ಕಾರವಾರ: ಜಿಲ್ಲೆಯಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ನೀಡಲಾಗುವ ಅಡುಗೆ ಅನಿಲದ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗದ ರೀತಿಯಲ್ಲಿ ಹೆಚ್ಚಿನ ನಿಗಾ ವಹಿಸಿ, ವಾಣಿಜ್ಯ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳುವಂತೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾಣಿಜ್ಯ ಬಳಕೆಯ ಅನಿಲ ಸಿಲೆಂಡರ್‌ಗಳಿಗಿಂತ ಕಡಿಮೆ ದರದಲ್ಲಿ ಗೃಹ ಬಳಕೆಯ ಉದ್ದೇಶಕ್ಕೆ ಸಿಲೆಂಡರ್‌ಗಳನ್ನು ವಿತರಿಸಲಾಗುತ್ತಿದ್ದು, ಈ ಸಿಲೆಂಡರ್‌ಗಳು ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ನಿಗಾ ವಹಿಸಬೇಕು. ಜಿಲ್ಲೆಯ ಕೆಲವು ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದು, ಇಂತಹ ಪ್ರದೇಶಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮತ್ತು ಗ್ಯಾಸ್ ಏಜೆನ್ಸಿಗಳ ಅನಿಲ ವಿತರಣೆಯ ದಾಖಲೆ ಹಾಗೂ ವಾಣಿಜ್ಯ ಅನಿಲ ಬಳಕೆದಾರರ ಅನಿಲ ಬಳಕೆಯ ಮಾಹಿತಿ ದಾಖಲೆ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಪಡಿತರ ಚೀಟಗಳಿಗೆ ಇ ಕೆವೈಸಿ ಮಾಡುವ ಕಾರ್ಯದಲ್ಲಿ ಜಿಲ್ಲೆಯಲ್ಲಿ ಇದುವರೆಗೆ 98.02 ಪ್ರಗತಿ ಸಾಧಿಸಿದ್ದು, ಈ ಕಾರ್ಯದಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ ಅವರು, ಇದುವರೆಗೆ ಇ ಕೆವೈಸಿ ಮಾಡಿಸದೇ ಇರುವವರಿಗೆ ಅಂತಿಮ ದಿನಾಂಕ ನಿಗದಿಪಡಿಸಿ ನೊಟೀಸ್ ನೀಡುವಂತೆ ನಿರ್ದೇಶನ ನೀಡಿದರು.ಜಿಲ್ಲೆಯಲ್ಲಿನ ಒಟ್ಟು 410 ನ್ಯಾಯಬೆಲೆ ಅಂಗಡಿಗಳಲ್ಲಿ 402 ಅಂಗಡಿಗಳಿಗೆ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಿದ್ದು, ಬಾಕಿ ಇರುವ ಅಂಗಡಿಗಳಿಗೆ ಇಂಟರ್ನೆಟ್ ಸೌಲಭ್ಯದ ಕೊರತೆಯಿಂದ ಈ ಯಂತ್ರಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲದ ಬಗ್ಗೆ ಪರಿಶೀಲಿಸಿದ ಅವರು ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಈ ಪ್ರದೇಶಗಳಿಗೆ ಶೀಘ್ರದಲ್ಲಿ ಇಂಟರ್ನೆಟ್ ಸೌಲಭ್ಯ ಪಡೆದು (ಪಿಓಎಸ್) ಯಂತ್ರಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಸಂಪೂರ್ಣ ಪಾರದರ್ಶಕತೆ ಮೂಡಿಸಿ ಎಂದರು.
ಅನ್ನಭಾಗ್ಯ ಗ್ಯಾರಂಟಿ ಯೋಜನೆಯಡಿ ಪ್ರಸ್ತುತ ಪೂರ್ಣ ಪ್ರಮಾಣದಲ್ಲಿ ಅಕ್ಕಿ ವಿತರಿಸುತ್ತಿದ್ದು, ಪಡಿತರ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗದಂತೆ ಎಚ್ಚರ ವಹಿಸಬೇಕು, ಜಿಲ್ಲೆಯ ಗಡಿ ತಾಲೂಕುಗಳಲ್ಲಿ ಹೆಚ್ಚಿನ ತಪಾಸಣೆ ಕೈಗೊಳ್ಳಬೇಕು, ಕಾಳಸಂತೆಯಲ್ಲಿ ಮಾರಾಟ ಮಾಡುವುದು ಮತ್ತು ಅಕ್ರಮ ಸಾಗಾಟ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸಾರ್ವಜನಿಕ ವಿತರಣಾ ಪದ್ದತಿಯಡಿ ವಿತರಿಸುವ ಆಹಾರ ಧಾನ್ಯಗಳನ್ನು ಸಗಟು ಗೋದಾಮುಗಳಲ್ಲಿ ದಾಸ್ತಾನು ಮಾಡುವಾಗ ವೈಜ್ಞಾನಿಕವಾಗಿ ಮತ್ತು ಕ್ರಮಬದ್ದವಾಗಿ ಜೋಡಿಸಿರಬೇಕು, ಯಾವುದೇ ಕಾರಣಕ್ಕೂ ಆಹಾರ ಧಾನ್ಯಗಳು ಹಾಳಾಗದಂತೆ ಅತ್ಯಂತ ಎಚ್ಚರ ವಹಿಸಬೇಕು, ಈ ಬಗ್ಗೆ ಸಂಬಂಧಪಟ್ಟ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿಗಳು ಗೋದಾಮುಗಳಿಗೆ ಭೇಟಿ ನೀಡಿ ನಿರಂತರವಾಗಿ ಪರಿಶೀಲನೆ ನಡೆಸಬೇಕು, ಪರಿಶೀಲನಾ ವೇಳೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದರು.
ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಂಜುನಾಥ ರೇವಣ್ಕರ್ ಇತರರು ಇದ್ದರು.