ನೀರಾವರಿ ಪ್ರದೇಶದಲ್ಲಿಯೇ ಕುಡಿವ ನೀರಿಗೆ ವರಿ

KannadaprabhaNewsNetwork |  
Published : Apr 14, 2026, 02:30 AM IST
ಫೋಟೋ-೧೩ಕೆಆರ್‌ಟಿ-೧: ಕಾರಟಗಿ ಹೊರವಲಯದ ರಾಜೀವಗಾಂಧಿ ಸಬ್‌ಮಿಷನ್‌ನ ಬೃಹತ್ ಕೆರೆ ನಿಧಾನಗತಿಯಲ್ಲಿ ನೀರು ಸಂಗ್ರಹಕಾರ್ಯ ನಡೆದಿದ್ದು ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ವೀಕ್ಷಣೆ ಮಾಡುತ್ತಿರುವುದು.೧೩ಕೆಆರ್‌ಟಿ-೧ಎ: ಕಾರಟಗಿ ರಾಜೀವಗಾಂಧಿ ಸಬ್‌ಮಿಷನ್‌ನ ಫಿಲ್ಟರ್‌ಬೆಡ್ ನೀರಿಲ್ಲದೆ ಪಾಚುಗಟ್ಟಿರುವ ಸ್ಥಿತಿ.೧೩ಕೆಆರ್‌ಟಿ೧ಬಿ: ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ  ಅಳವಡಿಸಿದ ಜೆಜೆಎಂ ನಳ ಬಿಸಿ ಗಾಳಿ ಸೂಸುತ್ತಿವೆ. | Kannada Prabha

ಸಾರಾಂಶ

ನೀರಿನ ಮೂಲಗಳ ಕೊರತೆ ಆಗದಿದ್ದರೂ ಸಂಪನ್ಮೂಲಗಳ ಸದ್ಬಳಕೆಯ ಇಚ್ಛಾಶಕ್ತಿ ಕೊರತೆ ಮತ್ತು ಅನುದಾನ ದುರುಪಯೋಗದಿಂದ ಪ್ರತಿ ವರ್ಷವೂ ಬೇಸಿಗೆಯಲ್ಲಿ ನೀರಿನ ತತ್ವಾರ ಉಂಟಾಗುತ್ತಿದೆ.

ಎ.ಜಿ. ಕಾರಟಗಿ

ಕಾರಟಗಿ:

ತುಂಗಭದ್ರಾ ನದಿ ಮತ್ತು ಎಡದಂಡೆ ನಾಲೆಯಿಂದ ಯಥೇಚ್ಛವಾಗಿ ನೀರಿನ ಮೂಲಗಳಿದ್ದರೂ, ಸಂಪೂರ್ಣ ನೀರಾವರಿ ವ್ಯಾಪ್ತಿಯ ತಾಲೂಕಿನಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅಧಿಕಾರಿಗಳ ನಿರ್ಲಕ್ಷ್ಯ, ಅನುದಾನ ದುರ್ಬಳಕೆಯಿಂದ ಈಗ ಕುಡಿಯುವ ನೀರಿನ `ವರಿ’ ಉಂಟಾಗಿದೆ.

ನೀರಿನ ಮೂಲಗಳ ಕೊರತೆ ಆಗದಿದ್ದರೂ ಸಂಪನ್ಮೂಲಗಳ ಸದ್ಬಳಕೆಯ ಇಚ್ಛಾಶಕ್ತಿ ಕೊರತೆ ಮತ್ತು ಅನುದಾನ ದುರುಪಯೋಗದಿಂದ ಪ್ರತಿ ವರ್ಷವೂ ಬೇಸಿಗೆಯಲ್ಲಿ ನೀರಿನ ತತ್ವಾರ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಮತ್ತು ಅಧಿಕಾರಸ್ಥರು ಲಕ್ಷಾಂತರ ರು. ಅನುದಾನವನ್ನು ದಾಖಲೆಗಳಲ್ಲಿ ವ್ಯಯ ಮಾಡಿದರೂ ನೀರಿನ ಬವಣೆ ತಪ್ಪಿಲ್ಲ.

ಗಾಳಿ ಬರುತ್ತಿದೆ:

ತಾಲೂಕಿನ ಸಿದ್ದಾಪುರ ಮತ್ತು ಯರಡೋಣಾ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಆದರೆ, ಹಾಕಿದ ಪೈಪ್‌ಲೈನ್‌, ನಳದಲ್ಲಿ ನೀರು ಬರದೆ ಬಿಸಿ ಗಾಳಿ ಬರುತ್ತಿದೆ.

ಸಚಿವರ ತವರು:

ಸಚಿವ ಶಿವರಾಜ್‌ ತಂಗಡಗಿ ಕ್ಷೇತ್ರದಲ್ಲಿಯೇ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗಿದ್ದರೂ ಅಧಿಕಾರಿಗಳು ಮಾತ್ರ ಗಂಭೀರವಾಗಿ ಪರಿಗಣಿಸಿಲ್ಲ. ಕಾರಟಗಿ ಬಳಿ ರಾಜೀವಗಾಂಧಿ ಸಬ್ ಮಿಷನ್‌ ಕೆರೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿದ್ದು ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯಯಿಸಲಾಗುತ್ತಿದೆ. ಆದರೆ, ಶುದ್ಧೀಕರಣ ಘಟಕ ಮುಚ್ಚಿ 2 ವರ್ಷಗಳಾಗಿವೆ ಎನ್ನುತ್ತವೆ ಅಧಿಕೃತ ಮೂಲಗಳು. ಕಾರಟಗಿ ಮತ್ತು ನವಲಿ ಸೇರಿ ಒಟ್ಟು ೫೧ ಹಳ್ಳಿಗಳಿಗೆ ಇಲ್ಲಿಂದಲೇ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದಲೇ ತುಂಗಭದ್ರಾ ಎಡದಂಡೆ ನಾಲೆಯಿಂದ ನೇರವಾಗಿ ಬೃಹತ್ ಕೆರೆಗೆ ನೀರು ಹರಿಸಿ ಶುದ್ಧೀಕರಿಸಲಾಗುತ್ತಿತ್ತು. ಇಡೀ ತಾಲೂಕಿಗೆ ಈ ಕೆರೆಯೊಂದೇ ಕುಡಿಯುವ ನೀರು ಪೂರೈಕೆ ಮಾಡಬಹುದಿತ್ತು. ಆದರೆ, ಗ್ರಾಪಂಗಳಿಗೆ ಕೆರೆಯಿಂದ ನೀರು ಪೂರೈಕೆ ಎನ್ನುವುದು ಕಾಗದದಲ್ಲಿ ಮಾತ್ರ ಸಾಧನೆಯಾಗಿದೆ. ಶುದ್ಧೀಕರಣದ ಯಂತ್ರಗಳು ತುಕ್ಕು ಹಿಡಿದು ಎರಡು ವರ್ಷಗಳಾಗಿದ್ದು ನಿರ್ವಹಣೆ ವೈಫಲ್ಯ ಎದ್ದು ಕಾಣುತ್ತಿದೆ. ಹೀಗಾಗಿ ಕಾರಟಗಿ ಪಟ್ಟಣ ಸೇರಿದಂತೆ ಬಹುತೇಕ ಗ್ರಾಮಗಳಿಗೆ ನಿತ್ಯ ಮಲಿನ, ಪಾಚುಗಟ್ಟಿದ ನೀರೇ ಗತಿ.

ಭೇಟಿ ನೀಡಿದಷ್ಟೇ ಬಂತು:

ಜಿಲ್ಲೆಗೆ ವರ್ಗಾವಾಗಿ ಬಂದ ತಕ್ಷಣ ಕೆರೆ ವೀಕ್ಷಣೆಗೆ ಬಂದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮತ್ತು ಜಿಪಂ ಸಿಇಒ ವರ್ಣಿತ ನೇಗಿ ಕಾರಟಗಿ ಹೊರವಲಯದ ರಾಜೀವಗಾಂಧಿ ಸಬ್ ಮಿಷನ್ ಘಟಕಕ್ಕೆ ಭೇಟಿ ನೀಡಿದ್ದರು. ಅಂದು ಕೆರೆ, ಶುದ್ಧೀಕರಣ ಘಟಕದ ಪರಿಸ್ಥಿತಿ ಅವಲೋಕಿಸಿದ್ದರು. ಈ ಯೋಜನೆ ಅನುದಾನ ಲಭ್ಯತೆ, ವೆಚ್ಚದ ಕುರಿತು ಮಾಹಿತಿ ಪಡೆದರು. ಆದರೆ. ಭೇಟಿ ನೀಡಿ ವರ್ಷ ಗತಿಸಿದ್ದರೂ ಕೆರೆ ನೀರು ಸಂಗ್ರಹ, ನಿರ್ವಹಣೆ, ಶುದ್ಧೀಕರಣ ಘಟಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಸಮಸ್ಯಾತ್ಮಕ ಗ್ರಾಮ:

ಹುಳ್ಕಿಹಾಳ, ಹುಳ್ಕಿಹಾಳ ಕ್ಯಾಂಪ್, ಮರ್ಲಾನಹಳ್ಳಿ ವ್ಯಾಪ್ತಿಯ ಜೂರಟಗಿ, ಮೈಲಾಪುರ ಗ್ರಾಪಂ ವ್ಯಾಪ್ತಿಯ ಗುಡೂರು, ಬರಗೂರು ಗ್ರಾಪಂದ ಅರುಣೋದಯ ಕ್ಯಾಂಪ್‌ಗಳಲ್ಲಿ ಈಗಲೂ ಕುಡಿಯುವ ನೀರಿನ ಸಮಸ್ಯೆ ದೊಡ್ಡದಿದ್ದು ಖಾಸಗಿ ಬೋರ್‌ವೆಲ್‌ ಮೂಲಕ ನೀರು ಪೂರೈಸಲು ಆಯಾ ಪಂಚಾಯಿತಿಗಳು ಮುಂದಾಗಿವೆ.

ಹಾಹಾಕಾರ:

ಸಿದ್ದಾಪುರ ಹೋಬಳಿ ಗುಂಡೂರು ಗ್ರಾಮಕ್ಕೆ ರಾಜೀವಗಾಂಧಿ ಸಬ್ ಮಿಷನ್‌ನಿಂದ ನೀರು ಪೂರೈಕೆಯಾಗುತ್ತಿದೆ ಎನ್ನುವುದಷ್ಟೇ. ಆದರೆ ಮಾರ್ಗ ಮಧ್ಯ ನೀರುಗಳ್ಳತನ ಆಗುತ್ತಿದೆ. ಹೀಗಾಗಿ ನೀರಿನ ಹಾಹಾಕಾರ ಶುರುವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.ಗುಂಡೂರಿನಲ್ಲಿ ಎರಡು ಬೃಹತ್‌ ನೀರಿನ ಟ್ಯಾಂಕ್‌ಗಳಿದ್ದು ಇಲ್ಲಿಗೆ ನೀರು ಸರಬರಾಜು ಮಾಡುವ ಮುಖ್ಯಪೈಪ್‌ಲೈನ್‌ನಿಂದ ನೀರುಗಳ್ಳನವಾಗುತ್ತಿದೆ. ಹೀಗಾಗಿ ೩ನೇ ವಾರ್ಡ್‌ನಲ್ಲಿ ನೀರಿನ ಪರಿಸ್ಥಿತಿ ಗಂಭೀರವಾಗಿದ್ದು ನೀರಿಗಾಗಿ ನಿತ್ಯ ಹೋರಾಟ ಮಾಡುವಂತೆ ಆಗಿದೆ.

ಮೌಲಸಾಬ್, ಶ್ರೀಶೈಲ ಗ್ರಾಮಸ್ಥರು.ಕಾರಟಗಿ ಪಟ್ಟಣಕ್ಕೆ ನೀರು ಪೂರೈಸುವ ರಾಜೀವಗಾಂಧಿ ಸಬ್ ಮಿಷನ್ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ್ದು, 2 ವರ್ಷಗಳಿಂದ ನೀರು ಶುದ್ಧೀಕರಣ ಘಟಕ ಸ್ಥಗಿತವಾಗಿದೆ ಎಂಬ ವಿಷಯ ಗಮನಕ್ಕೆ ಬಂದಿದೆ. ಈ ಬೃಹತ್ ಕೆರೆಗೆ ಎಡದಂಡೆ ನಾಲೆಯಿಂದ ನೀರು ನಿಧಾನವಾಗಿ ಬರುತ್ತಿದೆ. ಸಂಗ್ರಹವಾಗಿರುವ ನೀರು ನಿರ್ವಹಣೆ ವೈಫಲ್ಯದಿಂದ ಪಾಚುಗಟ್ಟಿದ್ದು ಇದನ್ನೇ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೆ ತರಲಾಗಿದೆ.

ಮಂಜುನಾಥ ಮೇಗೂರು ಅಧ್ಯಕ್ಷ, ಪುರಸಭೆ ಕಾರಟಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು