ಅನುಮತಿ ಇಲ್ಲದೆ ಕೆರೆಯ ಹೂಳೆತ್ತುವ ಕಾಮಗಾರಿ

KannadaprabhaNewsNetwork |  
Published : Jan 22, 2024, 02:17 AM IST
21ಕೆಡಿಎಲ್1ಕೆರೆಯ ಹೂಳೆತ್ತಿ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿರುವುದು. | Kannada Prabha

ಸಾರಾಂಶ

ಹಲವು ದಿನಗಳಿಂದ 8ರಿಂದ 10 ಜೆಸಿಬಿ ಮೂಲಕ ಟ್ರ್ಯಾಕ್ಟರ್‌, ಲಾರಿಗಳಲ್ಲಿ ಕೆರೆಯಲ್ಲಿನ ಫಲವತ್ತಾದ ಮಣ್ಣು ಸಾಗಿಸಲಾಗುತ್ತಿದೆ.

ಕುಂದಗೋಳ: ಇಲ್ಲಿನ ರಟ್ಟಿಗೇರಿ ಸರ್ಕಾರಿ ಕೆರೆಯಲ್ಲಿ ಯಾವುದೇ ಅನುಮತಿ ಪಡೆಯದೇ ಕೆಲವರು ಹೂಳೆತ್ತುವ ಕಾರ್ಯ ನಡೆಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಹಲವು ದಿನಗಳಿಂದ 8ರಿಂದ 10 ಜೆಸಿಬಿ ಮೂಲಕ ಟ್ರ್ಯಾಕ್ಟರ್‌, ಲಾರಿಗಳಲ್ಲಿ ಕೆರೆಯಲ್ಲಿನ ಫಲವತ್ತಾದ ಮಣ್ಣು ಸಾಗಿಸಲಾಗುತ್ತಿದೆ. ಆದರೆ, ಇದ್ಯಾವುದಕ್ಕೂ ಗ್ರಾಮ ಪಂಚಾಯಿತಿಯಿಂದ ಪರವಾನಗಿ ಪಡೆದಿಲ್ಲ.

ರೈತರು ಕೆರೆಯಲ್ಲಿನ ಮಣ್ಣನ್ನು ಕೃಷಿ ಉದ್ದೇಶಕ್ಕಾಗಿ ತಮ್ಮ ಜಮೀನುಗಳಿಗೆ ಪಡೆದುಕೊಳ್ಳಬಹುದು. ಆದರೆ, ಸ್ಥಳೀಯ ಗ್ರಾಪಂ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆಯದೆ ಮಣ್ಣು ಸಾಗಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆರೆಯ ಮಣ್ಣನ್ನು ಮಾರಾಟ ಮಾಡಿ ಲಕ್ಷಾಂತರ ದುಡ್ಡು ಮಾಡಿಕೊಳ್ಳುತ್ತಿರುವ ಅನುಮಾನ ಮೂಡಿದೆ. ಈ ಕೆರೆಗಳ ಸಂರಕ್ಷಣೆ ಮಾಡಬೇಕಾದ ಜಿಲ್ಲಾ ಮಟ್ಟದ ಕೆರೆಗಳ ಸಂರಕ್ಷಣೆ-ಅಭಿವೃದ್ದಿ ಮತ್ತು ನಿರ್ವಹಣೆ ಸಮಿತಿ ಹಾಗೂ ತಾಲೂಕು ಆಡಳಿತ ಮತ್ತು ಗ್ರಾಮ ಪಂಚಾಯತಿಯ ದಿವ್ಯ ನಿರ್ಲಕ್ಷ್ಯ ವಹಿಸಿವೆ ಎಂಬ ಆರೋಪ ಕೇಳಿಬರುತ್ತಿದೆ.

ರಟ್ಟಿಗೇರಿ ಗ್ರಾಮದ ಕೆರೆಯ ಹೂಳೆತ್ತುವ ಕಾರ್ಯ ನಮಗೆ ಗಮನಕ್ಕಿಲ್ಲ. ಅವರು ನಮ್ಮ ಗ್ರಾಮ ಪಂಚಾಯಿತಿಯಿಂದ ಯಾವುದೇ ಪರವಾನಗಿ ತೆಗೆದುಕೊಂಡಿಲ್ಲ. ರಟ್ಟಿಗೇರಿ ಗ್ರಾಮದ ದೇವಸ್ಥಾನದ ಟ್ರಸ್ಟ್ ಕಮಿಟಿ ಹಾಗೂ ಖಾಸಗಿ ವ್ಯಕ್ತಿಗಳು ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಪಿಡಿಒ ಜಗದೀಶ್ ಹುಲ್ಲಾಳದ ಹೇಳಿದರು.

ಈ ಸರ್ಕಾರಿ ಕೆರೆಯಲ್ಲಿ ಮಣ್ಣು ತೆಗೆಯಬೇಕಾದರೆ ಕೆರೆಯ ಬಳಕೆದಾರರ ಸಂಘ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿಯವರ ಪರವಾನಗಿ ತೆಗೆದುಕೊಂಡು ಕೆಲಸ ನಿರ್ವಹಸಿಬೇಕು. ಆದರೆ, ಅಲ್ಲಿನ ಸ್ಥಳೀಯರು ಇದನ್ನು ಮಾಡಿಲ್ಲ. ರೈತರು ಅಲ್ಲಿನ ಫಲವತ್ತಾದ ಮಣ್ಣನ್ನು ಬಳಕೆ ಮಾಡಲು ಗ್ರಾಪಂಗೆ ಕರ ಪಾವತಿಸಿ ಹಾಗೂ ಪರವಾನಿಗೆ ತೆಗೆದುಕೊಂಡು ಮುಂದಿನ ಕೆಲಸ ನಿರ್ವಹಿಸಲು ಸಂಬಂಧ ಪಟ್ಟ ಗೌಡಗೇರಿ ಪಿಡಿಒಗೆ ತಿಳಿಸಿದ್ದೇನೆ ಎಂದು ತಾಪಂ ಇಒ ಜಗದೀಶ್ ಕಮ್ಮಾರ ಹೇಳಿದ್ದಾರೆ.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು