ಮಾದಕವಸ್ತು ವಿರೋಧಿ ದಿನ । ವ್ಯಸನ ಮುಕ್ತ ಸಮಾಜ, ನಶೆ ಮುಕ್ತ ಯಾದಗಿರಿ ಕಾರ್ಯಕ್ರಮ । ಯೋಗ ಪ್ರದರ್ಶನ
ಮಾದಕವಸ್ತುಗಳ ಹಾಗೂ ಮದ್ಯಪಾನ ಸೇವನೆಯಿಂದ ವೈಯಕ್ತಿಕವಾಗಿ ಆರೋಗ್ಯಕ್ಕೆ ಹಾನಿಯಾಗುವ ಜತೆಗೆ ದೇಶದ ಹಿತದೃಷ್ಟಿಯಿಂದಲೂ ಇದು ಹಾನಿಕಾರಕ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ನಗರದ ಲುಂಬಿನಿ ಉದ್ಯಾದಲ್ಲಿ ಶುಕ್ರವಾರ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾದಕವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧ ಅಂತಾರಾಷ್ಟ್ರೀಯ ದಿನಾಚರಣೆ ಹಾಗೂ ವ್ಯಸನ ಮುಕ್ತ ಸಮಾಜ -ನಶೆ ಮುಕ್ತ ಯಾದಗಿರಿ ಕಾರ್ಯಕ್ರಮದಲ್ಲಿ ಮಾತನಾಡಿದದರು.ಉತ್ತಮ ಆರೋಗ್ಯಕ್ಕೆ ಉತ್ತಮ ಹವ್ಯಾಸಗಳು ಬಹುಮುಖ್ಯ. ಮಾದಕವಸ್ತುಗಳ ಸೇವನೆಯಿಂದ ವ್ಯಕ್ತಿಯು ತನ್ನ ಸರ್ವಸ್ವವನ್ನೂ ಕಳೆದುಕೊಳ್ಳುವ ಜತೆಗೆ ಇದು ದೇಶಕ್ಕೂ ಹಾನಿಕಾರಕವಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಅತಿಯಾದ ಸಿಗರೇಟ್, ಗುಟ್ಕಾ, ನಶೆ ಪದಾರ್ಥಗಳ ಸೇವನೆ. ಮದ್ಯಪಾನ ಮಾಡುವ ವ್ಯಕ್ತಿಗಳು ಸಮಾಜ ಹಾಗೂ ಕುಟುಂಬದಿಂದ ದೂರ ಉಳಿಯುತ್ತಾರೆ. ಅಂತಹ ವ್ಯಕ್ತಿಗಳಿಗೆ ಬಗ್ಗೆ ಕುಟುಂಬದಿಂದ ಸಹಾನುಭೂತಿಯಿಂದ ನೋಡದೆ ನಿರಂತರ ನಿಗಾ ಇಡುವ ಮೂಲಕ ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಮಹೇಶ್ ಬಿರಾದಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ನದಾಫ, ಡಾ. ಜಾಕಾ ಮಾತನಾಡಿದರು. ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿಹಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಡಿವೈಎಸ್ಪಿ ಭರತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಿವೈಎಸ್ಪಿ ಜಾವೇದ್ ವಂದಿಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕಿ ಪೂರ್ಣಿಮಾ, ಇತರ ಅಧಿಕಾರಿಗಳು ಇದ್ದರು.