ಔರಾದ್‌ಗೆ ಮೂರು ದಿನದಲ್ಲಿ ಕುಡಿವ ನೀರು: ಖಂಡ್ರೆ ಭರವಸೆ

KannadaprabhaNewsNetwork |  
Published : Nov 03, 2026, 01:30 AM IST
ಚಿತ್ರ 2ಬಿಡಿಆರ್‌3ಔರಾದ್‌ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೇಗಂಪೂರ ಕೆರೆ ಹಾಗೂ ನೀರು ಸರಬರಾಜು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ಪ್ರಭು ಚವ್ಹಾಣ್‌ ಇದ್ದರು. | Kannada Prabha

ಸಾರಾಂಶ

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೇಗಂಪೂರ ಕೆರೆ ಹಾಗೂ ನೀರು ಸರಬರಾಜು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಔರಾದ್‌

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೇಗಂಪೂರ ಕೆರೆ ಹಾಗೂ ನೀರು ಸರಬರಾಜು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಅಧಿಕಾರಿಗಳಿಂದ ಔರಾದ್‌ ಪಟ್ಟಣಕ್ಕೆ ತೇಗಂಪೂರ ಗ್ರಾಮದಿಂದ ಔರಾದ್‌ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ ಸಂಪೂರ್ಣ ಹಾಳಾಗಿದ್ದು, ದುರಸ್ಥಿಗಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ₹30 ಲಕ್ಷ ಹಾಗೂ ಪೌರಾಡಳಿತ ಇಲಾಖೆಯಿಂದ ₹50 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಎಂದು ತಿಳಿಸಿದರು.

ಔರಾದ್‌ ಪಟ್ಟಣಕ್ಕೆ ಪ್ರತಿದಿನ ಸುಮಾರು 2 ಎಂಎಲ್‌ಡಿ ನೀರಿನ ಅವಶ್ಯಕತೆಯಿದ್ದು, ತೇಗಂಪೂರ ಕೆರೆಯಲ್ಲಿ ಪ್ರಸ್ತುತ 40 ಎಂಸಿಎಫ್‌ಟಿ ನೀರು ಲಭ್ಯವಿದೆ. ಇದು ಕೆರೆಯ ಒಟ್ಟು ಶೇಖರಣಾ ಸಾಮರ್ಥ್ಯದ ಶೇ. 30ರಷ್ಟಿದೆ ಲಭ್ಯವಿರುವ ನೀರು ಸುಮಾರು ಎಂಟು ತಿಂಗಳವರೆಗೆ ಸಾಕಾಗಲಿದೆ. ಸದರಿ ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡು ಔರಾದ್‌ ಪಟ್ಟಣಕ್ಕೆ ಮೂರು ದಿನದೊಳಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ 15ನೇ ಹಣಕಾಸು ಯೋಜನೆಯಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ 2,928 ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಗಿತ್ತೆ ಮಾಧವ್‌ ವಿಠ್ಠಲರಾವ್‌, ಸಹಾಯಕ ಆಯುಕ್ತ ಅಭಿನವ ಜೈನ್‌, ತಹಸೀಲ್ದಾರ್‌ ಮಹೇಶ ಪಾಟೀಲ್‌, ಇಒ ಕಿರಣ ಪಾಟೀಲ್‌, ಸಿಪಿಐ ರಘುವೀರಸಿಂಗ್‌ ಠಾಕೂರ್‌, ಎಇಇ ಮಾರುತಿ ರಾಠೋಡ್‌, ರವಿ ಕಾರಬಾರಿ, ಸಂಗಮೇಶ ಖಳೂರೆ, ಪಿಎಸ್‌ಐ ಗಿರಿಗೌಡರ, ದಿನೇಶ ಸೇರಿದಂತೆ ಅನೇಕರಿದ್ದರು.

ಸಚಿವರು, ಪ್ರಧಾನ ಕಾರ್ಯದರ್ಶಿಗಳಿಗೆ ದೂರವಾಣಿ :

ಔರಾದ್‌ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪೌರಾಡಳಿತ ಸಚಿವ ಎಚ್‌.ಸಿ.ಬಾಲಕೃಷ್ಣ ಅವರಿಗೆ ದೂರವಾಣಿ ಕರೆ ಮಾಡಿ ಹೆಚ್ಚುವರಿಯಾಗಿ ₹50 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಈಗಾಗಲೇ ₹50 ಲಕ್ಷ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲದೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೂ ದೂರವಾಣಿ ಮೂಲಕ ಮಾತನಾಡಿ, ಜಿಲ್ಲಾಧಿಕಾರಿಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ 30 ಲಕ್ಷ ಅನುದಾನ ಕೋರಿ ವರದಿ ಸಲ್ಲಿಸಿದ್ದು, ಹೆಚ್ಚುವರಿಯಾಗಿ 50 ಲಕ್ಷ ಅನುದಾನ ನೀಡಲು ಅನುಮತಿ ನೀಡುವಂತೆ ಸೂಚಿಸಿದರು.

ನೀರಿಗಾಗಿ 2.5 ಕೋಟಿ ರು., ಗ್ರಾಪಂಗೆ 5 ಕೋಟಿ ರು.ಗೆ ಒತ್ತಾಯ:

ರಿಪೇರಿ ಬದಲು ಹೊಸದಾಗಿ ಕಾಮಗಾರಿ ಕೈಗೊಳ್ಳಲು ತಕ್ಷಣ ₹2.5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಪ್ರಭು ಚವ್ಹಾಣ್‌ ಅವರು ಸಚಿವ ಈಶ್ವರ ಖಂಡ್ರೆ ಅವರಿಗೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಅಲ್ಲದೆ, ಗ್ರಾಮ ಪಂಚಾಯತಿಗಳಲ್ಲಿ ಅನುದಾನದ ಕೊರತೆಯಿಂದ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಔರಾದ್ ತಾಲೂಕಿನ ಗ್ರಾಪಂಗಳಿಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಶಾಸಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಾರದೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಖಂಡ್ರೆ, ಚವ್ಹಾಣ್‌ ಬೆಂಬಲಿಗರ ಜೈಕಾರ: ತೇಗಂಪೂರ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಭೇಟಿ ನೀಡಿದ ವೇಳೆ ಅವರ ಬೆಂಬಲಿಗರು ಜೈಕಾರ ಕೂಗಿ ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ ಶಾಸಕ ಪ್ರಭು ಚವ್ಹಾಣ್‌ ಅವರ ಬೆಂಬಲಿಗರೂ ಚವ್ಹಾಣ್‌ ಪರ ಘೋಷಣೆಗಳನ್ನು ಕೂಗಿದರು. ಕೆಲಕಾಲ ಉಭಯ ನಾಯಕರ ಬೆಂಬಲಿಗರ ಜೈಕಾರದಿಂದ ಸ್ಥಳದಲ್ಲಿ ರಾಜಕೀಯ ವಾತಾವರಣ ಗಮನ ಸೆಳೆಯುವಂತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋಮಾತೆಗೆ ರಾಷ್ಟ್ರಮಾತೆ ಗೌರವ ನೀಡಲು ಆಗ್ರಹ
ನೇಮಕಾತಿಯಲ್ಲಿ ಸಮಾನ ನ್ಯಾಯ ನೀಡಿ