ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸ್ವಾಭಿಮಾನದ ಸಂಕೇತ: ಡಾ. ಕಾಂತೇಶರೆಡ್ಡಿ ಗೋಡಿಹಾಳ

KannadaprabhaNewsNetwork | Published : May 7, 2025 12:47 AM

ಸಾರಾಂಶ

ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಂದ 1915ರ ಮೇ 5ರಂದು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜತೆಗೆ ವಿದ್ಯಾರ್ಥಿಗಳಿಗಾಗಿ ಎಂಫಿಲ್ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ಪರಿಚಯಿಸಿ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ.

ರಾಣಿಬೆನ್ನೂರು: ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿ ಹಾಗೂ ಕನ್ನಡ ಮನಸುಗಳ ನಾಡಿಮಿಡಿತವಾಗಿ ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಆಚೆಗೂ ತನ್ನ ಕಂಪನ್ನು ಪಸರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರೆಡ್ಡಿ ಗೋಡಿಹಾಳ ತಿಳಿಸಿದರು.ನಗರದ ಮೆಡ್ಲೇರಿ ರಸ್ತೆಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಸೂರಿನ ರಾಜ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಂದ 1915ರ ಮೇ 5ರಂದು ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜತೆಗೆ ವಿದ್ಯಾರ್ಥಿಗಳಿಗಾಗಿ ಎಂಫಿಲ್ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ಪರಿಚಯಿಸಿ ಸಂಶೋಧನೆ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಉಪನ್ಯಾಸಕ ಡಾ. ಕಾಂತೇಶ ಅಂಬಿಗೇರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾದಾಗಿನಿಂದ ಇಂದಿನವರೆಗೆ ಸುಮಾರು 26 ಜನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು, ಮೊದಲು ಅವಿರೋಧವಾಗಿ ಅಧ್ಯಕ್ಷರ ಆಯ್ಕೆಯಾಗುತ್ತಿತ್ತು. 1940ರಲ್ಲಿ ಚುನಾವಣೆ ಪ್ರಕ್ರಿಯೆ ಮೂಲಕ ಅಧ್ಯಕ್ಷರ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಹಾಲಿ ಅಧ್ಯಕ್ಷ ಮಹೇಶ ಜೋಶಿ ಅವರು ಒಂದು ಕೋಟಿಗೂ ಅಧಿಕ ಸದಸ್ಯರನ್ನು ಮಾಡುವ ಇಚ್ಛಾಶಕ್ತಿಯನ್ನು ಹೊಂದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮನೆ, ಮನೆ ಮಾತಾಗಬೇಕು ಎಂದರು. ವರ್ತಕ ಜಿ.ಜಿ. ಹೊಟ್ಟಿಗೌಡರ ಮಾತನಾಡಿ, ಈ ಬಾರಿಯ ಸಾಹಿತ್ಯ ಸಮ್ಮೇಳನವು ಬಳ್ಳಾರಿಯಲಿ ಜೂನ್ ತಿಂಗಳಲ್ಲಿ ನಡೆಯಲಿದ್ದು, ವಿಸ್ತೃತವಾದ ಚರ್ಚೆಯನ್ನು ನಡೆಸಲು ಎಲ್ಲ ಕನ್ನಡ ಮನಸ್ಸುಗಳು ಅಲ್ಲಿಗೆ ಆಗಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಮಾತನಾಡಿ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಸಾಹಿತ್ಯ ಅಭಿರುಚಿಯನ್ನು ಹೊಂದಿರುವುದು ಮನುಷ್ಯನಿಗೆ ಚೈತನ್ಯವನ್ನು ನೀಡುವ ಕೆಲಸವಾಗಿದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಆಸಕ್ತರು ಇರುವುದು ಸಂತಸದ ವಿಚಾರ ಎಂದರು.ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ. ಕೆ.ಎಚ್. ಮುಕ್ಕಣ್ಣನವರ ಚಂದ್ರಶೇಖರ್ ಮಡಿವಾಳರ, ಎಚ್.ಎಚ್. ಜಾಡರ, ಗಾಯತ್ರಮ್ಮ ಕುರುವತ್ತೆರ, ಜಗದೀಶ ಮಳೆಮಠ, ಎಚ್.ಎಸ್. ಮುದಿಗೌಡ್ರ ಹಾಗೂ ಅನೇಕ ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು.ಹಂದಿಗನೂರು ಪ್ರೌಢಶಾಲೆ ಉತ್ತಮ ಸಾಧನೆ

ಹಾವೇರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನ ಹಂದಿಗನೂರು ಗ್ರಾಮದ ಎಸ್‌ಎಸ್‌ಬಿಎಂ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದು, ಶೇ. 78.12ರಷ್ಟು ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಾಗೇಶ ದಂಡಪ್ಪನವರ ಶೇ. 92.32 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಭರತ್ ಹರಪನಹಳ್ಳಿ ಶೇ. 88.64ರಷ್ಟು ಅಂಕ ಗಳಿಸಿ ದ್ವಿತೀಯ ಸ್ಥಾನ, ಸಂಗೀತ ಅಂಗಡಿ ಶೇ. 86.4ರಷ್ಟು ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಸ್ವಾತಿ ಅಂಗಡಿ ಶೇ. 85.6, ಪ್ರಿಯಾ ಹನುಮನಹಳ್ಳಿ ಶೇ. 85.28, ಕರಿಬಸಪ್ಪ ಹಾವಿನಾಳ್ ಶೇ. 82.72, ನಿರ್ಮಲ ಜಾಡರ್ ಶೇ. 81.12ರಷ್ಟು ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗ ಅಭಿನಂದಿಸಿದೆ.

Share this article