ಮಕ್ಕಳನ್ನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾಖಲಿಸಿ

KannadaprabhaNewsNetwork | Published : May 7, 2025 12:46 AM

ಸಾರಾಂಶ

ಸರ್ಕಾರಿ ಕಾಲೇಜುಗಳು ಉತ್ತಮ ಸಂಪನ್ಮೂಲಗಳನ್ನು ಹೊಂದುತ್ತಿದ್ದರೂ ಇತ್ತೀಚಿಗೆ ಹಲವಾರು ಖಾಸಗಿ ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತಿ ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸುತ್ತಿರುವುದರಿಂದ ಸರ್ಕಾರಿ ಶಾಲಾ, ಕಾಲೇಜುಗಳು ಮುಚ್ಚುವ ಹಂತ ತಲುಪುತ್ತಿವೆ ಎಂದು ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರಿ ಕಾಲೇಜುಗಳು ಉತ್ತಮ ಸಂಪನ್ಮೂಲಗಳನ್ನು ಹೊಂದುತ್ತಿದ್ದರೂ ಇತ್ತೀಚಿಗೆ ಹಲವಾರು ಖಾಸಗಿ ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತಿ ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸುತ್ತಿರುವುದರಿಂದ ಸರ್ಕಾರಿ ಶಾಲಾ, ಕಾಲೇಜುಗಳು ಮುಚ್ಚುವ ಹಂತ ತಲುಪುತ್ತಿವೆ ಎಂದು ನಿವೃತ್ತ ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಿ ಮಾತನಾಡಿದ ಅವರು, ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದಷ್ಟಕ್ಕೆ ತೃಪ್ತರಾಗದೆ ಮುಂದಿನ ಹಂತಗಳಲ್ಲಿ ಯಶಸ್ವಿಯಾಗಬೇಕಾದರೆ ಮತ್ತಷ್ಟು ಶ್ರಮವಹಿಸಿ ಗುರಿ ತಲುಪಬೇಕು. ಖಾಸಗಿ ಶಾಲೆಗಳ ಹಾವಳಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪೋಷಕರ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಸರ್ಕಾರಿ ಶಾಲಾ-ಕಾಲೇಜುಗಳಲ್ಲಿಯೂ ಉತ್ತಮ ಮೂಲಭೂತ ಸೌಲಭ್ಯ ಸೇರಿದಂತೆ ನುರಿತ, ಅನುಭವಿ ಉಪನ್ಯಾಸಕ ವರ್ಗದವರಿದ್ದಾರೆ. ನಮ್ಮ ಬಾಲಕರ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಬೋಧಕ ಸಿಬ್ಬಂದಿ, ಮೂಲಭೂತ ಸೌಕರ್ಯಗಳನ್ನು ಹೊಂದಿದ್ದು, ಉತ್ತಮ ಫಲಿತಾಂಶಕ್ಕೆ ಪ್ರಸಿದ್ಧಿಯಾಗಿದ್ದು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ದಾಖಲಿಸುವಂತೆ ಮನವಿ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಟಿ. ಶಾರದಮ್ಮ ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚು ಅಂಕ ಪಡೆದರಷ್ಟೇ ಸಾಲದು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ. ತಂದೆ, ತಾಯಿ, ಗುರುಗಳು ಸಮಾಜದೊಂದಿಗೆ ಗೌರವಯುತವಾಗಿ ನಡೆದುಕೊಂಡು ಉತ್ತಮ ನಾಗರೀಕರಾಗಿ ಬೆಳೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಎಂ.ಡಿ. ಶಿವಕುಮಾರ್ ಮಾತನಾಡಿ, ನಮ್ಮ ಪಿಯು ಕಾಲೇಜು ರಾಜ್ಯಕ್ಕೇ ಮಾದರಿಯಾಗಿದ್ದು, ಎಲ್ಲ ಸೌಲಭ್ಯಗಳನ್ನು ಹೊಂದಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು. ಹಿಮಾಲಯದಷ್ಟು ಗುರಿ ಸಾಧನೆಗೆ ಇದು ಪ್ರಾರಂಭಿಕ ಹಂತ ಮಾತ್ರ. ಇಂತಹ ಸಾಧನೆಗೆ ಇಂದಿನ ದಾನಿಗಳು ಪ್ರೇರಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತಷ್ಟು ಸಾಧನೆ ಮಾಡಿ ಪೋಷಕರಿಗೆ ಹಾಗೂ ಕಾಲೇಜಿಗೆ ಕೀರ್ತಿ ತರುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕ್ಲಾತ್ ಸೆಂಟರ್‌ನ ಮಾಲೀಕರಾದ ಶಂಕರ್, ಉಪನ್ಯಾಸಕರಾದ ಡಾ. ಲೋಕೇಶ್, ಷಡಕ್ಷರಪ್ಪ ಮತ್ತಿತರರಿದ್ದರು.

Share this article