ತುಂಗಭದ್ರಾ ಜಲಾಶಯದಿಂದ ಜೂನ್‌ವರೆಗೆ ಕುಡಿಯುವ ನೀರು-ಸಲಹಾ ಸಮಿತಿ ತೀರ್ಮಾನ

KannadaprabhaNewsNetwork |  
Published : Jan 20, 2024, 02:02 AM IST
ಜೂನ್‌ವರೆಗೆ ಕುಡಿವ ನೀರು: ಸಲಹಾ ಸಮಿತಿ ತೀರ್ಮಾನ | Kannada Prabha

ಸಾರಾಂಶ

ಹೂಳೆತ್ತುವ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೂಳು ಎತ್ತಲು ಸಾಧ್ಯವಿಲ್ಲ ಎಂದು ಈ ಹಿಂದೆಯೇ ತಾಂತ್ರಿಕ ಸಮಿತಿ ವರದಿ ನೀಡಿದೆ. ಹಾಗಾಗಿ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎಂಬುದು ನಮ್ಮ ಬೇಡಿಕೆ ಕೂಡ. ಇದಕ್ಕೆ ನೆರೆಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ ಕೂಡ ಒಪ್ಪಿಗೆ ನೀಡಬೇಕು.

ಕೊಪ್ಪಳ: ವಿಜಯನಗರ ಕಾಲುವೆ ಒಳಗೊಂಡಂತೆ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಜೂನ್ ಅಂತ್ಯದವರೆಗೆ ಕುಡಿಯಲು ಮತ್ತು ಬೆಳೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಜಲಾಶಯದ ನೀರಿನ ಸಾಮರ್ಥ್ಯ 10.151 ಟಿಎಂಸಿ ಇದೆ. ಇದರಲ್ಲಿ ಡೆಡ್ ಸ್ಟೋರೆಜ್ 2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 2.481 ಟಿಎಂಸಿ, ಆಂಧ್ರಪ್ರದೇಶದ ಪಾಲು 2.851 ಡಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ‌ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ ಎಂದರು.ವಿಜಯನಗರ ಜಿಲ್ಲೆಯಲ್ಲಿ ಬಾಳೆ, ಕಬ್ಬು ಬೆಳೆ ಬೆಳೆದು ನಿಂತಿದೆ. ಕುಡಿಯಲು ಕಾಯ್ದಿರಿಸಲಾದ 0.500 ಟಿಎಂಸಿ ನೀರಿನಲ್ಲಿ ಜ.22ರಿಂದ ಏ.30ರ ತನಕ 50 ಕ್ಯೂಸೆಕ್ಸ್ ನಂತೆ (ಕುಡಿಯುವ ನೀರು ಒಳಗೊಂಡು) ಹಾಗೂ ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ನೀರನ್ನು ಫೆ.15ರಿಂದ ಫೆ.25ರವರೆಗೆ, 0.600 ಟಿಎಂಸಿ ನೀರನ್ನು ಏ.10ರಿಂದ ಏ.20ರವರೆಗೆ 700 ಕ್ಯೂಸೆಕ್ಸ್ ನಂತೆ 0.600 ಟಿಎಂಸಿಯನ್ನು ಕುಡಿಯುವ ನೀರಿನ‌ ಸಲುವಾಗಿ ಹರಿಸಲಾಗುವುದು ಎಂದು ತಿಳಿಸಿದರು‌.ಇನ್ನು ಜ.21ರಿಂದ ಜ.31ರವರೆಗೆ 100 ಕ್ಯೂಸೆಕ್ಸ್ ನಂತೆ ಮತ್ತು ಫೆಬ್ರವರಿ ಹಾಗೂ ಮಾರ್ಚ್ ತಿಂಗಳಿಗೆ 10 ದಿನಗಳಿಗೊಮ್ಮೆ 100 ಕ್ಯೂಸೆಕ್ಸ್ ನಂತೆ ಕುಡಿಯುವ ನೀರಿನ ಸಲುವಾಗಿ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು ಎಂದರು.

ರಾಯ ಬಸವಣ್ಣ ಕಾಲುವೆಯಿಂದ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜ.21ರಿಂದ ಜ.30ರವರೆಗೆ 100 ಕ್ಯೂಸೆಕ್ಸ್ ನಂತೆ ಆನ್/ಆಫ್ ನಂತೆ ನೀರು ಹರಿಸಲಾಗುವುದು ಎಂದು ಮಾಹಿತಿ ನೀಡಿದರು.ಉಳಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಂದ ನೀರಿಗೆ ಬೇಡಿಕೆ ಇಟ್ಟಂತೆ ಕುಡಿಯಲು ನೀರು ಹರಿಸಲಾಗುವುದು. ಎರಡನೇ ಬೆಳೆಗೆ ನೀರು ನೀಡಲು‌ ಸಾಧ್ಯವೇ ಇಲ್ಲ ಎಂಬುದನ್ನು ಹೇಳಲಾಗಿದೆ. ನಿಂತ ಬೆಳೆಗೆ ನೀರು ಬಿಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹೂಳೆತ್ತುವ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹೂಳು ಎತ್ತಲು ಸಾಧ್ಯವಿಲ್ಲ ಎಂದು ಈ ಹಿಂದೆಯೇ ತಾಂತ್ರಿಕ ಸಮಿತಿ ವರದಿ ನೀಡಿದೆ. ಹಾಗಾಗಿ ಸಮಾನಾಂತರ ಜಲಾಶಯ ನಿರ್ಮಿಸಬೇಕು ಎಂಬುದು ನಮ್ಮ ಬೇಡಿಕೆ ಕೂಡ. ಇದಕ್ಕೆ ನೆರೆಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯ ಕೂಡ ಒಪ್ಪಿಗೆ ನೀಡಬೇಕು. ಹಿಂದಿನ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿ‌ ಸಮಾನಾಂತರ ಜಲಾಶಯ ನಿರ್ಮಾಣಕ್ಕೆಂದು ಅನುದಾನ ಘೋಷಿಸಿ, ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಆದರೆ ಹಣ ಇಟ್ಟರೆ ಸಾಲದು, ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಮಂತ್ರಿಗಳು ಕುಳಿತು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಸಚಿವರಾದ ಜಮೀರ್ ಅಹ್ಮದ್ ಖಾನ್, ಬೋಸ್ ರಾಜ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಎಚ್.ಆರ್. ಗವಿಯಪ್ಪ, ಜಿ.ಜನಾರ್ದನ ರೆಡ್ಡಿ, ರೈತ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ