ಜೇವರ್ಗಿಗೆ ಕುಡಿವ ನೀರು, ಕೊನೆಯಂಚಿನ ರೈತರಿಗೆ ಆದ್ಯತೆ: ಸಚಿವ ಡಾ. ಅಜಯ್ ಧರ್ಮಸಿಂಗ್‌

KannadaprabhaNewsNetwork |  
Published : Oct 17, 2026, 01:15 AM IST
ಫೋಟೋ- ಜೇವರ್ಗಿ 1 ಮತ್ತು 2 | Kannada Prabha

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರ ಹಾಗೂ ರಾಯಚೂರು ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆ ಮತ್ತು ಕೊನೆಯಂಚಿನ ರೈತರಿಗೆ ನೀರು ತಲುಪಿಸುವುದಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ ಕೃಷ್ಣಾ ಮೇಲ್ದಂಡೆ ಯೋಜನೆಯ 2026–27ನೇ ಸಾಲಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಜೇವರ್ಗಿ ವಿಧಾನಸಭಾ ಕ್ಷೇತ್ರ ಹಾಗೂ ರಾಯಚೂರು ಜಿಲ್ಲೆಯ ಕುಡಿಯುವ ನೀರಿನ ಅಗತ್ಯತೆ ಮತ್ತು ಕೊನೆಯಂಚಿನ ರೈತರಿಗೆ ನೀರು ತಲುಪಿಸುವುದಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಅಜಯ್ ಧರ್ಮಸಿಂಗ್ ಆಗ್ರಹಿಸಿದರು.ಈ ಕುರಿತಂತೆ ವಿಕಾಸಸೌಧದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳ ನೀರಿನ ಲಭ್ಯತೆ, ಮುಂಗಾರು ಅವಧಿಯ ಬಾಕಿ ನೀರು ಬಿಡುಗಡೆ, ಹಿಂಗಾರು ಹಂಗಾಮು ಹಾಗೂ ಬೇಸಿಗೆಯ ಕುಡಿಯುವ ನೀರಿನ ಅಗತ್ಯತೆ ಕುರಿತು ಚರ್ಚಿಸಲಾಯಿತು ಎಂದು ಡಾ. ಅಜಯ್‌ ಸಿಂಗ್‌ ತಿಳಿಸಿದರು.

ಜೇವರ್ಗಿ ವಿಧಾನಸಭಾ ಕ್ಷೇತ್ರದ ಜೆಬಿಸಿ, ಐಬಿಸಿ, ಎಂಬಿಸಿ ಕಾಲುವೆಗಳ ಕೊನೆಯ ಭಾಗದ ಹಲವು ಗ್ರಾಮಗಳಿಗೆ ಸಮರ್ಪಕವಾಗಿ ನೀರು ತಲುಪದಿರುವುದರಿಂದ ಜನರು ಹಾಗೂ ಜಾನುವಾರುಗಳಿಗೆ ತೊಂದರೆ ಉಂಟಾಗಿದೆ ಎಂದು ಸಚಿವರು ಸಭೆಯ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ, ಮುಂಬರುವ ಬೇಸಿಗೆವರೆಗೆ ಜೇವರ್ಗಿ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರು ಹಾಗೂ ಅಗತ್ಯ ಬಳಕೆಗಾಗಿ 2.5 ಟಿಎಂಸಿ ನೀರು ಕಾಯ್ದಿರಿಸುವಂತೆ ಅವರು ಬೇಡಿಕೆ ಇಟ್ಟಿರುವುದಾಗಿ ಹೇಳಿದರು.

ಜೇವರ್ಗಿ ಶಾಖಾ ಕಾಲುವೆಯ 40ಕಿ.ಮೀ.ಯಿಂದ 86.36ರವರೆಗಿನ ವ್ಯಾಪ್ತಿಯಲ್ಲಿ 50,425 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಈ ಭಾಗಕ್ಕೆ ವಿನ್ಯಾಸದ ಪ್ರಕಾರ 1,033 ಕ್ಯೂಸೆಕ್‌ ನೀರಿನ ಹರಿವು ಅಗತ್ಯವಿದೆ. ಪ್ರಸ್ತುತ ಸುಮಾರು 500 ಕ್ಯೂಸೆಕ್ಸ್ ಮಾತ್ರ ಹರಿಯುತ್ತಿದ್ದು, ಸುಮಾರು 533 ಕ್ಯೂಸೆಕ್ಸ್ ಕೊರತೆ ಇರುವುದನ್ನು ಸಚಿವರು ಪ್ರಸ್ತಾಪಿಸಿದರು.ಜೇವರ್ಗಿ ಮತ್ತು ಮುದಬಾಳ ಶಾಖಾ ಕಾಲುವೆಗಳು 25–30 ವರ್ಷ ಹಳೆಯದಾಗಿದ್ದು, ಸೋರಿಕೆ ಮತ್ತು ನೀರಿನ ನಷ್ಟ ಕಂಡುಬರುತ್ತಿರುವುದರಿಂದ ಬಾಕಿ ಇರುವ ಕಾಲುವೆ ನವೀಕರಣ (ERM) ಕಾಮಗಾರಿಗಳನ್ನು ಆದ್ಯತೆಯಿಂದ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು. ಕೆಂಬಾವಿ ಹೆಡ್ ರೆಗುಲೇಟರ್ ಬಳಿಯ ತಡೆಗೋಡೆಯಿಂದ ನೀರಿನ ಹರಿವಿನ ಮೇಲೆ ಆಗುತ್ತಿರುವ ಪರಿಣಾಮವನ್ನೂ ತಾಂತ್ರಿಕವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ್ ಪಾಟೀಲ್, ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ, ಸಂಸದ ಕುಮಾರ್ ನಾಯಕ್, ಶಾಸಕರಾದ ಉಮೇಶ್ ಮೇಟಿ, ಜೆ.ಟಿ. ಪಾಟೀಲ್, ಜಗದೀಶ್ ಗುಡಗುಂಟಿ, ಇತರೆ ಜನಪ್ರತಿನಿಧಿಗಳು ಹಾಗೂ ಕೃಷ್ಣ ಭಾಗ್ಯ ಜಲ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.10 ದಿನ ನೀರು ಹರಿಸಲು ನಿರ್ಧಾರ: ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 85.61 ಟಿಎಂಸಿ ಜೀವಜಲ ಲಭ್ಯವಿರುವ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ನೀರು ಬಿಡುಗಡೆಯನ್ನು ಅ.25ರವರೆಗೆ ವಿಸ್ತರಿಸಿ, ಅ.26ರಿಂದ ನ.2ರವರೆಗೆ ಕಾಲುವೆ ಬಂದ್ ಮಾಡಿ, ನ. 3ರಿಂದ 12ರವರೆಗೆ ಮತ್ತೆ 10 ದಿನ ನೀರು ಹರಿಸಲು ನಿರ್ಧರಿಸಲಾಯಿತು. ಹಿಂಗಾರು ಹಂಗಾಮಿಗೆ ಅಗತ್ಯವಿರುವಷ್ಟು ನೀರು ಲಭ್ಯವಿಲ್ಲದ ಕಾರಣ ಹಿಂಗಾರು ನೀರಾವರಿ ಪೂರೈಕೆ ಸಾಧ್ಯವಿಲ್ಲ ಎಂದು ಸಭೆ ತೀರ್ಮಾನಿಸಿದ್ದು, ಲಭ್ಯ ನೀರನ್ನು ಕುಡಿಯುವ ನೀರು, ಕೆರೆ ತುಂಬಿಸುವಿಕೆ ಹಾಗೂ ಇತರೆ ಅಗತ್ಯ ಬಳಕೆಗಳಿಗೆ ಕಾಯ್ದಿರಿಸಲು ನಿರ್ಧರಿಸಲಾಯಿತು. ಕೊನೆಯಂಚಿನ ರೈತರಿಗೆ ನೀರು ತಲುಪಲು ಅನಧಿಕೃತ ನೀರು ಎತ್ತುವಿಕೆ ತಡೆಯಲು ಸಂಬಂಧಪಟ್ಟ ಇಲಾಖೆಗಳ ಸಮನ್ವಯದಲ್ಲಿ ನಿಗಾ ವಹಿಸಲು ಸೂಚಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡ್ರಗ್ಸ್ ವಿರೋಧಿ ಜಾಗೃತಿ ರಾಯಭಾರಿಗಳಾಗಿ: ಡೀಸಿ ಡಾ.ಅನುರಾಧ
ಜಿ.ಪಂ ಮೀಸಲಾತಿ ಪಾರದರ್ಶಕತೆ ಪರಿಶೀಲಿಸಿ: ಇನಾಮ್ದಾರ್‌