ಮುರಳೀಧರ್ ಶಾಂತಳ್ಳಿ
ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿದ್ದರೂ ಸೋಮವಾರಪೇಟೆ ಪಟ್ಟಣಕ್ಕೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿಗೆ ತತ್ವಾರ ಆಗಿದ್ದು, ಪಟ್ಟಣದ ಜನತೆ ೫ ರು. ನೀರಿಗೆ ಮುಗಿಬಿದ್ದಿದ್ದಾರೆ.
ತಾಲೂಕಿನಾದ್ಯಂತ ಈ ಸಾಲಿನಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿದ್ದು, ಒಂದೆಡೆ ವಿದ್ಯುತ್ ಕೈಕೊಡುತ್ತಿರುವುದು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ತೊಂದರೆಯಾಗುತ್ತಿದೆ. ಪಟ್ಟಣಕ್ಕೆ ಸರಬರಾಜಾಗುತ್ತಿರುವ ದುದ್ದುಗಲ್ ಪಂಪ್‌ಹೌಸ್ ಸುತ್ತಮುತ್ತ ಗಾಳಿಗೆ ಮರಗಳು ಬೀಳುತ್ತಿದ್ದು, ಪಂಪ್‌ಹೌಸ್‌ನಿಂದ ಕುಡಿಯುವ ನೀರು ಸರಬರಾಜು ಮಾಡಲು ಲೈನ್ ಟ್ರಿಪ್ ಆಗುತ್ತಿದೆ. ಜತೆಗೆ ಟ್ರಾನ್ಸ್‌ಫಾರ್ಮರ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಸದ್ಯದಲ್ಲೇ ಹೊಸದನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗುತ್ತೇವೆ, ನಂತರ ಸಮಸ್ಯೆ ನಿವಾರಣೆಯಾಗಬಹುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.ಮತ್ತೊಂದೆಡೆ ಹಾರಂಗಿಯಿಂದ ಸರಬರಾಜು ಮಾಡಲು ಯಡವನಾಡು ಸಮೀಪ ವಿದ್ಯುತ್ ಮಾರ್ಗದಲ್ಲಿ ತೊಂದರೆಯಾಗುತ್ತಿದ್ದು, ಕಳೆದ ಹತ್ತು ದಿನಗಳಿಂದ ನೀರು ಸರಬರಾಜು ಮಾಡಲು ತೊಡಕಾಗುತ್ತಿದೆ. ಕಳೆದ ಎರಡು ದಿನಗಳಿಂದ ಮಳೆಯೂ ಕೂಡ ಕಡಿಮೆಯಾಗಿರುವುದು ನಿತ್ಯ ಬಳಕೆಗೂ ತೊಂದರೆಯಾಗಿದೆ. ಹೀಗಾಗಿ ಪಟ್ಟಣದ ಜನತೆ ಅನಿವಾರ್ಯವಾಗಿ ಕುಡಿಯುವ ನೀರಿನ ಟ್ಯಾಂಕರ್‌ಗಳಿಂದ ೪೦೦ ರು. ಹಣ ಪಾವತಿಸಿ ನೀರನ್ನು ಪಡೆಯುತ್ತಿದ್ದಾರೆ. ಅಲ್ಲದೇ ಕುಡಿಯವ ನೀರಿಗೆ ೫ ರು. ಪಾವತಿಸಿ ಕುಡಿಯುವ ನೀರು ಕೇಂದ್ರಗಳಿಂದ ಕ್ಯೂನಲ್ಲಿ ನಿಂತು ಕ್ಯಾನ್‌ಗಳಲ್ಲಿ ನೀರು ಕೊಂಡೊಯ್ಯುವ ದೃಶ್ಯ ಕಂಡು ಬರುತ್ತಿದೆ.
ನಿತ್ಯ ಬಳಕೆಗೆ ಮತ್ತು ಕುಡಿಯುವ ನೀರಿಗೆ ಇಷ್ಟೆಲ್ಲ ತೊಂದರೆಯಾಗಿದ್ದರೂ, ಕಳೆದ 10 ದಿನಗಳಿಂದ ಪಟ್ಟಣ ಪಂಚಾಯಿತಿಯ ಯಾವೊಬ್ಬ ಸದಸ್ಯರೂ ಕೂಡ ಚಕಾರವೆತ್ತದೆ ಮೌನಕ್ಕೆ ಶರಣಾಗಿದ್ದಾರೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಲೊಂದಿಗೆ ಕೈಜೋಡಿಸಿ ಸಮಸ್ಯೆ ಪರಿಹರಿಸಲು ಯಾವುದೇ ಸಹಕಾರ ನೀಡುತ್ತಿಲ್ಲ. ಅಧಿಕಾರಿಗಳು ಕೂಡ ವಿದ್ಯುತ್ ಮಾರ್ಗ, ವಿದ್ಯುತ್ ಇಲ್ಲದ ಕಾರಣದ ನೆಪವೊಡ್ಡಿ ತಮ್ಮ ಕೈಲಾದ ಕೆಲಸ ಮಾಡಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿಗೆ ತತ್ವಾರವಿದ್ದರೂ ಯಾವೊಬ್ಬ ಪಪಂ ಸದಸ್ಯರೂ ಕೂಡ ಸ್ಪಂದಿಸುತ್ತಿಲ್ಲ. ಅಲ್ಲದೇ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರನ್ನು ಹಣ ಪಾವತಿಸಿ ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ೫ ರು. ಪಾವತಿಸಿ ಕುಡಿಯುವ ನೀರಿನ ಘಟಕದಲ್ಲಿ ಕ್ಯಾನ್ ಮುಖೇನ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿರುವುದು ವಿಷಾದನೀಯ. ಹೀಗಾದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಸೋಮವಾರಪೇಟೆ ಪವಿತ್ರ ಲೋಕೇಶ್ ತಿಳಿಸಿದರು.