ಉದ್ಯೋಗಕ್ಕಿಂತ ಕಂಪನಿ ಸ್ಥಾಪಿಸುವ ಕನಸಿರಲಿ: ಅರವಿಂದ್ ಕುಮಾರ್

KannadaprabhaNewsNetwork |  
Published : Mar 30, 2025, 03:05 AM IST
ಕಾರ್ಯಕ್ರಮದಲ್ಲಿ ವಿವಿಧ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. | Kannada Prabha

ಸಾರಾಂಶ

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಎಐಸಿಟಿಇ ಐಡಿಯಾ ಲ್ಯಾಬ್ ಸಹಯೋಗದೊಂದಿಗೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಇನ್ನೊವೇಶನ್ ಫೇರ್ʼ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಗ್ರಾಮೀಣ ಜನರ ಬದುಕಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ ಅವುಗಳ ನಿವಾರಣೆಗೆ ಹೊಸ ತಂತ್ರಜ್ಞಾನ ಆವಿಷ್ಕಾರ ಮಾಡಲು ಮುಂದಾಗಬೇಕು. ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಹಾಗೂ ಐಟಿಐ ವಿದ್ಯಾರ್ಥಿಗಳಿಗೆ ಕಂಪೆನಿಗಳಲ್ಲಿ ಕೆಲಸ ಮಾಡುವುದಕ್ಕಿಂತಲೂ ಮುಖ್ಯವಾಗಿ ತಮ್ಮದೇ ಆದ ಸ್ಟಾರ್ಟ್ ಅಪ್‌ಗಳನ್ನು ಅಭಿವೃದ್ಧಿಗೊಳಿಸಬೇಕೆಂಬ ಧ್ಯೇಯವಿರಬೇಕು ಎಂದು ಸೆಕ್ಷನ್ ಇನ್ಫಿನ್-8 ಫೌಂಡೇಶನ್ ಸಿಇಒ ಅರವಿಂದ್ ಕುಮಾರ್ ಹೇಳಿದ್ದಾರೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರವು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಎಐಸಿಟಿಇ ಐಡಿಯಾ ಲ್ಯಾಬ್ ಸಹಯೋಗದೊಂದಿಗೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಇನ್ನೊವೇಶನ್ ಫೇರ್ʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪುರುಸೋತ್ತಮ ಚಿಪ್ಪಾರ್ ಮಾತನಾಡಿ, ಕೈಗಾರಿಕೆ ಮತ್ತು ಸಂಶೋಧನಾ ಸಹಯೋಗಗಳು ಉತ್ತಮ ಯೋಜನಾ ಸಂಬಂಧಿ ಆಲೋಚನೆಗಳನ್ನು ಉಂಟುಮಾಡುತ್ತವೆ. ಇವತ್ತಿನ ಆಲೋಚನೆಗಳು ಮಂದಿನ ಯೋಜನೆಗಳನ್ನು ಕೈಗೊಳ್ಳಲು ಸಹಕಾರಿಯಾಗುತ್ತವೆ. ಈ

ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಗತ್ಯ ತರಬೇತಿ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ. ರಾವ್ ಮಾತನಾಡಿ, ಗತಕಾಲದ ಜೀವನ ಶೈಲಿ ಸಂಪೂರ್ಣವಾಗಿ ಬದಲಾವಣೆ ಹೊಂದಿದ್ದು, ದೇಶವು ಯುವ ಜನರ ಪ್ರತಿಭೆಯ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದೆ. ಇಂದಿನ ಗ್ರಾಮೀಣ ಭಾಗದ ಜನರ ಆಶೋತ್ತರಗಳನ್ನು ಮುಂದಿಟ್ಟು ಆಧುನಿಕ ತಂತ್ರಜ್ಞಾನ ಮತ್ತು ಉದ್ಯಮಗಳನ್ನು ಅಭಿವೃದ್ಧಿಗೊಳಿಸಬೇಕು ಎಂದರು.

ನಂತರ ನಡೆದ ವಿಷಯ ತಜ್ಞರ ಸಮಿತಿ ಚರ್ಚೆಯಲ್ಲಿ ಎಂಸ್ಎಂಇ ಜಂಟಿ ನಿರ್ದೇಶಕ ದೇವರಾಜ್ ಕೆ. ಅವರು ಸರ್ಕಾರದ ಯೋಜನೆಗಳು, ಆರ್ಥಿಕ ಅನುದಾನಗಳ ಬಗ್ಗೆ ವಿವರಿಸಿದರು. ಸಸ್ಯಾನಿಯ ವ್ಯವಸ್ಥಾಪಕ ನಿರ್ದೇಶಕಿ ಡಾ. ರಂಜನಿ ಚಿತ್ರಾಪುರ ಅವರು ಸ್ಟಾರ್ಟ್ ಅಪ್‌ಗಳ ಸ್ಥಾಪನೆ, ಮಾರ್ಕೆಟಿಂಗ್ ಬಗ್ಗೆ ಮಾಹಿತಿ ನೀಡಿದರು. ಡಾ. ಚಿಪ್ಪಾರ್ ಅವರು ಕಾಲೇಜುಗಳಲ್ಲಿ ಪ್ರಾಜೆಕ್ಟ್‌ಗಳ ಆಯ್ಕೆ, ಅವುಗಳನ್ನು ಕೈಗಾರಿಕೆಗೆ ಅನುವು ಮಾಡುವ ಬಗ್ಗೆ ಪ್ರಯತ್ನಗಳು, ಯಾವ ರೀತಿಯಲ್ಲಿ ಸಂಸ್ಥೆಗಳು ಇವುಗಳನ್ನು ಕಾರ್ಯಗತಗೊಳಿಸಬಹುದು ಎಂದು ತಮ್ಮ ಅನಿಸಿಕೆಗಳನ್ನು ಹೇಳಿದರು. ಡಾ. ವಿಜಯ್ ವಿ.ಎಸ್. ಸಮನ್ವಯಕಾರರಾಗಿದ್ದರು.

ಕಾರ್ಯಕ್ರಮದ ಅಂಗವಾಗಿ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಮಾದರಿಗಳ ಮತ್ತು ಪ್ರಾತ್ಯಕ್ಷಿಕೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಸಂಸ್ಥೆಗಳಿಗೆ ಮತ್ತು ಅತಿಥಿಗಳಿಗೆ ವಿಜ್ಞಾನ ಕೇಂದ್ರದ ವತಿಯಿಂದ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

ವೈಜ್ಞಾನಿಕಾಧಿಕಾರಿ ವಿಘ್ನೇಶ್ ಭಟ್ ಸ್ವಾಗತಿಸಿದರು. ಇನ್ನೊವೇಶನ್ ಹಬ್‌ನ ಮೆಂಟರ್ ಸಹನಾ ನಿರೂಪಿಸಿದರು. ಅಂಬಿಕಾ ವಂದಿಸಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ