ಫೇಲ್ ಆದವರಿಂದ ಪತ್ರ ವಿಶ್ಲೇಷಣೆ ಅಸಾಧ್ಯ: ಛಲವಾದಿ

KannadaprabhaNewsNetwork |  
Published : May 07, 2025, 12:47 AM IST
ಛಲವಾದಿ  | Kannada Prabha

ಸಾರಾಂಶ

‘ಪ್ರಿಯಾಂಕ್ ಖರ್ಗೆಯಂಥ ಫೇಲ್ ಆಗಿರುವ ಗಿರಾಕಿಗಳಿಗೆ ಅಂಬೇಡ್ಕರ್ ಪತ್ರಗಳ ವಿಶ್ಲೇಷಣೆ ಸಾಧ್ಯವಿಲ್ಲ. ಪಾಸ್‌ ಆದವರನ್ನು ಕರೆದು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಪ್ರಿಯಾಂಕ್ ಖರ್ಗೆಯಂಥ ಫೇಲ್ ಆಗಿರುವ ಗಿರಾಕಿಗಳಿಗೆ ಅಂಬೇಡ್ಕರ್ ಪತ್ರಗಳ ವಿಶ್ಲೇಷಣೆ ಸಾಧ್ಯವಿಲ್ಲ. ಪಾಸ್‌ ಆದವರನ್ನು ಕರೆದು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಅವರು ವಿಧಾನಸೌಧದ ಮೆಟ್ಟಿಲ ಮೇಲೆ ವೇದಿಕೆ ಸಿದ್ಧಗೊಳಿಸಲಿ. ಚುನಾವಣೆಯಲ್ಲಿ ಅಂಬೇಡ್ಕರ್‌ ಅವರನ್ನು ಸೋಲಿಸಿರುವವರು ಯಾರು ಎಂಬ ವಿಷಯದಲ್ಲಿ ಅವರೊಂದಿಗೆ ಸಂವಾದಕ್ಕೆ ಸಿದ್ಧನಿದ್ದೇನೆ ಎಂದೂ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಪುತ್ರ ಹೇಳಿದ್ದನ್ನು ಸಬೂಬಾಗಿ ಇಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಅಂಬೇಡ್ಕರ್‌ ವಿಚಾರ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌ನವರ ಬಳಿ ಇರುವ ಪತ್ರಗಳೇ ನನ್ನ ಬಳಿಯೂ ಇವೆ. ಈ ಪತ್ರಗಳನ್ನು ತೆಗೆದುಕೊಂಡೇ ನಾನು ಬರುವೆ. ಅವರಿಗೆ ಬೇಕಾದವರನ್ನೆಲ್ಲ ಕರಿಯಲಿ. ಬೇಕಾದರೆ, ಇಂಗ್ಲಿಷ್‌ ವಿದ್ವಾಂಸರನ್ನೂ ಕರೆಯಲಿ. ಇದನ್ನು ಸಾಬೀತುಪಡಿಸಿದರೆ ನಾನು ರಾಜೀನಾಮೆ ಕೊಡುತ್ತೇನೆ. ಇಲ್ಲವಾದರೆ ಆ ನಾಲ್ಕು ಜನ ರಾಜೀನಾಮೆ ಕೊಡಬೇಕು ಎಂದು ಪ್ರತಿಸವಾಲು ಹಾಕಿದರು.

ಪ್ರಿಯಾಂಕ್ ಖರ್ಗೆ ಮಾತು ಯಾರೂ ನಂಬುವುದಿಲ್ಲ, ಕೇಳುವುದೂ ಇಲ್ಲ. ಯಾಕೆಂದರೆ ಅದೊಂದು ಹಿಟ್ ಆ್ಯಂಡ್ ರನ್ ಕೇಸ್. ಅಂಬೇಡ್ಕರ್‌ ಸೋಲಿಗೆ ಸಾವರ್ಕರ್ ಕಾರಣ ಎಂಬ ಮುಖ್ಯಮಂತ್ರಿಗಳ ಮಾತಿಗೆ ಸವಾಲೆಸೆದೆ. ಅದೇನಾದರೂ ಸತ್ಯವಾದರೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ಇಲ್ಲವಾದರೆ, ಮುಖ್ಯಮಂತ್ರಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡುವರೇ ಎಂಬುದಾಗಿ ಕೇಳಿದ್ದೆ. ಸತ್ಯ ಗೊತ್ತಾಗಿ ಮುಖ್ಯಮಂತ್ರಿಗಳು ಬಾಯಿ ಮುಚ್ಚಿಕೊಂಡರು ಎಂದು ಕಿಡಿಕಾರಿದರು.

ಕಮಲ್ ಕಾಂತ್ ಅವರು ಅಂಬೇಡ್ಕರ್‌ ಅವರಿಗೆ 1952ರ ಜ.13ರಂದು ಪತ್ರ ಬರೆದಿದ್ದರು. ಐದು ದಿನಗಳ ಬಳಿಕ ಅಂಬೇಡ್ಕರ್‌ ಅವರು ಉತ್ತರ ಕೊಟ್ಟಿದ್ದರು. ಇದಕ್ಕೂ ಮೊದಲು ಸೋಲಿನ ಆಘಾತದಿಂದ ಅಂಬೇಡ್ಕರ್‌ ಆರೋಗ್ಯ ಹಾಳಾದುದನ್ನು ಡಾ.ಸವಿತಾ ಅಂಬೇಡ್ಕರ್‌ ಅವರು ಪತ್ರ ಮೂಲಕ ಕಮಲ್ ಕಾಂತ್ ಅವರಿಗೆ ತಿಳಿಸಿದ್ದರು. ಕಾಂಗ್ರೆಸ್ ಪ್ರಮುಖ ನಾಯಕ ಪಾಟೀಲ್, ಡಾಂಗೆ ಸೇರಿ ನನ್ನ ಸೋಲಿಸಿದ್ದಾರೆ ಎಂದು ಅಂಬೇಡ್ಕರ್‌ ಪತ್ರದಲ್ಲಿ ತಿಳಿಸಿದ್ದಾಗಿ ಓದಿ ಹೇಳಿದರು. ಸಾವರ್ಕರ್ ಸೋಲಿಸಿದ್ದೆಂದು ಪತ್ರದಲ್ಲಿ ಹೇಳಿಲ್ಲ ಎಂದು ಛಲವಾದಿ ಆಕ್ರೋಶ ವ್ಯಕ್ತಪಡಿಸಿದರು.

ಅವರ ಹೇಳಿಕೆಯನ್ನು ರುಜುವಾತುಪಡಿಸಿದರೆ ನಾನು ದುಡಿದ ಹಣದಲ್ಲಿ ಒಂದು ಲಕ್ಷದ ಒಂದು ರು. ಕೊಡುವುದಾಗಿ ಹೇಳಿದ್ದೇನೆ. ಆದರೆ, ಪ್ರಿಯಾಂಕ್ ಖರ್ಗೆ ಅವರು ನಾರಾಯಣಸ್ವಾಮಿ ಮಾತಿಗೆ ಬೆಲೆ ಇಲ್ಲ ಎಂದಿದ್ದಾರೆ. ಚುನಾವಣೆಯಲ್ಲಿ ಅಂಬೇಡ್ಕರ್‌ ಸೋಲಿಗೆ ಸಾವರ್ಕರ್ ಕಾರಣ ಎಂಬ ಮಾತನ್ನು ಕಾಂಗ್ರೆಸ್ಸಿಗರು ಹೇಳಿದ್ದರು. ಅದನ್ನು ಪ್ರಶ್ನಿಸಿದಾಗ ಉತ್ತರಿಸದೆ ಓಡಿ ಹೋದರು. ನಂತರ ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿಯೂ ಇದರ ಬಗ್ಗೆ ಸುಳ್ಳು ಹೇಳಲು ಪ್ರಾರಂಭಿಸಿದರು ಎಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ