ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಶೀರ್ಷಿಕೆಯಡಿ ಮಾವು ಮೇಳವನ್ನು ಮೇ 16ರಿಂದ 18ರವರೆಗೆ ನಗರದ ಕದ್ರಿ ಉದ್ಯಾನವನದಲ್ಲಿ ಆಯೋಜಿಸಲಾಗಿದೆ. ಮೇಳದಲ್ಲಿ ಭಾಗವಹಿಸಲು ಮಾವು ಬೆಳೆಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ 20ರಿಂದ 25 ಮಾವು ಬೆಳೆಗಾರರಿಗೆ ಮಾವು ಹಣ್ಣು ಹಾಗೂ ಸಂಬಂಧಿತ ಉತ್ಪನ್ನಗಳನ್ನು ಮಾರಾಟ ಮಾಡಲು ಕೆಳಕಂಡ ಷರತ್ತು ಹಾಗೂ ನಿಬಂಧನೆಗಳನೊಳಪಟ್ಟಂತೆ ಅವಕಾಶ ಕಲ್ಪಿಸಲಾಗುವುದು.ಮಾವು ಬೆಳೆ ಉತ್ಪಾದಿಸುವ ಪ್ರದೇಶದ ಆರ್.ಟಿ.ಸಿ ಒದಗಿಸಬೇಕು. ಸಂಬಂಧಪಟ್ಟ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಶಕರಿಂದ ರೈತರು ಮಾವು ಬೆಳೆಗಾರರಾಗಿದ್ದು, ನೈಸರ್ಗಿಕ ಹಣ್ಣು ಮಾಡುತ್ತಿರುವ ಬಗ್ಗೆ ಧೃಢೀಕರಣ ಪಡೆದು ಅರ್ಜಿ ಫಾರಂ ಜತೆ ಕಡ್ಡಾಯವಾಗಿ ಲಗತ್ತಿಸಬೇಕು. ಇಲ್ಲವಾದರೆ ಪರಿಗಣಿಸಲಾಗುವುದಿಲ್ಲ. ಸ್ವತಃ ಜಮೀನು ಹೊಂದಿದ್ದು, ಮಾವು ಬೆಳೆ ಮಾಡಿದರೆ ಆದ್ಯತೆ ನೀಡಲಾಗುತ್ತದೆ. ನೈಸರ್ಗಿಕ ಹಣ್ಣು ಮಾಡಲಾದ ಮಾವು ಹಣ್ಣುಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡಲಾಗುತ್ತದೆ.ರೈತರು ಮತ್ತು ಅಧಿಕಾರಿಗಳ ಸಮಿತಿ ಸಭೆಯಲ್ಲಿ ನಿಗದಿಪಡಿಸಿದ ಮಾರಾಟ ದರದಂತೆ ಮಾರಾಟ ಮಾಡಲು ಬದ್ಧರಿರಬೇಕು. ಸಂಬಂಧಪಟ್ಟ ಇಲಾಖೆಯಿಂದ ದೃಢೀಕರಣಗೊಂಡ ತೂಕ ಮತ್ತು ಅಳತೆ ಯಂತ್ರಗಳನ್ನು ಮಾರಾಟದ ಸಮಯದಲ್ಲಿ ಬಳಸಲು ಅವಕಾಶ ಕಲ್ಪಿಸಲಾಗುತ್ತದೆ. ಸ್ಥಳೀಯ ಮಾರಾಟದಾರರಿಗೆ ಅವಕಾಶ ಕಲ್ಪಿಸಲಾಗುತ್ತದೆ.ಮೇ 5ರಿಂದ 9ರವರೆಗೆ ಅರ್ಜಿ ಫಾರಂ ಪಡೆಯಬೇಕು. ಅರ್ಜಿ ಸಲ್ಲಿಸಲು ಮೇ 12ರ ಮಧ್ಯಾಹ್ನ 3 ಗಂಟೆಗೆ ಕೊನೆಯ ದಿನ. ಸಂಪರ್ಕಿಸಬೇಕಾದ ಸಂಖ್ಯೆ: 0824-2423628, 0824-2444298.ಮೇ 13ರಂದು ರೈತರ ಮತ್ತು ಅಧಿಕಾರಿಗಳ ಸಭೆ ನಡೆಸಿ ಮಾರಾಟ ದರ ನಿಗದಿಪಡಿಸುವ ಬಗ್ಗೆ ಚರ್ಚಿಸಿ ದರ ನಿಗದಿಪಡಿಸಲಾಗುವುದು ಹಾಗೂ ನಿಗದಿಪಡಿಸಲಾದ ದರಕ್ಕೆ ಅನುಗುಣವಾಗಿ ಮಾರಾಟ ಮಾಡಲು ಆಯ್ಕೆಯಾದ ರೈತರು ಬದ್ಧರಿರಬೇಕು. ರೈತರು ಸ್ವವಿವರಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ (ಇ-ಮೇಲ್: sadhssdk@yahoo.in) ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.