ಗದಗ: ರವಿ ಗುಂಜೀಕರ್ ಸಾರ್ಥ ಸೇವೆ ಎಲ್ಲಾ ಸರ್ಕಾರಿ ನೌಕರರಿಗೂ ಮಾದರಿಯಾಗಿದ್ದು, ಅವರ ಸೇವಾ ನಿವೃತ್ತಿ ಸಮಾರಂಭಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನ ಸೇರಿರುವುದು, ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಮಾದರಿಯಾಗಿದೆ ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಮಂಗಳವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ರವಿ ಗುಂಜೀಕರ್ ಅಭಿಮಾನಿ ಬಳಗ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ವಿವಿಧ ಇಲಾಖೆಗಳ ವೃಂದ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಸಾರ್ಥಕ ರವಿ ಸಂವತ್ಸರ, ಡಾ. ರವಿ ಗುಂಜೀಕರ್ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಗುಂಜೀಕರ್ ಸರಕಾರಿ ಸೇವೆಯಲ್ಲಿದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ನೊಂದವರ ಪರವಾಗಿ ಧ್ವನಿ ಎತ್ತಿದ್ದಾರೆ. ಸರಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಸರಕಾರಿ ನೌಕರರ ಸಂಘ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿ ಕೆಲಸ ಮಾಡಿರುವುದರಲ್ಲಿ ಗುಂಜೀಕರ್ ಪಾತ್ರ ಅಪಾರವಾಗಿದೆ. ಅವರ ನಿವೃತ್ತಿ ಜೀವನ ಸಮಾಧಾನದಿಂದ ಕೂಡಿರಲಿ. ನಿವೃತ್ತಿ ನಂತರವೂ ಸಮಾಜದ ಸೇವೆ ಮಾಡಲಿ ಎಂದರು.
ವಿಪ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ಗುಂಜೀಕರ್ ತಮ್ಮ ನಾಯಕತ್ವ ಗುಣದಿಂದ ಗಮನ ಸೆಳೆದವರು. ತಮ್ಮ ಸೇವಾ ನಿವೃತ್ತಿಯನ್ನು ಸಮಾಜಮುಖಿ ಆಗಿರಬೇಕು ಎನ್ನುವ ಕಾರಣಕ್ಕೆ ವನಮಹೋತ್ಸವ, ರಕ್ತದಾನ ಶಿಬಿರ, ತಾವು ಕಲಿತ ಶಾಲೆಯನ್ನು ದತ್ತು ತೆಗೆದುಕೊಂಡಿರುವುದು, ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಗುಂಜೀಕರ್ ಒಬ್ಬ ಸಮರ್ಥ ನಾಯಕರಾಗಿ, ತಮ್ಮ ಮುಂದಿನ ನಾಯಕತ್ವವನ್ನು ಅಷ್ಟೆ ಸಮರ್ಥರಾದ ಡಾ. ಬಸವರಾಜ ಬಳ್ಳಾರಿ ಅವರಿಗೆ ವಹಿಸಿದ್ದಾರೆ ಎಂದರು.ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಮಾತನಾಡಿ, ಗುಂಜೀಕರ್ ಅವರು 1988ರಿಂದ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿಯಾಗಿ, ಸಂಘಟನಾ ಕಾರ್ಯದರ್ಶಿ, ಉಪಾಧ್ಯಕ್ಷ, ಹಿರಿಯ ಉಪಾಧ್ಯಕ್ಷ ಮತ್ತು ಸತತ ಮೂರು ಬಾರಿ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸರಕಾರಿ ನೌಕರರ ಹಿತರಕ್ಷಣೆ ಕೆಲಸ ಮಾಡಿದ್ದಾರೆ. ವೃತ್ತಿ, ಸಂಘಟನೆ ಮತ್ತು ಸಮುದಾಯದ ಜವಾಬ್ದಾರಿಯನ್ನು ಗುಂಜೀಕರ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ಥಕ ರವಿ ಸಂವತ್ಸರ ಕಾರ್ಯಕ್ರಮ ಆಯೋಜಿಸಿರುವುದು ಸೂಕ್ತವಾಗಿದೆ. ಸೇವಾ ನಿವೃತ್ತಿ ನಂತರವೂ ತಮ್ಮ ಸೇವೆಯನ್ನು ಮುಂದುವರಿಸಲಿ ಎಂದರು.
ಮುಖ್ಯಮಂತ್ರಿಗಳ ಪದಕ ಪಡೆದ ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 60 ಜನ ಸಾಧಕರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ಐ.ಕೆ. ಕಮ್ಮಾರ ಸಂಪಾದಿಸಿದ ನೌಕರರ ನಾವಿಕ, ಅಭಿನಂದನಾ ಗ್ರಂಥವನ್ನು ಸಿ.ಎಸ್. ಷಡಕ್ಷರಿ ಬಿಡುಗಡೆಗೊಳಿಸಿದರು. ಗುಂಜೀಕರ್ ಅವರ ಜೀವನ ಸಾಧನೆ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಜ. ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ನಂದಿವೇರಿ ಮಠದ ಶಿವಕುಮಾರ ಮಹಾಸ್ವಾಮಿಗಳು, ಫಕೀರೇಶ್ವರ ಶಿವಾಚಾರ್ಯರು, ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೋಣ ಶಾಸಕ ಜಿ.ಎಸ್. ಪಾಟೀಲ, ನರಗುಂದ ಶಾಸಕ ಸಿ.ಸಿ. ಪಾಟೀಲ, ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಡಿ.ಆರ್ . ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ಸಾಹಿತಿ ಐ.ಕೆ. ಕಮ್ಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರುಡಗಿ, ನೌಕರರ ಸಂಘದ ಪದಾಧಿಕಾರಿ ಗಿರಿಗೌಡ ಎಚ್., ಬಸವರಾಜು, ಮಲ್ಲಿಕಾರ್ಜುನ ಬಳ್ಳಾರಿ, ಸಿದ್ದನಗೌಡ ಪಾಟೀಲ, ಮರಿಗೌಡ ಸುರಕೋಡ ಉಪಸ್ಥಿತರಿದ್ದರು. ಸರಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಸ್ವಾಗತಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು. ಅಭಿಮಾನಿ ಬಳಗದ ಅರುಣಕುಮಾರ ಚವ್ಹಾಣ ಇತರರು ಉಪಸ್ಥಿತರಿದ್ದರು.
ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಡಾ. ರವಿ ಗುಂಜೀಕರ್ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಜಿಲ್ಲಾ ಭೋವಿ ವಡ್ಡರ್ ಸಮಾಜದ ಸದಸ್ಯರು ಗುಂಜೀಕರ್ ದಂಪತಿಗೆ ಬೆಳ್ಳಿ ಗದೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.