೀಲ್ದಾರ್ ಪುರಂದರ ಹೆಗ್ಡೆ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಇದ್ದರು.