ಹಾಸನ : ದೇವಸ್ಥಾನದ ಪಾವಿತ್ರ್ಯತೆ, ಶಿಷ್ಟಾಚಾರ, ಸಂಸ್ಕೃತಿ ಕಾಪಾಡುವುದಕ್ಕಾಗಿ, ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಅಧಿವೇಶನದಲ್ಲಿ ರಾಜ್ಯದ ೫೦೦ಕ್ಕೂ ಅಧಿಕ ದೇವಸ್ಥಾನಗಳು ಮತ್ತು ಹಾಸನದ ೩೦ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಭಾರತೀಯ ಸಂಸ್ಕೃತಿಯ ಪ್ರಕಾರ ವಸ್ತ್ರ ಸಂಹಿತೆ ಜಾರಿಗೊಳಿಸುವ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕ ಹಾಗೂ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಚಂದ್ರ ಮೊಗವೀರ ಹೇಳಿದರು.
ಹಾಸನದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಆಯೋಜಿಸಲಾದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ‘ಪ್ರತಿ ದೇವಸ್ಥಾನಗಳ ಮುಂಭಾಗದಲ್ಲಿ ವಸ್ತ್ರ ಸಂಹಿತೆಯ ಫಲಕಗಳನ್ನು ಹಾಕಿ ಸೂಚನೆ ನೀಡಲಾಗುವುದು, ದೇವಸ್ಥಾನದ ಪಾವಿತ್ರ್ಯತೆಯ ರಕ್ಷಣೆ ಮತ್ತು ಭಾರತೀಯ ಸಂಸ್ಕೃತಿಯ ಪಾಲನೆಯಾಗುವ ಉದ್ದೇಶದಿಂದ ದೇವಸ್ಥಾನಕ್ಕೆ ಬರುವ ಭಕ್ತರು ತುಂಡು ಬಟ್ಟೆ ಧರಿಸುವ ಬದಲು, ಭಾರತೀಯ ಸಂಸ್ಕೃತಿಯ ಪಾಲನೆ ಮಾಡಬೇಕು’ ಎಂದು ಹೇಳಿದರು.
‘ಇಂದು ದೇಶದಲ್ಲಿನ ಅನೇಕ ದೇವಸ್ಥಾನಗಳು, ಗುರುದ್ವಾರ, ಚರ್ಚ್, ಮಸೀದಿ ಮತ್ತು ಇತರ ಪ್ರಾರ್ಥನಾ ಸ್ಥಳಗಳು, ಖಾಸಗಿ ಕಂಪನಿ, ಶಾಲಾ-ಕಾಲೇಜು, ನ್ಯಾಯಾಲಯ, ಪೋಲೀಸ್ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಜ್ಯೋತಿರ್ಲಿಂಗಗಳಲ್ಲಿ ಒಂದಾದ ಉಜ್ಜಯಿನಿಯ ಶ್ರೀ ಮಹಾಕಾಲೇಶ್ವರ ದೇವಸ್ಥಾನ, ವಾರಾಣಸಿಯ ಶ್ರೀಕಾಶಿ ವಿಶ್ವೇಶ್ವರ ದೇವಸ್ಥಾನ, ತಿರುಪತಿ ಬಾಲಾಜಿ ದೇವಸ್ಥಾನ, ಕೇರಳದ ಪ್ರಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಹೀಗೆ ಕೆಲವು ಪ್ರಸಿದ್ಧ ದೇವಸ್ಥಾನಗಳಲ್ಲಿ ಅನೇಕ ವರ್ಷಗಳಿಂದ ಭಕ್ತರಿಗಾಗಿ ಸಾತ್ತ್ವಿಕ ವಸ್ತ್ರ ಸಂಹಿತೆ ಜಾರಿಯಿದೆ. ಈಗಾಗಲೇ ಚಿಕ್ಕಮಗಳೂರಿನ ಇತಿಹಾಸ ಪ್ರಸಿದ್ದ ದೇವಿರಮ್ಮನ ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಹಾಗೂ ದೇವಸ್ಥಾನ ಆಡಳಿತ ಮಂಡಳಿ ವಸ್ತ್ರಸಂಹಿತೆ ಜಾರಿ ಮಾಡಿದೆ. ದೇವಿರಮ್ಮನ ದೇವಾಲಯದಲ್ಲಿ ಸ್ಕರ್ಟ್, ಮಿಡಿ, ಸ್ಲೀವ್‌ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ‘ ಎಂದು ಮಾಹಿತಿ ನೀಡಿದರು.
ಮಹಿಳೆಯರು ಚೂಡಿದಾರ, ಲಂಗ-ದಾವಣಿ, ಸಲ್ವಾರ್-ಕುರ್ತಾ ಜೊತೆಗೆ ಸೀರೆ ಮುಂತಾದ ಪಾರಂಪರಿಕ ಸಾತ್ವಿಕ ವೇಷಭೂಷಣಗಳನ್ನು ಧರಿಸಬೇಕು. ಪುರುಷರು ಕುರ್ತಾ, ಧೋತಿ, ಲುಂಗಿ ಅಥವಾ ಪೈಜಾಮ ಅಥವಾ ಸಾಮಾನ್ಯ ಶರ್ಟ್-ಪ್ಯಾಂಟ್‌ಗಳನ್ನು ಹಾಕಬೇಕು. ಪಾಶ್ಚಿಮಾತ್ಯ ಉಡುಪುಗಳಲ್ಲಿ ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ಸ್ಯಾಂಡೋ ವೆಸ್ಟ್, ಜೀನ್ಸ್, ಸ್ಕರ್ಟ್, ಸ್ಲೀವ್‌ಲೆಸ್ ಡ್ರೆಸ್, ನೈಟ್ ಡ್ರೆಸ್, ಸಾಕ್ಸ್ ಇತ್ಯಾದಿ ಉಡುಪುಗಳನ್ನು ಹಾಕಬಾರದು ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ೫೦ ದೇವಸ್ಥಾನಗಲ್ಲಿ ಮಕ್ಕಳು, ಸ್ತ್ರೀ-ಪುರುಷರಿಗೆ ನಿಯಮಿತಿವಾಗಿ ಹಿಂದೂ ಧರ್ಮದ ಶಿಕ್ಷಣ ನೀಡುವ ವರ್ಗಗಳನ್ನು ಸಹ ಪ್ರಾರಂಭ ಮಾಡಲಾಗುವುದು. ಇದಕ್ಕೆ ಸಂಬಂಧಿಸಿ ಒಂದು ಪಠ್ಯಕ್ರಮವನ್ನು ಸಹ ರಚಿಸಲಾಗಿದೆ. ಈಗಾಗಲೇ ರಾಜ್ಯದ ೩೦೦ ಸ್ಥಳಗಳಲ್ಲಿ ಈ ವರ್ಗ ಪ್ರಾರಂಭಿಸಲಾಗಿದೆ. ಮುಂದೆ ಪ್ರತಿ ದೇವಸ್ಥಾನಗಳಲ್ಲಿ ಹಿಂದೂ ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಶ್ರೀ ಕಾಳಿಕಾಂಬ ದೇವಸ್ಥಾನದ ಟ್ರಸ್ಟಿ ನಾಗೇಶ್, ಉತ್ತರ ಉತ್ತಿಷ್ಠ ಗಣಪತಿ ದೇವಸ್ಥಾನದ ಟ್ರಸ್ಟಿ ರಾಘವೇಂದ್ರ ಆಚಾರ್, ರಾಜ ವೆಂಕಟೇಶ್ ಕಾಳಿಕಾಂಬ ದೇವಸ್ಥಾನ ಧರ್ಮದರ್ಶಿಗಳು, ವಿಜಯಲಕ್ಷ್ಮಿ ದೇವಸ್ಥಾನದ ಧರ್ಮದರ್ಶಿ ಶಶಿಧರ್, ಕೋಟೆಬಾಗಿಲು ಆಂಜನೇಯ ದೇವಸ್ಥಾನದ ಧರ್ಮದರ್ಶಿ ಲವ ಕುಮಾರ್, ಪ್ರಸನ್ನ ಗಣಪತಿ ದೇವಸ್ಥಾನದ ಧರ್ಮದರ್ಶಿ ನಾಗೇಂದ್ರ, ಸುಬ್ರಹ್ಮಣ್ಯ ದೇವಸ್ಥಾನ ಧರ್ಮ ದರ್ಶಿಗಳಾದ ಗೋವಿಂದರಾಜು ಇದ್ದರು.
ಹಾಸನದಲ್ಲಿ ನಡೆದ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಅಧಿವೇಶನದಲ್ಲಿ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯ ಬ್ಯಾನರ್‌ನ್ನು ಬಿಡುಗಡೆ ಮಾಡಲಾಯಿತು.