ಚಿಂಚೋಳಿ ಜನರಿಗೆ ಕುಡಿವ ನೀರಿನ ಬವಣೆ ತಪ್ಪಿಲ್ಲ

KannadaprabhaNewsNetwork |  
Published : May 22, 2024, 12:58 AM IST
ಪಟ್ಟಣದ ನಗರೋತ್ಥಾನ  ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ | Kannada Prabha

ಸಾರಾಂಶ

ಚಿಂಚೋಳಿ ಪುರಸಭೆಗೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಕೊಂಡಿರುವ ನೀರು ಸರಬರಾಜು ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪಟ್ಟಣದ ಜನರ ಮನೆಗೆ ಒಂದು ಹನಿ ನೀರು ಹರಿಯದೇ ಯೋಜನೆಗೆ ಗ್ರಹಣ ಹಿಡಿದಿದೆ.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಪಟ್ಟಣದ ಸಾರ್ವಜನಿಕರಿಗೆ ಕುಡಿವ ನೀರು ಪೂರೈಕೆ ಮಾಡುವುದಕ್ಕಾಗಿ ಪುರಸಭೆಗೆ ನಗರೋತ್ಥಾನ ಯೋಜನೆ ಅಡಿಯಲ್ಲಿ ಕೈಕೊಂಡಿರುವ ನೀರು ಸರಬರಾಜು ಯೋಜನೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪಟ್ಟಣದ ಜನರ ಮನೆಗೆ ಒಂದು ಹನಿ ನೀರು ಹರಿಯದೇ ಯೋಜನೆಗೆ ಗ್ರಹಣ ಹಿಡಿದಿದೆ.

ಪಟ್ಟಣದ ಜನಸಂಖ್ಯೆ ಅಂದಾಜು ೨೨,೩೦೦ ಜನಸಂಖ್ಯೆ ಇರುವುದರಿಂದ ಪಟ್ಟಣಕ್ಕೆ ಮುಲ್ಲಾಮಾರಿ ನದಿಯ ಮೂಲದಿಂದ ಪ್ರತಿದಿನಕ್ಕೆ೧.೮೦ ಎಂ.ಎಲ್.ಡಿ ಹಾಗೂ ಚಂದಾಪೂರ ಜಲಸಂಗ್ರಹಣೆಯಿಂದ ೧೮೦ ಎಂ.ಎಲ್.ಡಿ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ.

ಚಿಂಚೋಳಿ ಪಟ್ಟಣಕ್ಕೆ ನೀರು ಸರಬರಾಜು ಒದಗಿಸುವುದಕ್ಕಾಗಿ ನಗರೋತ್ಥಾನ ಯೋಜನೆ ಅಡಿಯಲ್ಲಿ ೫.೫೫ ಕೋಟಿ ರು. ಮಂಜೂರಿಯಾಗಿದೆ. ಕೆಳದಂಡೆ ಮುಲ್ಲಾಮಾರಿ ನದಿಯಿಂದ ನೀರು ಪೂರೈಕೆ ಮಾಡುವುದಕ್ಕಾಗಿ ೨೦ ಎಚ್‌ಡಬ್ಲೂವಿಟಿ ಪಂಪ್ ಆಳವಡಿಸಲಾಗಿದೆ. ೨.೫ ಎಂ.ಎಲ್‌.ಡಿ. ಸಾಮರ್ಥ್ಯದ ತಂತ್ರಜ್ಞಾನದ ಜಲ ಶುದ್ಧೀಕರಣ ಘಟಕ ಒಂದು ಲಕ್ಷ ಸಾಮರ್ಥ್ಯದ ಪಂಪ್‌ ನಿರ್ಮಾಣ ಹಾಗೂ ೩೦ ಎಚ್.ಪಿ. ಸಾಮರ್ಥ್ಯದ ಶುದ್ಧ ನೀರು ಸೆಂಟ್ರಿಪಿಗಲ್, ಪಂಪ್‌ಸೆಟ್‌ ಅಳವಡಿಸುವುದಕ್ಕೆ ಉದ್ದೇಶಿಸಲಾಗಿದೆ. ಆದರೆ ಯೋಜನೆಗೆ ಇನ್ನೂ ಚಾಲನೆ ಇಲ್ಲದೇ ನಿಂತು ಹೋಗಿರುವುದರಿಂದ ಮನೆ ಮನೆಗೆ ನಳದ ನೀರು ಸಾರ್ವಜನಿಕರಿಗೆ ಯೋಜನೆಯ ಲಾಭ ದೊರೆಯುತ್ತಿಲ್ಲ.

ಭೋಗಲಿಂಗದಳ್ಳಿ ರಸ್ತೆಯ ವಾರ್ಡ್‌ ನಂ. ೧ರಲ್ಲಿ ೫.ಲಕ್ಷ ಲೀಟರ್‌ ಮೇಲ್ಮಟ್ಟ ಜಲ ಸಂಗ್ರಹಗಾರ ನಿರ್ಮಿಸಲಾಗಿದೆ. ವಾರ್ಡ್‌ ಸಂಖ್ಯೆ ೧, ೨, ೩, ೧೦, ೧೨ ಹಾಗೂ ೬ಕ್ಕೆ ನೀರು ಸರಬರಾಜು ಮಾಡಲು ಯೋಜನೆ ಮುಖ್ಯ ಉದ್ದೇಶವಾಗಿದೆ. ಆದರೆ, ವಾರ್ಡ್‌ಗಳಲ್ಲಿ ಪೈಪ್‌ಲೈನ್‌ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲವೆಂದು ಪಟ್ಟಣದ ಸಾರ್ವಜನಿಕರು ಅನೇಕ ಸಲ ಶಾಸಕರಿಗೆ ಮತ್ತು ಸಂಸದರಿಗೆ ದೂರು ಸಲ್ಲಿಸಿದ್ದಾರೆ. ಆದರೆ ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿಲ್ಲವೆಂದು ಹೊಸ ಬಡಾವಣೆ ನಾಗರೀಕರು ದೂರಿದ್ದಾರೆ. ಪಟ್ಟಣದ ಪ್ರತಿಯೊಂದು ಮನೆಗಳಿಗೆ ಶುದ್ಧ ನೀರು ಪೂರೈಕೆಗಾಗಿ ೫.೫೫ ಕೋಟಿ ರು. ಅನುದಾನ ಮಂಜೂರಿಗೊಳಿಸಿದ ಸಂಸದ ಡಾ. ಉಮೇಶ ಜಾಧವ್, ಶಾಸಕ ಡಾ. ಅವಿನಾಶ ಜಾಧವ್ ಯೋಜನೆ ಕಾಮಗಾರಿ ಗುಣಮಟ್ಟದ ಬಗ್ಗೆ ಒಮ್ಮೆಯೂ ಭೇಟಿ ನೀಡಿಲ್ಲವೆಂದು ಪುರಸಭೆ ಸದಸ್ಯರು ಅಸಮಾಧಾನಕ್ಕೆ ಕಾರಣವಾಗಿದೆ.

ಬಡಿದರ್ಗಾ, ಚೋಟಿದರ್ಗಾ, ಬೊಯಿಗಲ್ಲಿ ವಾರ್ಡ್‌ಗಳಲ್ಲಿ ಪೈಪ್‌ಲೈನ್‌ಗಾಗಿ ರಸ್ತೆಗಳಲ್ಲಿ ತೆಗ್ಗು ಅಗೆದು ಬಿಡಲಾಗಿದೆ. ಆದರೆ ಅದನ್ನು ಮುಚ್ಚಿಸುವ ಕಾರ್ಯ ಮಾಡಿಲ್ಲ. ಕುಡಿವ ನೀರಿನ ಯೋಜನೆಗಾಗಿ ಕೋಟ್ಯಂತರ ರು. ಖರ್ಚು ಮಾಡಲಾಗಿದೆ. ಆದರೆ ಮನೆಗಳ ನಳಕ್ಕೆ ಒಂದು ಹನಿ ನೀರು ಹರಿದು ಬಂದಿಲ್ಲ, ಮುಲ್ಲಾಮಾರಿ ನದಿಯಲ್ಲಿ ೧೯೫೪ರಲ್ಲಿ ನಿರ್ಮಿಸಿದ ಹಳೆಯ ಶುದ್ಧೀಕರಣವೇ ಜನರಿಗೆ ಇಂದಿಗೂ ಆಧಾರವಾಗಿದೆ. ಹೊಸ ಯೋಜನೆಯಿಂದ ಪಟ್ಟಣದ ಸಾರ್ವಜನಿಕರಿಗೆ ಕುಡಿವ ನೀರಿನ ವ್ಯವಸ್ಥೆ ಇನ್ನು ಸಿಕ್ಕಿಲ್ಲವೆಂದು ಸಾರ್ವಜನಿಕರ ದೂರಾಗಿದೆ.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ